ಕಾಂಗ್ರೆಸ್‍ನಲ್ಲಿ 'ಪ್ರಮೋಷನ್' ಸಿಗಬೇಕೆಂದರೆ ಜೈಲಿಗೆ ಹೋಗಬೇಕು: ಸಿ.ಟಿ.ರವಿ ವ್ಯಂಗ್ಯ

Update: 2021-08-24 14:09 GMT

ಚಿಕ್ಕಮಗಳೂರು, ಆ.24: ಕಾಂಗ್ರೆಸ್ ಪಕ್ಷದಲ್ಲಿ ಪ್ರಮೋಷನ್ ಸಿಗಬೇಕು ಎಂದರೆ, ಜೈಲಿಗೆ ಹೋಗಬೇಕು. ಭ್ರಷ್ಟಚಾರ ಮಾಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿನಯ್ ಕುಲಕರ್ಣಿ ಈಗ ನಿರಪರಾಧಿಯೂ ಅಲ್ಲ, ಅಪರಾಧಿಯೂ ಅಲ್ಲ, ಆಪಾದಿತರು. ಭ್ರಷ್ಟಚಾರ ಕಾಂಗ್ರೆಸ್‍ನ ರಾಜಕೀಯ ವ್ಯವಸ್ಥೆಯ ಒಂದು ಭಾಗ. ಅಲ್ಲಿ ಗುಂಡಾಗಿರಿ ಪ್ರಮೋಷನ್‍ಗೆ ಇರುವ ಒಂದು ಮಾದರಿ. ಡಿ.ಕೆ.ಶಿವಕುಮಾರ್ ಅವರು ಬೆಳೆದು ಬಂದ ರೀತಿಯಲ್ಲೇ ಆಲೋಚನೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಗೂಂಡಾ ಎಂಬ ಆರೋಪ ಬಂದಾಗ ನಾವು ಗೂಂಡಾಗಳಿಗೂ ವಿಶೇಷವಾದ ಆದ್ಯತೆ ಕೊಡಬೇಕೆಂದು ರಾಜೀವ್‍ಗಾಂಧಿ ಹೇಳಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಅವರೇ ಹೇಳಿದ್ದಾರೆ.  ಹಾಗಾಗಿ ಕಾಂಗ್ರೆಸ್‍ನಲ್ಲಿ ಉಳಿದವರು ಈ ಬಗ್ಗೆ ಯೋಚನೆ ಮಾಡಬೇಕಾಗಿದೆ. ಅದನ್ನು ಅವರೇ ಒಪ್ಪಿದ್ದಾರೆ. ಮುಂದೆ ಜನರು ಕಾಂಗ್ರೆಸ್ ಬಗ್ಗೆ ಎಚ್ಚರವಹಿಸಬೇಕಿದೆ ಎಂದರು.

ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ತಾಲಿಬಾನಿಗಳ ಅಟ್ಟಹಾಸ ಅಲ್ಲಿನ ಆಂತರಿಕ ವಿಚಾರ ಮಾತ್ರವಲ್ಲ, ಮನುಕುಲದ ಮುಂದಿರುವ ಸವಾಲಾಗಿದೆ. ವಿಶ್ವಸಂಸ್ಥೆ ಮಧ್ಯಪ್ರವೇಶ ಮಾಡಬೇಕು. ಅಮಾನವೀಯ ನಡೆಯನ್ನು ಧಾರ್ಮಿಕ ನೆಲೆಯಲ್ಲಿ ಸಮರ್ಥಿಸಲು ಹೋದರೆ ಇದನ್ನು ಧಾರ್ಮಿಕತೆ ಎಂದು ಹೇಳಲು ಸಾಧ್ಯವಿಲ್ಲ, ಮೃಗೀಯವಾದ ನೀತಿ, ಪ್ರಚೋದನೆ ಕೊಡುವ ಅಂಶಗಳನ್ನು ಬದಲಾಯಿಸಬೇಕು. ಇಸ್ಲಾಂ ಧರ್ಮದ ಧರ್ಮಗುರುಗಳು ಮಧ್ಯಪ್ರವೇಶಿಸಬೇಕು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News