×
Ad

ಚಾಮರಾಜನಗರ: ವಕ್ಫ್ ಆಸ್ತಿ ಅಕ್ರಮ ಮಾರಾಟಕ್ಕೆ ಹುನ್ನಾರ; ಮೂವರು ಆರೋಪಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು

Update: 2021-08-25 11:53 IST

ಚಾಮರಾಜನಗರ, ಆ.25: ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಅಂಜುಮನ್ - ಎ - ಇಸ್ಲಾಮಿಯ ಸಂಸ್ಥೆಯ ಆಸ್ತಿ ಮಾರಾಟ ಹುನ್ನಾರ ಆರೋಪದಡಿ ಸಂಸ್ಥೆ ಅಧ್ಯಕ್ಷ ಸೇರಿ ಮೂವರ ವಿರುದ್ಧ ಮಂಗಳವಾರ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಕೇಸ್ ದಾಖಲಾಗಿದೆ.

ಚಾಮರಾಜನಗರ ಜಿಲ್ಲಾ ವಕ್ಫ್ ಅಧಿಕಾರಿ ಮದೀಹಾ ಇಲ್ಯಾಸ್ ನೀಡಿರುವ ದೂರಿನಂತೆ ಅಂಜುಮನ್ - ಎ - ಇಸ್ಲಾಮಿಯ ಸಂಸ್ಥೆಯ ಅಧ್ಯಕ್ಷ ಸಮೀಉಲ್ಲಾ, ಕಾರ್ಯದರ್ಶಿ ಕೆ.ಎಂ.ಅನ್ವರ್ ಬಾಷಾ ಹಾಗೂ ಸದಸ್ಯ ವಿ.ಎಸ್.ಝಫ್ರುಲ್ಲಾ ಎಂಬವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಬಸ್ತಿಪುರದಲ್ಲಿರುವ ಸರ್ವೇ ನಂ .125 ರ 8.36 ಎಕರೆ ಜಮೀನು ಆಸ್ತಿ ಅಂಜುಮನ್ - ಎ - ಇಸ್ಲಾಮಿಯಾ ಸಂಸ್ಥೆಗೆ ಸೇರಿದ್ದು. ಈ ಆಸ್ತಿಗೆ ಸಂಬಂಧಿಸಿದ ವಿವಾದ ಹೈಕೋರ್ಟ್ ನಲ್ಲಿ ವಿಚಾರಣೆಯಲ್ಲಿದೆ. ಈ ನಡುವೆ ಪ್ರಕರಣದ ಪ್ರತಿವಾದಿಗಳೊಂದಿಗೆ ಆರೋಪಿಗಳು ಶಾಮೀಲಾಗಿ ಆಸ್ತಿಯನ್ನು ಬೇರೆಯವರಿಗೆ ಮಾರಾಟ ಮಾಡಲು ಯತ್ನಿಸಿದ್ದಾರೆ ಎಂದು ದೂರಲಾಗಿದೆ.

ಈ ಬಗ್ಗೆ ದಾಖಲೆ ಸಮೇತ ಖಚಿತ ಮಾಹಿತಿ ಆಧರಿಸಿ ವ್ಯಕ್ತಿಯೊಬ್ಬರು ರಾಜ್ಯ ವಕ್ಸ್ ಮಂಡಳಿಗೆ ದೂರು ನೀಡಿದ್ದರು. ಹೀಗಾಗಿ ರಾಜ್ಯ ವಕ್ಸ್ ಮಂಡಳಿಯ ನಿವೃತ್ತ ಕೆಎಎಸ್ ಅಧಿಕಾರಿ ಮುಜೀಬುಲ್ಲಾ ಝಫಾರಿ ಎಂಬವರಿಂದ ಪ್ರಕರಣದ ವಿಚಾರಣೆ ನಡೆಸಲಾಗಿತ್ತು. ದೂರಿನಲ್ಲಿ ಸತ್ಯಾಂಶವಿದೆ ಎಂಬುದನ್ನು ಖಚಿತಪಡಿಸಿಕೊಂಡ ನಂತರ ಹಾಗೂ ವಿಚಾರಣಾಧಿಕಾರಿ ಶಿಫಾರಸಿನ ಮೇರೆಗೆ ಆರೋಪಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಚಾಮರಾಜನಗರ ಜಿಲ್ಲಾ ವಕ್ಸ್ ಅಧಿಕಾರಿಗೆ ಸೂಚಿಸಿದ್ದರು. ಅದರಂತೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News