ಸಾರಿಗೆ ಬಸ್‍ಗಳಲ್ಲಿ ಕನ್ನಡ ಭಾಷೆ ಅನುಷ್ಠಾನವಾಗಲಿ: ಟಿ.ಎಸ್.ನಾಗಾಭರಣ

Update: 2021-08-24 15:32 GMT
 ಟಿ.ಎಸ್.ನಾಗಾಭರಣ

ಬೆಂಗಳೂರು, ಆ.24: ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿದಂತೆ ರಾಜ್ಯದ ಸಾರಿಗೆ ಬಸ್‍ಗಳಲ್ಲಿ ಪ್ರಯಾಣಿಕರ ಟಿಕೆಟ್ ಬುಕಿಂಗ್ ದೃಢೀಕರಣಗಳಲ್ಲಿ, ರಶೀದಿಗಳ ಹಿಂದೆ ಮತ್ತು ಯಾವುದೇ ಇತರ ಪ್ರತಿಗಳಲ್ಲಿ ಕನ್ನಡಪರ ಸಾಮಾಜಿಕ ಕಳಕಳಿವುಳ್ಳ ಘೋಷಣೆಗಳು ಹಾಗೂ ಕನ್ನಡ ಕಾಯಕ ವರ್ಷದ ಘೋಷಣೆಗಳು, ಬರಹಗಳನ್ನು ಮುದ್ರಿಸಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಮನವಿ ಮಾಡಿದ್ದಾರೆ.

ಮಂಗಳವಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ಸಾರಿಗೆ ವಲಯದಲ್ಲಿ ಕನ್ನಡ ಜಾಗೃತಿ ಅಭಿಯಾನದ ಎರಡನೇ ದಿನ ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರನ್ನು ಭೇಟಿ ಮಾಡಿ, ಸಾರಿಗೆ ವಲಯದಲ್ಲಿ ಕನ್ನಡ ಅನುಷ್ಠಾನಕ್ಕೆ ಸಂಬಂಧಿಸಿದ ಹಕ್ಕೊತ್ತಾಯ ಹಾಗೂ ಮನವಿ ಪತ್ರವನ್ನು ನೀಡಿ ಅವರು ಮಾತನಾಡಿದರು.

ಇಲಾಖೆಗಳಲ್ಲಿನ ಜಾಲತಾಣ, ಸಾಮಾಜಿಕ ತಾಣ, ಪ್ರಧಾನ ಪುಟ ಕನ್ನಡದಲ್ಲಿ ರೂಪಿಸುವುದು ಮತ್ತು ಒಳಪುಟದ ಮಾಹಿತಿಗಳೆಲ್ಲವು ಕನ್ನಡದಲ್ಲಿ ಇರತಕ್ಕದ್ದು. ಸುತ್ತೋಲೆ, ಆದೇಶ, ಸೂಚನಾ ಪತ್ರಗಳು, ಅಧಿಕೃತ ಜ್ಞಾಪನ, ಅಧಿಸೂಚನೆ, ನಡವಳಿಗಳೆಲ್ಲವನ್ನೂ ಕಡ್ಡಾಯವಾಗಿ ಕನ್ನಡದಲ್ಲಿ ಹೊರಡಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

ಸಚಿವಾಲಯ, ಇಲಾಖೆ, ಜಿಲ್ಲಾ ಮಟ್ಟದಲ್ಲಿ, ನಿಗಮ ಮಟ್ಟದಲ್ಲಿ ಕನ್ನಡ ಅನುಷ್ಠಾನ ವಿಭಾಗವನ್ನು ರಚಿಸಿ ಕನ್ನಡ ಅನುಷ್ಠಾನದ ಪ್ರಗತಿ ವಿವರವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸುವುದು. ಕನ್ನಡ ದಿನಪತ್ರಿಕೆಗಳಿಗೆ ನೀಡುವ ಜಾಹೀರಾತುಗಳು ಸಂಪೂರ್ಣವಾಗಿ ಕನ್ನಡದಲ್ಲಿಯೇ ಇರುವಂತೆ ನೋಡಿಕೊಳ್ಳಬೇಕೆಂದು ಅವರು ಹೇಳಿದ್ದಾರೆ.

