ವಿ.ಕೆ.ಉಬೇದುಲ್ಲಾ ಶಾಲೆಗೆ ಮಹಿಳಾ ಕಾಲೇಜು ಮಂಜೂರು:ಶಿಕ್ಷಣ ಸಚಿವ ಬಿ.ಸಿ.ನಾಗೇಶ್

Update: 2021-08-23 14:59 GMT

ಬೆಂಗಳೂರು, ಆ.23: ವಿ.ಕೆ.ಉಬೇದುಲ್ಲಾ ಶಾಲೆ ಕಟ್ಟಡದಲ್ಲಿ ಮಹಿಳಾ ಕಾಲೇಜು ಮಂಜೂರು ಮಾಡುವಂತೆ ಶಾಸಕ ರಿಝ್ವಾನ್ ಅರ್ಶದ್ ಹಾಗೂ ಹಝ್ರತ್ ಹಮೀದ್ ಶಾ ದರ್ಗಾ ಸಮಿತಿಯ ಅಧ್ಯಕ್ಷ ಜಿ.ಎ.ಬಾವಾ ಬೇಡಿಕೆ ಸಲ್ಲಿಸಿದ್ದಾರೆ. ನಮ್ಮ ಡಿಡಿಪಿಐ ಅವರು ಸಲಹೆ ನೀಡಿದ್ದಾರೆ. ನಾಳೆ ಪಿಯು ನಿರ್ದೇಶಕರ ಜೊತೆ ಚರ್ಚಿಸಿ ಈ ಶಾಲೆಗೆ ಮಹಿಳಾ ಕಾಲೇಜು ಮಂಜೂರು ಮಾಡಲು ಕ್ರಮ ಕೈಗೊಳ್ಳುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಭರವಸೆ ನೀಡಿದ್ದಾರೆ.

ಸೋಮವಾರ ಹಝ್ರತ್ ಹಮೀದ್ ಶಾ ದರ್ಗಾ ಸಮಿತಿಯ ಉಸ್ತುವಾರಿಯಲ್ಲಿ ನಡೆಯುತ್ತಿರುವ ಶಿವಾಜಿನಗರದ ವಿ.ಕೆ.ಉಬೇದುಲ್ಲಾ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ವೈಜ್ಞಾನಿಕವಾಗಿ ಕಟ್ಟಿರುವ ಕಟ್ಟಡದಲ್ಲಿ ಈ ಶಾಲೆ ನಡೆಯುತ್ತಿದೆ. ಪಿಯು ಕಾಲೇಜು ಈ ಭಾಗದಲ್ಲಿ ಅಗತ್ಯವಿದೆ ಎಂಬ ಅಂಶವನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ಶಾಲಾ ಶಿಕ್ಷಣ ಮುಗಿದ ಬಳಿಕ ಕಾಲೇಜುಗಳು ದೂರವಿದ್ದರೆ ಈ ಭಾಗದಲ್ಲಿ ವಾಸಿಸುವ ಜನ ತಮ್ಮ ಮಕ್ಕಳನ್ನು ಕಾಲೇಜುಗಳಿಗೆ ಕಳುಹಿಸಲು ಹಿಂದೇಟು ಹಾಕುತ್ತಾರೆ. ಇದರಿಂದ, ಮಕ್ಕಳು ಕಾಲೇಜು ಶಿಕ್ಷಣದಿಂದ ವಂಚಿತರಾಗುತ್ತಾರೆ ಎಂದು ನಾಗೇಶ್ ಹೇಳಿದರು.

ಇತ್ತೀಚಿನ ದಿನಗಳಲ್ಲಿ ಎಲ್ಲ ಸಮಾಜದವರೂ ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದಾರೆ. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ, ಕಾಲೇಜುಗಳಿಗೆ ಬರುತ್ತಿದ್ದಾರೆ. ಈ ಕ್ಷೇತ್ರದ ಎರಡು ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಸಮಗ್ರ ಅಭಿವೃದ್ಧಿಗೆ ಶಾಸಕರು ಮಾಸ್ಟರ್ ಪ್ಲಾನ್ ಮಾಡಿ, ಒಂದು ಶಾಲೆಗೆ ಟೆಂಡರ್ ಆಗಿರುವ ವಿಚಾರ ತಿಳಿಸಿದ್ದಾರೆ. ಸರಕಾರಿ ಶಾಲೆಗಳಿಗೂ ನಮಗೂ ಸಂಬಂಧವೆ ಇಲ್ಲವೇನೋ ಎಂಬ ರೀತಿಯಲ್ಲಿ ಇದ್ದೆವು. ಆದರೆ, ಈಗ ಸಿಎಸ್‍ಆರ್ ಸೇರಿದಂತೆ ವಿವಿಧ ಭಾಗಗಳಿಂದ ಫಂಡ್ ಬರುತ್ತಿದೆ. ಅದನ್ನು ಬಳಸಿಕೊಂಡು ಸರಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಅವರು ಹೇಳಿದರು.

