×
Ad

ಡ್ರಗ್ಸ್ ಪ್ರಕರಣ: ನಟಿಯರ ಮೇಲಿನ ಆರೋಪ ಮತ್ತಷ್ಟು ಬಿಗಿಯಾದಂತಾಗಿದೆ ಎಂದ ಗೃಹ ಸಚಿವ

Update: 2021-08-24 19:59 IST

ಶಿವಮೊಗ್ಗ, ಆ.24: ಚಲನಚಿತ್ರ ನಟಿಯರು ಮಾದಕ ದ್ರವ್ಯ ಸೇವನೆ ಮಾಡಿರುವುದನ್ನು ಹೈದರಾಬಾದ್‌ನ ಸೆಂಟ್ರಲ್ ಫೋರೆನ್ಸಿಕ್ ಲ್ಯಾಬ್ ದೃಢಪಡಿಸಿದ್ದು ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ನಗರದ ಹೊರ ವಲಯ ಮಾಚೇನಹಳ್ಳಿ ಕೆಎಸ್‌ಆರ್‌ಪಿ ೮ನೇ ಬೆಟಾಲಿಯನ್‌ಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಆರೋಪಿಗಳು ಮಾದಕ ದ್ರವ್ಯವನ್ನು ಸೇವಿಸಿರುವುದನ್ನು ಪ್ರಯೋಗಾಲಯ ದೃಢಪಡಿಸಿರುವುದರಿಂದ ಅವರ ಮೇಲಿನ ಆರೋಪ ಮತ್ತು ಪ್ರಕರಣ ಮತ್ತಷ್ಟು ಬಿಗಿಯಾದಂತಾಗಿದೆ ಎಂದರು.

ಅಪರಾಧ ಕೃತ್ಯಗಳ ಶೀಘ್ರ ಪತ್ತೆಗಾಗಿ ರಾಜ್ಯದಲ್ಲಿ ಫೋರೆನ್ಸಿಕ್ ಲ್ಯಾಬ್‌ನ್ನು ಅತ್ಯಾಧುನಿಕ ರೀತಿಯಲ್ಲಿ ಉನ್ನತೀಕರಿಸುವ ಅಗತ್ಯವಿದೆ. ಇದರ ಬಗ್ಗೆ ಚರ್ಚೆ ನಡೆಯುತ್ತಿದ್ದು ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುತ್ತದೆ. ಮಾದಕ ದ್ರವ್ಯ ಸಾಗಣೆ ಮತ್ತು ಮಾರಾಟದ ಕುರಿತು ಪೊಲೀಸ್ ಇಲಾಖೆಯಿಂದ ನಿರ್ದಾಕ್ಷಿಣ್ಯ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಇಂತಹ ದೃಷ್ಕೃತ್ಯದಲ್ಲಿ ಭಾಗಿಯಾದವರು ಎಷ್ಟೇ ಪ್ರಭಾವಿಗಳಾದರೂ ಕಠಿಣ ದಂಡನೆಗೆ ಗುರಿಪಡಿಸಲಾಗುವುದು. ಈ ವಿಷಯದಲ್ಲಿ ತಾರತಮ್ಯದ ಪ್ರಶ್ನೆಯೆ ಇಲ್ಲ. ಅದಕ್ಕಾಗಿ ಇಲಾಖೆಯಲ್ಲಿ ಪ್ರತ್ಯೇಕ ತಂಡವನ್ನು ರಚಿಸಲಾಗಿದೆ ಎಂದರು.

ಶಿವಮೊಗ್ಗ ಜಿಲ್ಲೆಯಲ್ಲೂ ಇಸ್ಪೀಟ್, ಓಸಿ, ಮಟ್ಕಾ ದಂಧೆ ಅವ್ಯಾಹತವಾಗಿ ನಡೆಯುತ್ತಿರುವ ಬಗ್ಗೆ ಮಾಹಿತಿ ಇದೆ. ನಿಯಂತ್ರಣ ಕ್ರಮ ಕೈಗೊಳ್ಳಲು ಇಲಾಖೆ ಅಕಾರಿಗಳಿಗೆ ಸೂಚಿಸಲಾಗಿದೆ. ಅಕ್ರಮ ದಂಧೆ ನಡೆಸುವವರೊಂದಿಗೆ ಪೊಲೀಸರು ಶಾಮೀಲಾಗಿರುವ ಮಾಹಿತಿಯೂ ಇದೆ. ಹಲವು ವರ್ಷಗಳಿಂದ ತಳವೂರಿರುವ ಅಕಾರಿ ಮತ್ತು ಸಿಬ್ಬಂದಿಯನ್ನು ಎಸ್ಪಿ ಅವರು ವರ್ಗಾವಣೆ ಮಾಡಿದ್ದಾರೆ. ಅಪರಾಧ ಕೃತ್ಯಗಳಲ್ಲಿ ಭಾಗಿಯಾದವರನ್ನು ಗುರುತಿಸಿ ವರ್ಗಾವಣೆ ಮಾಡಲಾಗುವುದು ಎಂದರು.

