ಭೌತಿಕ ತರಗತಿ ಪುನಾರಂಭಕ್ಕೆ ಉತ್ತಮ ಪ್ರತಿಕ್ರಿಯೆ: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ. ಸಿ. ನಾಗೇಶ್

Update: 2021-08-23 14:36 GMT

ಬೆಂಗಳೂರು:ಆ, 23: ಒಂದೂವರೆ ವರ್ಷದ ಬಳಿಕ 9 ಮತ್ತು 10 ತರಗತಿ ಹಾಗೂ ಪ್ರಥಮ ಮತ್ತು ದ್ವಿತೀಯ ಪಿಯು ಭೌತಿಕ ತರಗತಿಗಳು ಪುನಾರಂಭವಾಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಬಿ.ಸಿ ನಾಗೇಶ್ ತಿಳಿಸಿದರು.

ಶಾಲೆ ಪುನಾರಂಭದ ಮೊದಲ ದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಐಟಿ ಮತ್ತು ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಸಚಿವರಾದ ಡಾ. ಸಿ. ಎನ್ ಅಶ್ವತ್ಥನಾರಾಯಣ ಅವರೊಂದಿಗೆ ಬೆಂಗಳೂರಿನ ಎರಡು ಶಾಲೆಗಳು ಭೇಟಿ ಸೇರಿದಂತೆ ಒಟ್ಟು ಐದು ಶಾಲೆಗಳಿಗೆ ಭೇಟಿ ನೀಡಿದ ಸಚಿವರು, ವಿದ್ಯಾರ್ಥಿಗಳಿಗೆ ಶುಭಾಶಯ ತಿಳಿಸಿ ಅಭಿಪ್ರಾಯ ಸಂಗ್ರಹಿಸಿದರು.

‘ಕಳೆದ ಒಂದೂವರೆ ವರ್ಷದಿಂದ ಕೋವಿಡ್-19 ಕಾರಣ ವಿದ್ಯಾರ್ಥಿಗಳು ಭೌತಿಕ ತರಗತಿಗಳಿಂದ ದೂರವಿದ್ದದ್ದು ಅತ್ಯಂತ ಬೇಸರದ ಸಂಗತಿ. ಆದರೆ, ಈಗ ಶಾಲೆ ಆರಂಭದ ಬಳಿಕ ಮಕ್ಕಳ ಉತ್ಸಾಹ ನೋಡಿ ಖುಷಿಯಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭೌತಿಕ ತರಗತಿಗಳಿಗೆ ಹಾಜರಾಗುವ ವಿಶ್ವಾಸವಿದೆ’ ಎಂದು ಸಚಿವರು ತಿಳಿಸಿದರು.

'ಶಾಲೆಗೆ ಬಂದಿದ್ದ ಮಕ್ಕಳು ಖುಷಿಯಾಗಿದ್ದರು. ಒಂದೂವರೆ ವರ್ಷಗಳಿಂದ ಸ್ನೇಹಿತರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವು. ಆಫ್‌ಲೈನ್ ಶಿಕ್ಷಣ ಇಲ್ಲದೇ ಇರುವುದಕ್ಕೆ ತೀವ್ರ ಬೇಸರವಾಗಿತ್ತು. ಆದರೆ, ಈಗ ಶಾಲೆ ಆರಂಭವಾಗಿರುವುದು ಖುಷಿಯಾಗಿದೆ. ಸ್ನೇಹಿತರು, ಶಿಕ್ಷಕರ ಭೇಟಿ, ನೇರವಾಗಿ ಪಾಠ ಕೇಳಿಸಿಕೊಂಡರೆ ಪಾಠ ಚೆನ್ನಾಗಿ ಅರ್ಥವಾಗುತ್ತದೆ’ ಎಂದು ಶಾಲೆಗಳ ಭೇಟಿ ವೇಳೆ ಸಚಿವರೊಂದಿಗೆ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯ ಹಂಚಿಕೊಂಡರು.

