ಹಳ್ಳಿ ಮಕ್ಕಳು ಯಾರಿಗೂ ಕಮ್ಮಿ ಇಲ್ಲ ಎಂಬ ಭಾವನೆ ಎಲ್ಲರಲ್ಲೂ ಬರಬೇಕು: ಶಾಸಕ ಬಂಡೆಪ್ಪ ಖಾಶೆಂಪುರ್

Update: 2021-08-24 16:09 GMT
ಶಾಸಕ ಬಂಡೆಪ್ಪ ಖಾಶೆಂಪುರ್

ಬೀದರ್, ಆ.24: ನನ್ನ ಕ್ಷೇತ್ರ ವ್ಯಾಪ್ತಿಯ 28 ಸರಕಾರಿ ಪ್ರೌಢ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ರೂಮ್ ನಿರ್ಮಾಣಕ್ಕೆ ಅನುದಾನ ನೀಡಿದ್ದಿನಿ. ಇದುವರೆಗೂ ಬೀದರ್ ಜಿಲ್ಲೆಯಲ್ಲಿ ಬೇರೆ ಎಲ್ಲಿಯೂ ಸ್ಮಾರ್ಟ್ ಕ್ಲಾಸ್ ಗಳಿಗೆ ಅನುದಾನ ಕೊಟ್ಟಿಲ್ಲ. ಶಾಲೆಗಳ ಸುಧಾರಣೆಗಾಗಿ ಇನ್ನೂ ಹೆಚ್ಚೆಚ್ಚು ಅನುದಾನ ಕೊಡಲು ನಾನು ತಯಾರಿದ್ದೇನೆಂದು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕ ಬಂಡೆಪ್ಪ ಖಾಶೆಂಪುರ್ ಹೇಳಿದರು.

ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಿರ್ಣಾ ಗ್ರಾಮದ ಸರಕಾರಿ ಪ್ರೌಢ ಶಾಲೆಗೆ ಮಂಗಳವಾರ ಭೇಟಿ ನೀಡಿ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ 2020-21ನೇ ಸಾಲಿನ ಅನುದಾನದಲ್ಲಿ ನಿರ್ಮಿತ ಕೇಂದ್ರ ಬೀದರ್‍ನ ಸಹಯೋಗದೊಂದಿಗೆ, ಜ್ಞಾನಸುಧಾ ಇನ್ನೋವೇಟಿವ್ ಸಲ್ಯೂಶನ್ಸ್ ಸಂಸ್ಥೆಯಿಂದ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಸ್ಮಾರ್ಟ್ ಕ್ಲಾಸ್ ರೂಮ್ ಅನ್ನು ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು.

ಜಿಲ್ಲೆಯ ಯಾವ ಸರಕಾರಿ ಶಾಲೆಗಳಲ್ಲಿಯೂ ಕೂಡ ಎಸಿ ವ್ಯವಸ್ಥೆ ಇಲ್ಲ. ಇಲ್ಲಿ ಎಸಿ ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ತರಗತಿಗಳ ಮಕ್ಕಳಿಗೂ ಈ ಸ್ಲಾರ್ಟ್ ಕ್ಲಾಸ್ ರೂಮ್‍ನಲ್ಲಿ ಕ್ಲಾಸ್ ಮಾಡಬೇಕು. ಅವರಿಗೆ ಇದರ ಬಗ್ಗೆ ತಿಳುವಳಿಕೆ ನೀಡಬೇಕು. ಹತ್ತನೇ ತರಗತಿ ಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಗಣಿತ, ವಿಜ್ಞಾನ ವಿಷಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಎಲ್ಲಾ ವಿಷಯಗಳನ್ನು ಆದ್ಯತೆಯ ಮೇರೆಗೆ ಇಲ್ಲಿ ಹೇಳಿ ಕೊಡುವ ಕೆಲಸ ಮಾಡಬೇಕು. ಹಳ್ಳಿ ಮಕ್ಕಳು ಯಾರಿಗೂ ಕಮ್ಮಿ ಇಲ್ಲ ಎಂಬ ಭಾವನೆ ಎಲ್ಲರಲ್ಲೂ ಬರಬೇಕಾಗಿದೆ ಎಂದು ಅವರು ಹೇಳಿದರು.