ನಾಳೆ ದೊಡ್ಡಬಳ್ಳಾಪುರದಲ್ಲಿ ಸುಮಾರು 7 ಕೋಟಿ ರೂ.ಸಿಎಸ್‍ಆರ್ ಫಂಡ್‍ನಲ್ಲಿ ಕಟ್ಟಿಸಿರುವ ಶಾಲೆಯನ್ನು ಉದ್ಘಾಟನೆ ಮಾಡುತ್ತಿದ್ದೇನೆ. ಸಿಎಸ್‍ಆರ್ ಜೊತೆಗೆ ಬೇರೆಯವರಿಗೂ ಸರಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ಕೈ ಜೋಡಿಸಲು ಅನುಕೂಲವಾಗುವಂತೆ ವ್ಯವಸ್ಥೆ ರೂಪಿಸಲಾಗುವುದು. ಪ್ರಧಾನಿಯೂ ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದಾರೆ. ಇಂದಿರಾ ಗಾಂಧಿ, ರಾಜೀವ್ ಗಾಂಧಿ ಬಳಿಕ ಇದೀಗ ನೂತನ ಶಿಕ್ಷಣ ನೀತಿಯನ್ನು ಇವತ್ತಿನ ಆದ್ಯತೆಗೆ ಅನುಗುಣವಾಗಿ ಅನುಷ್ಠಾನಗೊಳಿಸಲು ಪ್ರಧಾನಿ ಹೊರಟಿದ್ದಾರೆ ಎಂದು ಅವರು ತಿಳಿಸಿದರು.

ಒಂದೂವರೆ ವರ್ಷದ ಹಿಂದೆ ಮುಚ್ಚಲ್ಪಟ್ಟಿದ್ದ ಶಾಲಾ, ಕಾಲೇಜುಗಳು ಇವತ್ತಿನಿಂದ 9 ರಿಂದ 12 ತರಗತಿವರೆಗೆ ಭೌತಿಕವಾಗಿ ಆರಂಭ ಮಾಡಿದ್ದೇವೆ. ನಮ್ಮ ಎಲ್ಲ ಶಾಸಕರು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಪೂರ್ಣವಾಗಿ ಬೆಂಬಲ ನೀಡಿದ್ದಾರೆ. ಶಾಲೆಗಳಲ್ಲಿ ಮಕ್ಕಳು ಹಾಗೂ ಅಧ್ಯಾಪಕರು ಉತ್ಸಾಹದಿಂದ ಬರುತ್ತಿದ್ದಾರೆ. ಸರಕಾರದ ಕಡೆಯಿಂದ ಹೊರಡಿಸಿರುವ ಎಸ್‍ಓಪಿ ಯನ್ನು ಪಾಲನೆ ಮಾಡುತ್ತಿದ್ದಾರೆ ಎಂದು ನಾಗೇಶ್ ಮೆಚ್ಚುಗೆ ವ್ಯಕ್ತಪಡಿಸಿದರು.

ಆ.30ರಂದು ಮುಖ್ಯಮಂತ್ರಿ ಅಧ್ಯಕ್ಷತೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸಭೆ ನಡೆಯಲಿದೆ. ಇವತ್ತಿನಿಂದ ಆರಂಭವಾಗಿರುವ ಶಾಲೆಗಳ ಭೌತಿಕ ತರಗತಿಗಳ ಅನುಭವದ ಆಧಾರದ ಮೇಲೆ 1-8ನೆ ತರಗತಿಯವರೆಗೆ ಶಾಲೆಗಳನ್ನು ಆರಂಭಿಸುವ ಕುರಿತು ನಿರ್ಣಯ ಮಾಡಲಾಗುವುದು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಶಾಸಕ ರಿಝ್ವಾನ್ ಅರ್ಶದ್, ಹಝ್ರತ್ ಹಮೀದ್ ಶಾ ದರ್ಗಾ ಸಮಿತಿಯ ಅಧ್ಯಕ್ಷ ಜಿ.ಎ.ಬಾವಾ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News