ಕೊರೋನ ಹಿನ್ನೆಲೆಯಲ್ಲಿ ಗಣೇಶ ಚತುರ್ಥಿಯನ್ನು ಸರಳವಾಗಿ ಆಚರಿಸಲು ಸಿಎಂ ನೇತೃತ್ವದಲ್ಲಿ ನಿರ್ಧರಿಸಲಾಗಿದೆ. ಬಹಳಷ್ಟು ಕಡೆ ಕೊರೊನಾ ಪಾಸಿಟಿವ್ ಶೇ.2ಕ್ಕಿಂತ ಹೆಚ್ಚಿದೆ. ಇಂತಹ ಸಮಯದಲ್ಲಿ ಜನ ಸೇರಿಸುವುದು ಸರಿಯಲ್ಲ. ಹೀಗಾಗಿ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ. ಅದ್ಧೂರಿಯಾಗಿ ಆಚರಿಸಬೇಕೆನ್ನುವವರ ಮನವೊಲಿಸಲಾಗುವುದು ಎಂದರು.

ಪೊಲೀಸರು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು, ರೌಡಿಗಳು, ಸಮಾಜದ್ರೋಹಿಗಳಿಗೆ ಟೆರರ್ ಆಗಿರಬೇಕು. ಆದರೆ, ಕೆಲವು ಪೊಲೀಸರು ಸಾರ್ವಜನಿಕರನ್ನೂ ರೌಡಿಗಳಂತೆ ನೋಡುವುದು ನಮ್ಮ ಗಮನದಲ್ಲಿದೆ. ಅದಕ್ಕಾಗಿ ಅಕಾರಿ ಮತ್ತು ಸಿಬ್ಬಂದಿಗೆ ತರಬೇತಿ ನೀಡಲಾಗುವುದು ಎಂದರು.

ರಾಜ್ಯದ ಎಲ್ಲ ನಗರಗಳ ಪ್ರಮುಖ ಸ್ಥಳಗಳಲ್ಲಿ ಸ್ಥಳೀಯ ಆಡಳಿತ ಮತ್ತು ಪೊಲೀಸ್ ಇಲಾಖೆಯಿಂದ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ನಿಯಮಾನುಸಾರ ಖಾಸಗಿ ಸಂಘ-ಸಂಸ್ಥೆಗಳು, ವಾಣಿಜ್ಯ ಉದ್ಧಿಮೆದಾರರು ಸಹ ಅಳವಡಿಸಿಕೊಳ್ಳಬೇಕು. ಈ ಕ್ಯಾಮರಾಗಳ ಚಿತ್ರಿತ ಭಾಗವನ್ನು ಪೊಲೀಸ್ ಇಲಾಖೆಯ ಅಗತ್ಯಗಳಿಗೆ ಒದಗಿಸುವಂತೆಯೂ ಸೂಚಿಸಲಾಗಿದೆ. ಗುಪ್ತಚರ ವಿಭಾಗವನ್ನು ಇನ್ನಷ್ಟು ಬಲಪಡಿಸುವ ಅಗತ್ಯವಿದೆ. ಈ ಬಗ್ಗೆ ಸಿಎಂ ಜತೆಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದರು.

ಶಾಸಕರಾದ ಕೆ.ಬಿ.ಅಶೋಕನಾಯ್ಕ್, ಎಸ್.ರುದ್ರೇಗೌಡ, ಕೆಎಸ್‌ಆರ್‌ಪಿ ಅಕಾರಿಗಳು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News