ದಸಂಸ ಅಧ್ಯಕ್ಷ ರಘು ವಿರುದ್ಧ ಮಾನನಷ್ಟ ಮೊಕದ್ದಮೆ: ನಟ ಜಗ್ಗೇಶ್ ಎಚ್ಚರಿಕೆ

Update: 2021-08-25 12:15 GMT
ನಟ ಜಗ್ಗೇಶ್

ಬೆಂಗಳೂರು, ಆ. 25: ಬೆಂಗಳೂರು ಮಹಾ ನಗರ ಪಾಲಿಕೆ(ಬಿಬಿಎಂಪಿ) ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಸ್ವೆಟರ್ ನೀಡದೇ ವಂಚನೆ ಆರೋಪಕ್ಕೆ ಸಂಬಂಧಪಟ್ಟಂತೆ ಯಾವುದೇ ಸಂಬಂಧವಿಲ್ಲದೇ ತಮ್ಮ ಹಾಗೂ ಸಚಿವ ಆರ್.ಅಶೋಕ್ ಹೆಸರನ್ನು ತೆಗೆದ ದಲಿತ ಸಂಘರ್ಷ ಸಮಿತಿ(ದಸಂಸ) ರಾಜ್ಯಾಧ್ಯಕ್ಷ ಸಿ.ಎಸ್.ರಘು ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲಾಗುವುದು ಎಂದು ಚಿತ್ರನಟ ಜಗ್ಗೇಶ್ ಎಚ್ಚರಿಕೆ ನೀಡಿದ್ದಾರೆ.

ಬುಧವಾರ ಸರಣಿ ಟ್ವೀಟ್ ಮಾಡಿರುವ ಅವರು, ಬಿಬಿಎಂಪಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಸ್ವೆಟರ್‍ಗಳನ್ನು ಕರ್ನಾಟಕ ಕೈಮಗ್ಗ ನಿಗಮದಿಂದ ಖರೀದಿಸಲಾಗಿದೆ. ಕೆಟಿಪಿಪಿ ಕಾಯ್ದೆಯ 4ಜಿ ಸೆಕ್ಷನ್ ಅಡಿ ವಿನಾಯಿತಿ ಪಡೆದು ಟೆಂಡರ್ ಕರೆಯದೆಯೇ ಸ್ವೆಟರ್ ಖರೀದಿಸಿ, 1.76 ಕೋಟಿ ರೂ.ಹಣ ಪಾವತಿಸಿ ಅಕ್ರಮ ನಡೆಸಲಾಗಿದೆ ಎಂದು ನಟ ಕೋಮಲ್, ಜಗ್ಗೇಶ್ ಹಾಗೂ ಕಂದಾಯ ಸಚಿವ ಆರ್.ಅಶೋಕ್ ಹೆಸರಿಸಿ ದಸಂಸ ಅಧ್ಯಕ್ಷ ರಘು ಆರೋಪಿಸಿದ್ದರು.

ಇದು ನನಗೆ ಅತೀವ ನೋವುಂಟು ಮಾಡಿದೆ. ಹಾಗಾಗಿ ಸಂಬಂಧವಿಲ್ಲದೆ ನನ್ನ ಬಗ್ಗೆ ಸುಳ್ಳು ಆಪಾದನೆ ಮಾಡಿರುವ ರಘು ಅವರ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಿಸುತ್ತಿರುವೆ. ದಯಮಾಡಿ ಯಾರೇ ಆಗಲಿ ಸತ್ಯ ಅರಿತು ನುಡಿಯುವ ಗುಣ ಬೆಳೆಸಿಕೊಳ್ಳಬೇಕು. ನಾನು ಉತ್ತಮ ಎಂದು ಅಧಮರಿಗೆ ಎದೆಬಗೆದು ವ್ಯರ್ಥ ತೋರಿಕೆ ಏಕೆ ಬೇಕು. ಆನೆ ರಾಜಮಾರ್ಗದಲ್ಲಿ ಆಗಲಿ ಅಥವಾ ಗಲ್ಲಿಯಲ್ಲಾಗಲಿ ನಡೆವಾಗ ನಾಯಿ ಬೊಗಳುವುದು ಸಹಜ. ನಮ್ಮ ಗುಣ ಆನೆಯಂತೆ ಇದ್ದಾಗ ಬೊಗಳುವ ನಾಯಿಗಳ ಸಮಕ್ಕೆ ನಾವು ಇಳಿಯಬಾರದು. ಆಕಸ್ಮಿಕ ಸಿಟ್ಟಿಗೆ ಇಳಿದರೆ ನಮ್ಮ ಆನೆಯ ಸ್ಥಾನ ನಾಯಿಗೆ ಸಮ ಆಗುತ್ತದೆ. ನಾನು ಕಲಿತ ನೀತಿಪಾಠ ಇಂದಿನ ಸಮಾಜದ ನಡೆಗೆ ಎಂದು ಉಲ್ಲೇಖಿಸಿದ ಜಗ್ಗೇಶ್, ಪ್ರತಿಭಟನೆ ನಡೆಸಿದವರನ್ನು ಪರೋಕ್ಷವಾಗಿ ಶ್ವಾನಕ್ಕೆ ಹೋಲಿಕೆ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News