ನೂತನ ಶಿಕ್ಷಣ ನೀತಿಯ ಅವಸರದ ಅನುಷ್ಠಾನ, ಅಸಂವಿಧಾನಿಕ ಹಾಗೂ ಅಪಾಯಕಾರಿ: ಶಿಕ್ಷಣ ತಜ್ಞ ಪ್ರೊ.ನಿರಂಜನಾರಾಧ್ಯ
ಬೆಂಗಳೂರು, ಆ.24: ಕೇಂದ್ರ ಸರಕಾರದ ಆಣತಿಯಂತೆ ರಾಜ್ಯ ಸರಕಾರ ಕೇವಲ ಪ್ರಚಾರ ಮತ್ತು ಪ್ರತಿಷ್ಠೆಗಾಗಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅವಸರ ಅವಸರವಾಗಿ ಜಾರಿ ಮಾಡುತ್ತಿರುವುದು ಅಪಾಯಕಾರಿ ನಿಲುವಾಗಿದೆ ಎಂದು ಶಿಕ್ಷಣ ತಜ್ಞ ಪ್ರೊ.ನಿರಂಜನಾರಾಧ್ಯ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಒಕ್ಕೂಟ ವ್ಯವಸ್ಥೆಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಒಂದು ಮಾರ್ಗಸೂಚಿ ಚೌಕಟ್ಟೇ ಹೊರತು ರಾಜ್ಯಗಳ ನೀತಿಯಾಗಲಾರದು. ರಾಜ್ಯ ಸರಕಾರಗಳು ತಮ್ಮ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕøತಿಕ ಅಗತ್ಯಗಳಿಗೆ ಅನುಗುಣವಾಗಿ ಒಂದು ಶಿಕ್ಷಣ ವ್ಯವಸ್ಥೆಯನ್ನು ರೂಪಿಸಿಕೊಳ್ಳಬೇಕಾಗುತ್ತದೆ. ಸಂವಿಧಾನದಲ್ಲಿ ಶಿಕ್ಷಣ ಸಮವರ್ತಿ ಪಟ್ಟಿಯಲ್ಲಿದ್ದು, ಒಕ್ಕೂಟ ವ್ಯವಸ್ಥೆಯಲ್ಲಿ ಅದಕ್ಕೆ ಸಂವಿಧಾನಬದ್ಧ ಅವಕಾಶವಿದೆ ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಒಂದು ಮಾರ್ಗಸೂಚಿ ಚೌಕಟ್ಟಾಗಿ ಇಟ್ಟುಕೊಂಡು ಕರ್ನಾಟಕ ತನ್ನದೇ ಆದ ಕರ್ನಾಟಕ ರಾಜ್ಯ ಶಿಕ್ಷಣ ನೀತಿಯನ್ನು (ಕರಾಶಿನೀ) ರೂಪಿಸಿ, ಎರಡೂ ಸದನದಲ್ಲಿ ಮಂಡಿಸಿ ಒಪ್ಪಿಗೆ ಪಡೆದು ಅಧಿಕೃತವಾಗಿ ಪ್ರಕಟಿಸಿ ಜಾರಿಗೊಳಿಸುವುದು ಪ್ರಜಾಸತ್ತಾತ್ಮಕ ವಿಧಾನ ಮತ್ತು ಕ್ರಮವಾಗಿದೆ. ಈ ನಿಟ್ಟಿನಲ್ಲಿ ಕೇರಳ ಹಾಗು ತಮಿಳನಾಡು ಸರಕಾರಗಳ ನಡೆ ಅನುಕರಣೀಯವೆಂದು ಅವರು ಅಭಿಪ್ರಾಯಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕೂಡಲೇ ಮಧ್ಯ ಪ್ರವೇಶಿಸಿ ಕೇವಲ ಪ್ರಚಾರ ಪ್ರತಿಷ್ಠೆಗೋಸ್ಕರ ಶಿಕ್ಷಣ ನೀತಿಯನ್ನು ಜಾರಿಗೊಳಿಸದೆ ರಾಜ್ಯದ ಹಿತ, ಅನನ್ಯತೆ ಮತ್ತು ಸಂವಿಧಾನದ ಒಕ್ಕೂಟ ವ್ಯವಸ್ಥೆಯ ಮೌಲ್ಯಗಳಿಗೆ ಅನುಗುಣವಾಗಿ ಜಾರಿಗೊಳಿಸಲು ಅನುವಾಗುವಂತೆ ಅನುಷ್ಠಾನದ ಎಲ್ಲ ಪ್ರಕ್ರಿಯೆಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ತಡೆಹಿಡಿಯಲು ಸೂಚಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
2017 ರಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಲ್ಲಿಸಿರುವ ಸರಕಾರಿ ಶಾಲೆಗಳ ಸಬಲೀಕರಣ ವರದಿ ಮತ್ತು ಇತರೆ ಸಮಿತಿಗಳು ಕಾಲಕಾಲಕ್ಕೆ ಸಲ್ಲಿಸಿರುವ ವರದಿಗಳನ್ನು ಆಧರಿಸಿ ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೇವಲ ಒಂದು ಚೌಕಟ್ಟಾಗಿ ಇಟ್ಟುಕೊಂಡು ಕರ್ನಾಟಕ ರಾಜ್ಯ ಶಿಕ್ಷಣ ನೀತಿಯನ್ನು ರೂಪಿಸಲು ಎಲ್ಲ ಮೂಲ ವಾರಸುದಾರರನ್ನೊಳಗೊಂಡ ಉನ್ನತ ಸಮಿತಿಯನ್ನು ರಚಿಸಬೇಕೆಂದು ಅವರು ಆಗ್ರಹಿಸಿದ್ದಾರೆ.