ಖಾತೆ ಹಂಚಿಕೆ ಬಿಕ್ಕಟ್ಟು : ದಿಲ್ಲಿಯಲ್ಲಿ ವರಿಷ್ಠರೊಂದಿಗೆ ಸಿಎಂ ಬೊಮ್ಮಾಯಿ ಸಮಾಲೋಚನೆ
ಬೆಂಗಳೂರು, ಆ. 25: ಖಾತೆ ಹಂಚಿಕೆ ಬಿಕ್ಕಟ್ಟು, ಕೋವಿಡ್ ಲಸಿಕೆ, ಮೇಕೆದಾಟು ಅಣೆಕಟ್ಟು ಸೇರಿದಂತೆ ನೀರಾವರಿ ಯೋಜನೆಗಳ ಕುರಿತು ಬಿಜೆಪಿ ಹೈಕಮಾಂಡ್ ಹಾಗೂ ಕೇಂದ್ರ ಸಚಿವರ ಭೇಟಿ ನಿಮಿತ್ತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೊಸದಿಲ್ಲಿಗೆ ತೆರಳಿದ್ದು, ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹಾಗೂ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆ.
ಬುಧವಾರ ಮಧ್ಯಾಹ್ನ ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊಸದಿಲ್ಲಿಗೆ ತೆರಳಿದ ಬಸವರಾಜ ಬೊಮ್ಮಾಯಿ ಅವರು, ತಮ್ಮ ಸಂಪುಟದ ಹಿರಿಯ ಸಚಿವರಾದ ಗೋವಿಂದ ಎಂ.ಕಾರಜೋಳ ಹಾಗೂ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರೊಂದಿಗೆ ಹೊಸದಿಲ್ಲಿಗೆ ತೆರಳಿದ್ದು, ಮೇಕೆದಾಟು ಅಣೆಕಟ್ಟು ಸೇರಿದಂತೆ ನೀರಾವರಿ ಯೋಜನೆಗಳ ಬಗ್ಗೆ ಚರ್ಚಿಸಿದ್ದಾರೆ.
ನಾಳೆ ಕೇಂದ್ರ ಆರೋಗ್ಯ ಸಚಿವ ಮುನ್ಸುಖ್ ಮಾಂಡವಿಯ ಅವರನ್ನು ಭೇಟಿಯಾಗಿ ಕರ್ನಾಟಕ ರಾಜ್ಯಕ್ಕೆ ನೀಡುತ್ತಿರುವ ಕೋವಿಡ್ ಲಸಿಕೆ ಪ್ರಮಾಣ ಹೆಚ್ಚಿಸುವಂತೆ ಮನವಿ ಮಾಡಲಿದ್ದಾರೆ. ಅಲ್ಲದೆ, ಇದೇ ಸಂದರ್ಭದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಲಿದ್ದು, ರಾಜ್ಯಕ್ಕೆ ಬರಬೇಕಿರುವ ಜಿಎಸ್ಟಿ ಬಾಕಿ ಸೇರಿದಂತೆ ಇನ್ನಿತರ ವಿಚಾರಗಳ ಕುರಿತು ಮಾತುಕತೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ.
ವರಿಷ್ಠರ ಭೇಟಿ ಸಾಧ್ಯತೆ: ತಾನು ಬಯಸಿದ ಖಾತೆ ಸಿಗದ ಹಿನ್ನೆಲೆಯಲ್ಲಿ ಮುನಿಸಿಕೊಂಡಿರುವ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಒತ್ತಡದ ಮಧ್ಯೆ ಸಚಿವ ಸ್ಥಾನ ಅಲಂಕರಿಸಿದ್ದು, ