ತಪ್ಪಾಗಿರುವ ಗ್ರಾಮ, ನಗರಗಳ ಹೆಸರು ಸರಿಪಡಿಸಿ: `ಗೂಗಲ್ ಇಂಡಿಯಾ'ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಪತ್ರ

Update: 2021-08-25 11:50 GMT

ಬೆಂಗಳೂರು, ಆ. 25: ರಾಜ್ಯದ ಬಹಳಷ್ಟು ಗ್ರಾಮ ಮತ್ತು ನಗರಗಳ ಹೆಸರನ್ನು ತಪ್ಪು ತಪ್ಪಾಗಿ ಗೂಗಲ್ ಮ್ಯಾಪ್‍ನಲ್ಲಿ ದಾಖಲಿಸಿರುವುದನ್ನು ಕೂಡಲೇ ಸರಿಪಡಿಸಿ ಬಳಕೆಗೆ ಒದಗಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಗೂಗಲ್ ಇಂಡಿಯಾ ಪ್ರೈ.ಲಿ.ಗೆ ಪತ್ರ ಬರೆಯಲಾಗಿದೆ.

ಗೂಗಲ್ ಮ್ಯಾಪ್‍ನಲ್ಲಿ ರಾಜ್ಯದ ಬಹಳಷ್ಟು ಗ್ರಾಮ/ನಗರಗಳ ಹೆಸರುಗಳನ್ನು ತಪ್ಪು ತಪ್ಪಾಗಿ ದಾಖಲಿಸಿರುವುದನ್ನು ಪ್ರಾಧಿಕಾರ ಗಮನಿಸಿದೆ. ಪ್ರವಾಸಿಗರಿಗೆ ಅನುಕೂಲವಾಗುವ ದೃಷ್ಟಿಯಿಂದ ಗೂಗಲ್ ಮ್ಯಾಪ್ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಪರಿಣಾಮಕಾರಿಯಾಗಿ ಸಾರ್ವಜನಿಕರಿಗೆ ಸಹಾಯವಾಗುತ್ತಿರುವುದು ತಮಗೂ ತಿಳಿದ ವಿಷಯವಾಗಿದೆ. ಪ್ರವಾಸಿಗ ಗೊತ್ತಿರದ ಊರುಗಳಿಗೆ ಹೋದ ಸಂದರ್ಭದಲ್ಲಿ ಪ್ರಸ್ತುತ ವ್ಯಕ್ತಿಗಳಿಗಿಂತ ಹೆಚ್ಚಾಗಿ ಗೂಗಲ್ ಮ್ಯಾಪ್ ಅನ್ನು ಬಳಸುತ್ತಿದ್ದಾನೆ ಎಂದು ಗಮನ ಸೆಳೆದಿದೆ.

ಹೀಗಾಗಿ ಗೂಗಲ್ ಮ್ಯಾಪ್‍ನಲ್ಲಿರುವ ರಾಜ್ಯದ ನಗರಗಳ ತಪ್ಪು ಹೆಸರುಗಳನ್ನು ಕೂಡಲೇ ಸರಿಪಡಿಸಿ ಸಾರ್ವಜನಿಕ ಬಳಕೆಗೆ ಒದಗಿಸುವಂತೆ ಆಗ್ರಹಿಸಿದೆ. ಈ ಸಂಬಂಧ ಅಗತ್ಯವಿದ್ದಲ್ಲಿ ಪ್ರಾಧಿಕಾರ ಸಹಾಯವನ್ನು ಒದಗಿಸಲು ಸಿದ್ಧವಿದೆ ಎಂದು ಪ್ರಾಧಿಕಾರದಿಂದ ಗೂಗಲ್ ಇಂಡಿಯಾಗೆ ಬರೆದ ಪತ್ರದಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News