ಕುಡಿಯುವ ನೀರಿನ ವ್ಯವಸ್ಥೆಯ ಪರಿಶೀಲನೆ: ಶಾಲೆಯ ಆವರಣದಲ್ಲಿನ ಕುಡಿಯುವ ನೀರಿನ ವ್ಯವಸ್ಥೆಯ ಬಗ್ಗೆ ಶಾಲೆಯ ಮುಖ್ಯಗುರುಗಳನ್ನು ಪ್ರಶ್ನಿಸಿದ ಅವರು, ಶಾಲೆಯಲ್ಲಿನ ಕುಡಿಯವ ನೀರಿನ ಟ್ಯಾಂಕರ್, ನಲ್ಲಿಗಳು ಶುದ್ಧವಾಗಿ ಇರುವಂತೆ ನೋಡಿಕೊಳ್ಳಬೇಕು. ಆಗಾಗ್ಗೆ ಸ್ವಚ್ಛಗೊಳಿಸಬೇಕು. ಶಾಲೆಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಳ್ಳುವ ಕಡೆ ಹೆಚ್ಚಿನ ಗಮನ ನೀಡಬೇಕೆಂದು ತಿಳಿಸಿದರು.

ಹತ್ತನೆ ತರಗತಿ ಕೊಠಡಿಗೆ ಭೇಟಿ, ಮಕ್ಕಳೊಂದಿಗೆ ಮಾತುಕತೆ: ಶಾಲೆಯ ಹತ್ತನೇ ತರಗತಿ ಕೊಠಡಿಗೆ ಭೇಟಿ ನೀಡಿದ ಶಾಸಕರು, ಹತ್ತನೇ ತರಗತಿ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದರು. ಶಾಲೆಗೆ ಬರುವ ವಿದ್ಯಾರ್ಥಿಗಳು ಸಮವಸ್ತ್ರ ಧರಿಸಬೇಕು. ಶಾಲೆಯಲ್ಲಿ ಸ್ವಚ್ಛತೆ ಕಾಪಾಡಬೇಕು. ವೈಯಕ್ತಿಕ ಸ್ವಚ್ಛತೆಗೂ ಆದ್ಯತೆ ನೀಡಬೇಕು. ಎಲ್ಲದಕ್ಕಿಂತ ಹೆಚ್ಚಾಗಿ ತಮ್ಮ ಓದಿಗೆ ಹೆಚ್ಚಿನ ಮಹತ್ವ ನೀಡಬೇಕು. ಒಳ್ಳೆಯ ಶಿಕ್ಷಣ ಪಡೆದು ಸಮಾಜದಲ್ಲಿ ಉನ್ನತ ಸ್ಥಾನಮಾನಗಳನ್ನು ಗಳಿಸುವ ಗುರಿಯೊಂದಿಗೆ ಸಾಗಬೇಕೆಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ರಾಮಕೃಷ್ಣ, ಶಿಕ್ಷಕರಾದ ಕೋಠಪ್ಪ ಗುಡದೂರು, ಚೇತನ್ ಕುಮಾರ್, ಮರಿಯಪ್ಪ ಹುಗ್ಗಿ, ನಿರ್ಮತಿ ಕೇಂದ್ರದ ಡಿಡಿ ಮಠಪತಿ, ಜ್ಞಾನಸುಧಾ ಇನ್ನೋವೇಟಿವ್ ಸಲ್ಯೂಶನ್ಸ್ ಸಿಬ್ಬಂದಿ ರಾಹುಲ್ ಸೇರಿದಂತೆ ಅಧಿಕಾರಿಗಳು, ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News