‘ಶಿಕ್ಷಕರು ಕೂಡ ಸಂತೋಷಗೊಂಡಿದ್ದಾರೆ. ಶಿಕ್ಷಣದ ನಿರಂತರತೆ ತಪ್ಪಿ ಹೋಗುತ್ತದೆ ಎಂಬ ಆತಂಕವಿತ್ತು. ಆದರೆ, ಶಾಲೆ ಆರಂಭವಾಗಿರುವುದು ಅವರ ಆತಂಕವನ್ನು ನಿವಾರಿಸಿದೆ. ಮಕ್ಕಳು ನಿಯಮಗಳನ್ನು ಪಾಲಿಸುತ್ತೇವೆ ಎಂದು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಮಕ್ಕಳೊಂದಿಗೆ ಶಾಲೆ ಮುಂದುವರೆಯುತ್ತದೆ. ಶಿಕ್ಷಣ ಇಲಾಖೆ, ಶಿಕ್ಷಕರು,  ಪಾಲಕರು ಧೈರ್ಯ ತುಂಬಿ ಕಳುಹಿಸಿಕೊಟ್ಟಿದ್ದಾರೆ. ಹೀಗಾಗಿ, ಯಶಸ್ವಿಯಾಗುವ ವಿಶ್ವಾಸ ಇದೆ’ ಎಂದು ಸಚಿವರು ಹೇಳಿದರು. 

‘ಶಾಲೆಗಳಲ್ಲಿ ಕೋವಿಡ್ ಸುರಕ್ಷತಾ ಕ್ರಮಗಳು ನಿರಂತರವಾಗಿ ಕಟ್ಟು ನಿಟ್ಟಾಗಿ ಪಾಲನೆಯಾಗುವುದನ್ನು ಪರಿಶೀಲನೆ ನಡೆಸಲು ಪರೀಕ್ಷೆಗಳ ಸಂದರ್ಭದಲ್ಲಿ ರಚಿಸುವಂತೆ ಎಲ್ಲ ಜಿಲ್ಲೆಗಳಲ್ಲಿ ‘ನಿಗಾ ಸಮಿತಿ’ ರಚಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಸೂಚಿಸಲಾಗಿದೆ. ಸಮಿತಿ ಸದಸ್ಯರು ಶಾಲೆಗಳಿಗೆ ತೆರಳಿ ಕೋವಿಡ್-19 ಪ್ರಮಾಣಿತ ಕಾರ್ಯಾಚರಣೆ ವಿಧಾನಗಳನ್ನುಪಾಲಿಸುತ್ತಿರುವ ಕುರಿತು ಪರಿಶೀಲಿಸಬೇಕು’ ಎಂದು ಸಚಿವರು ತಿಳಿಸಿದರು.

ಮಲ್ಲೇಶ್ವರದಲ್ಲಿರುವ ಸರಕಾರಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಮುಖಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಸಸಿ ನೆಡುವ ಮೂಲಕ ತರಗತಿ ಪುನಾರಂಭಕ್ಕೆ ಚಾಲನೆ ನೀಡಲಾಯಿತು. ಶಾಲೆಯಲ್ಲಿ ವಿದ್ಯಾರ್ಥಿಗಳ ಜೊತೆ ಸಿಎಂ ಹಾಗೂ ಸಚಿವರು ಮಾತನಾಡಿದರು.

ನಂತರ ಮಲ್ಲೇಶ್ವರದಲ್ಲಿರುವ ನಿರ್ಮಲ ರಾಣಿ ಪ್ರೌಢ ಶಾಲೆಯಲ್ಲಿ ಪರಿಶೀಲನೆ ನಡೆಸಲಾಯಿತು.

ಜಯನಗರದಲ್ಲಿರುವ ಆರ್.ವಿ ಪ್ರೌಢ ಶಾಲೆಗೆ ಭೇಟಿ ವೇಳೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದರಾದ ತೇಜಸ್ವಿ ಸೂರ್ಯ, ಜಯನಗರ ಶಾಸಕರಾದ ಸೌಮ್ಯಾ ರೆಡ್ಡಿ ಉಪಸ್ಥಿತರಿದ್ದರು.

 ‘ಇಂದು ಭೌತಿಕ ತರಗತಿಗೆ ಗೈರಾಗಿರುವ ನಿಮ್ಮ ಸ್ನೇಹಿತರಿಗೆ ಶಾಲೆಗೆ ಬರಲು ಹೇಳುವಿರಾ?’ ಎಂದು ವಿದ್ಯಾರ್ಥಿಗಳಿಗೆ ಸಚಿವರು ಕೇಳಿದಾಗ, ‘ಖಂಡಿತ ತಿಳಿಸುತ್ತೇವೆ ಸರ್’ ಎಂದು ಉತ್ತರಿಸಿದರು.

