×
Ad

ಮೈಸೂರು ಮನಪಾ ಮೇಯರ್ ಚುನಾವಣೆ: ಪ್ರಥಮ ಬಾರಿ ಮೇಯರ್ ಪಟ್ಟಕ್ಕೇರಿದ ಬಿಜೆಪಿ

Update: 2021-08-25 12:57 IST

ಮೈಸೂರು: ಮೈಸೂರು ಮಹಾನಗರ ಪಾಲಿಕೆಯಲ್ಲಿನ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಮುರಿದು ಬಿದ್ದಿದ್ದು ಮೊದಲ ಬಾರಿಗೆ ಬಿಜೆಪಿ ಮೇಯರ್ ಗದ್ದುಗೆ ಅಲಂಕರಿಸಿದೆ.

ಮೈಸೂರು ಮಹಾನಗರ ಪಾಲಿಕೆಯ 38 ವರ್ಷಗಳ ಪಾಲಿಕೆ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಜೆಪಿಯ ಸುನಂದಾ ಪಾಲನೇತ್ರ 23ನೇ ಮೇಯರ್ ಆಗಿ ಆಯ್ಕೆಯಾಗುವ ಮೂಲಕ ಕಮಲವನ್ನು ಅರಳಿಸಿದ್ದಾರೆ.

ಆಸ್ತಿ ವಿವರ ನೀಡುವಲ್ಲಿ ಸುಳ್ಳು ದಾಖಲೆಗಳನ್ನು ನೀಡಿದ ಆರೋಪದಲ್ಲಿ ಮೇಯರ್ ಆಗಿದ್ದ ಜೆಡಿಎಸ್- ಕಾಂಗ್ರೆಸ್ ಮೈತ್ರಿಯ ಜೆಡಿಎಸ್  ರುಕ್ಮುಣಿ ಮಾದೇಗೌಡ ಅವರ ಸದಸ್ಯತ್ವ ರದ್ದಾದ ಹಿನ್ನಲೆಯಲ್ಲಿ ತೆರವಾಗಿದ್ದ ಮೇಯರ್  ಸ್ಥಾನಕ್ಕೆ ಬುಧವಾರ ಚುನಾವಣೆ ನಡೆಯಿತು.

ಇಂದು ಬೆಳಗ್ಗೆ ನಡೆದ ಮೇಯರ್ ಆಯ್ಕೆ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ನಿಂದ 55ನೇ ವಾರ್ಡ್ ಸದಸ್ಯೆ ಶಾಂತಕುಮಾರಿ, ಜೆಡಿಎಸ್ ನಿಂದ ಅಶ್ವಿನಿ ಅನಂತು ಮತ್ತು ಬಿಜೆಪಿಯಿಂದ ಸುನಂದಾ ಪಾಲನೇತ್ರ ನಾಮಪತ್ರ ಸಲ್ಲಿಸಿದ್ದರು.

ಪ್ರಾದೇಶಿಕ ಆಯುಕ್ತ ಹಾಗೂ ಚುನಾವಣಾಧಿಕಾರಿ ಜಿ.ಡಿ.ಪ್ರಕಾಶ್ ಕೈ ಎತ್ತುವ ಮೂಲಕ ಚುನಾವಣ ಪ್ರಕ್ರಿಯೆ ಆರಂಭಿಸಿದರು. ಮೊದಲಿಗೆ ಕಾಂಗ್ರೆಸ್ ಪಕ್ಷದ ಶಾಂತಕುಮಾರಿ ಪರ 22 ಮತಗಳು ಲಭಿಸಿದವು. ನಂತರ ಬಿಜೆಪಿಯ ಸುನಂದಾ ಪಾಲನೇತ್ರ ಪರ 26 ಮತಗಳು ಬಂದವು. ಕೊನೆಯದಾಗಿ ಜೆಡಿಎಸ್ ನ ಅಶ್ವಿನಿ ಅನಂತು ಪರವೂ 22 ಮತಗಳು ಲಭಿಸಿದವು. ಅಂತಿಮವಾಗಿ ಚುನಾವಣಾಧಿಕಾರಿಗಳು ಬಿಜೆಪಿಯ ಸುನಂದಾ ಪಾಲನೇತ್ರ ಅವರ ಆಯ್ಕೆಯನ್ನು ಅಧಿಕೃತವಾಗಿ ಘೋಷಿಸಿದರು.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುರಿದುಬಿದ್ದ ಹಿನ್ನೆಲೆಯಲ್ಲಿ ಅತಿ ಹೆಚ್ಚು ಸದಸ್ಯರನ್ನು ಹೊಂದಿದ್ದ ಬಿಜೆಪಿ ನಿರಾಯಸವಾಗಿ ಮೇಯರ್ ಪಟ್ಟಕ್ಕೇರಿತು.