ರಾಜ್ಯ ಸಾರಿಗೆ ವಲಯದ ಮುಖಾಂತರ ರಾಜ್ಯದ ಹೊರಗಿನ ಜನತೆಯ ಆಗಮನ- ನಿರ್ಗಮನ, ವಲಸೆ ಹೆಚ್ಚುತ್ತಿದೆ. ಹೀಗಾಗಿ ಸಾರಿಗೆ ವಲಯದಲ್ಲಿ ಕನ್ನಡ ಭಾಷೆಯ ಬಳಕೆ ಗಟ್ಟಿಯಾಗಿ ನೆಲೆಯಾಗಬೇಕು. ಟಿಕೆಟ್, ಬಸ್, ಮೆಟ್ರೋದಂತಹ ಬೆರಳೆಣಿಕೆಯ ಪದಗಳನ್ನು ಬಿಟ್ಟರೆ ಉಳಿದ ಕಡೆ ಕನ್ನಡ ಪದಗಳನ್ನು, ಪದಪುಂಜಗಳನ್ನು ಬಳಸಬೇಕು. ಈ ಸದುದ್ದೇಶಕ್ಕಾಗಿ ಕನ್ನಡಿಗರೆಲ್ಲರೂ ಬದ್ಧರಾಗಿರಬೇಕೆಂದು ಅವರು ಮನವಿ ಮಾಡಿದ್ದಾರೆ. 

ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಅವರ ಜನ್ಮದಿನದ (ಆ.20) ಸಂದರ್ಭದಲ್ಲಿ ಸಾರಿಗೆ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಸಾರಿಗೆ ವಲಯ ಅಂದರೆ ಕೆಎಸ್ಸಾರ್ಟಿಸಿ, ಬಿಎಂಟಿಸಿ, ಮೆಟ್ರೋ, ಬೇಂದ್ರೆ ಸಾರಿಗೆ ಮತ್ತು ವಿಮಾನ ನಿಲ್ದಾಣಗಳಲ್ಲಿ ಮೂರು ದಿನಗಳ ಕಾಲ ಕನ್ನಡ ಬಳಕೆ ಜಾಗೃತಿ ಅಭಿಯಾನವನ್ನು ಪ್ರಾಧಿಕಾರವು ಹಮ್ಮಿಕೊಂಡಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಕನ್ನಡನಾಡಿನಲ್ಲಿ ನೆಲೆಸಿದವರು ಕನ್ನಡದಲ್ಲೇ ಮಾತು, ಸಂವಹನ ನಡೆಸುವಷ್ಟು ಕನ್ನಡ ಕಲಿತು, ಮಾತನಾಡಬೇಕು. ಈ ಸದಾಶಯ, ಸದುದ್ದೇಶವೇ ನಮ್ಮ ಹಕ್ಕೊತ್ತಾಯ ಮತ್ತು ಮನವಿ ಎಂದು ಅವರು ಸಚಿವರಿಗೆ ತಿಳಿಸಿದ್ದಾರೆ. ಈ ವೇಳೆ ಸಾರಿಗೆ ಸಚಿವ ಶ್ರೀರಾಮುಲು ಮಾತನಾಡಿ, ಸರಕಾರದ ಮಟ್ಟದಲ್ಲಿ ಸಾರಿಗೆ ವಲಯಕ್ಕೆ ಸಂಬಂಧಿಸಿದಂತೆ ಆಗಲೇಬೆಕಾದ ಪಟ್ಟಿಯನ್ನು ಪ್ರಾಧಿಕಾರದ ಮುಖಾಂತರ ಈಗಾಗಲೇ ನಮಗೆ ತಲುಪಿದೆ. ಅವುಗಳನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಸರ್ವಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ರಾಜೇಂದರ್ ಕುಮಾರ್ ಕಟಾರಿಯ, ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕರಾದ ಶಿವಯೋಗಿ ಕಳಸದ್ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ್ ಹಾನಗಲ್ಲ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News