ಉತ್ತರಹಳ್ಳಿ ಸರ್ಕಾರಿ ಪ್ರೌಢ ಶಾಲೆ ಭೇಟಿ ವೇಳೆ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂ ಕೃಷ್ಣಪ್ಪ ಉಪಸ್ಥಿತರಿದ್ದರು. 

ಶಿವಾಜಿನಗರದಲ್ಲಿರುವ ಸರ್ಕಾರಿ ವಿಕೆಒ ಶಾಲೆಗೆ ಭೇಟಿ ವೇಳೆ ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್, ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ ಬಾವಾ ಉಪಸ್ಥಿತರಿದ್ದರು.

ಎಲ್ಲ ಶಾಲೆಗಳಲ್ಲೂ ವಿದ್ಯಾರ್ಥಿಗಳು, ಶಿಕ್ಷಕರು, ಶಾಲಾ ಮುಖ್ಯಸ್ಥರೊಂದಿಗೆ ಮಾತನಾಡಿ ಅಭಿಪ್ರಾಯ ಪಡೆಯಲಾಯಿತು.

ಭೌತಿಕ ತರಗತಿಗಳು ಆರಂಭದ ಕುರಿತು ವಿದ್ಯಾರ್ಥಿಗಳಿಂದ  ಸಚಿವರು ಅಭಿಪ್ರಾಯ ಕೇಳಿದಾಗ 'ಭೌತಿಕ ತರಗತಿ ಆರಂಭವಾಗಿರುವುದು ಖುಷಿಯಾಗಿದೆ. ನೇರವಾಗಿ ಪಾಠ ಕೇಳಿಸಿಕೊಂಡು, ಪ್ರಶ್ನೆ ಕೇಳಿ ಪಾಠದ ಕುರಿತು ಸಂಶಯಗಳನ್ನು ಪರಿಹರಿಸಿಕೊಳ್ಳಬಹುದು. ಮನೆಯಲ್ಲಿ ಕೆಲವೊಮ್ಮೆ ತೊಂದರೆ ಆಗುತ್ತಿತ್ತು. ಓದಿನ ಕಡೆ ಗಮನ ಹರಿಸಲು ಆಗುತ್ತಿರಲಿಲ್ಲ. ಇನ್ನು ಮುಂದೆ ಓದಿನ ಕಡೆ ಸಂಪೂರ್ಣ ಗಮನ ಹರಿಸಲು ಸಾಧ್ಯವಾಗುತ್ತಿದೆ. ಕೋವಿಡ್ ಸುರಕ್ಷತಾ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಗಿದೆ. ನಿಯಮಗಳನ್ನು ಪಾಲಿಸುತ್ತೇವೆ' ಎಂದು ವಿದ್ಯಾರ್ಥಿಗಳು ಹೇಳಿದರು.

ಸಭೆ ಬಳಿಕ ಉಳಿದ ತರಗತಿಗಳ ಪುನಾರಂಭ ನಿರ್ಧಾರ: 

ಆ.30ರಂದು ಮಕ್ಕಳ ತಜ್ಞರು, ಶಿಕ್ಷಣ ತಜ್ಞರು, ಕೋವಿಡ್-19 ತಜ್ಞರ ವಿವಿಧ ಸಮಿತಿ ಸದಸ್ಯರ ಜೊತೆ ಮುಖ್ಯಮಂತ್ರಿಯವರು ಸಭೆ ನಡೆಸಲಿದ್ದಾರೆ. ನಂತರ ತಾಂತ್ರಿಕ ಸಲಹಾ ಸಮಿತಿಯಿಂದ ಬರುವ ವರದಿ ಆಧರಿಸಿ 1 ರಿಂದ 8ನೇ ತರಗತಿಗಳನ್ನು ಎರಡು ಹಂತಗಳಲ್ಲಿ ಅಥವಾ ಒಂದೇ ಹಂತದಲ್ಲಿ ಆರಂಭಿಸುವ ಕುರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಈಗ ಆರಂಭಿಸಿರುವ 9ರಿಂದ 12ನೇ ತರಗತಿಗಳಿಗೆ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ. ಸಲಹೆ ಸೂಚನೆಗಳು, ಅಭಿಪ್ರಾಯಗಳನ್ನು ಕೂಡ ಪರಿಗಣಿಸಲಾಗುತ್ತದೆ ಎಂದು ಸಚಿವ ನಾಗೇಶ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News