ನೂತನ ಮೇಯರ್ ಅವರ ಅಧಿಕಾರಾವಧಿ ಇನ್ನು ಆರು ತಿಂಗಳು ಮಾತ್ರವಾಗಿರುತ್ತದೆ.


ಮುರಿದುಬಿದ್ದ ಜೆಡಿಎಸ್-ಕಾಂಗ್ರೆಸ್ ಮೈತ್ರಿ

ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮೇಯರ್ ಅಭ್ಯರ್ಥಿ ಪರ ಜೆಡಿಎಸ್ ಕಾರ್ಯಕರ್ತರು ಮತ ಚಲಾಯಿಸಲಿಲ್ಲ ಎಂದು ಆಕ್ರೋಶಗೊಂಡ ಕಾಂಗ್ರೆಸ್ ಸದಸ್ಯರು, ಜೆಡಿಎಸ್ ಪಕ್ಷದವರು ಮೋಸ  ಮಾಡಿದರು ಎಂದು ಧಿಕ್ಕಾರ ಕೂಗಿ ಸಭೆಯನ್ನು ಬಹಿಷ್ಕರಿಸಿ ಹೊರನಡೆದರು. ಬಳಿಕ ಪಾಲಿಕೆ ಜೆಡಿಎಸ್ ಸದಸ್ಯರು ಕಾಂಗ್ರೆಸ್ ವಿರುದ್ಧ ಘೋಷಣೆಗಳನ್ನು ಕೂಗಿದರು.


ಶ್ಲಾಘಿಸಿದ ಮುಖ್ಯಮಂತ್ರಿ

ಮೈಸೂರು ಮಹಾನಗರ ಪಾಲಿಕೆಯ 38 ವರ್ಷಗಳ ಇತಿಹಾಸದಲ್ಲಿ ಬಿಜೆಪಿ ಪ್ರಥಮ ಬಾರಿಗೆ ಮೇಯರ್ ಪಟ್ಟ ಅಲಂಕರಿಸಿದೆ. ಇದಕ್ಕೆ ಸಹಕಾರ ಸಚಿವರಾಗಿರುವ ಎಸ್.ಟಿ.ಸೋಮಶೇಖರ್ ಅವರ ಪಾತ್ರ ಬಹಳ ದೊಡ್ಡದಿದೆ. ಪಕ್ಷಕ್ಕಾಗಿ ಅವರ ದುಡಿಮೆ, ಶ್ರಮ ನಿಜಕ್ಕೂ ಸಾರ್ಥಕವಾಗಿದೆ. ಈ ಅವಕಾಶವನ್ನು ಪಕ್ಷ ಸದುಪಯೋಗಪಡಿಸಿಕೊಂಡು ಮೈಸೂರಿನಲ್ಲಿ ಮತ್ತಷ್ಟು ಅಭಿವೃದ್ಧಿಯನ್ನು ಮಾಡಿ ತೋರಿಸಲಿ ಎಂದು ಹಾರೈಸುವೆ.

-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

-------

ಬಿಜೆಪಿ ರಾಜ್ಯಾಧ್ಯಕ್ಷರಿಂದ ಅಭಿನಂದನೆ

ಮೇಯರ್ -  ಪಟ್ಟ ಬಿಜೆಪಿಗೆ ಒಲಿಯುತ್ತಿದ್ದಂತೆ ದೂರವಾಣಿ ಕರೆ ಮಾಡಿ ಅಭಿನಂದನೆ ತಿಳಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರು, ಮೈಸೂರಿನಲ್ಲಿ ಬಿಜೆಪಿ ಪಾಲಿಗೆ ಹೊಸ ಇತಿಹಾಸ ಸೃಷ್ಟಿ ಮಾಡಿದ್ದಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಲ್ಲದೆ, ಪಕ್ಷಕ್ಕಾಗಿ ಸೇವೆ ಹೀಗೆಯೇ ಮುಂದುವರಿಯಲಿ ಎಂದು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News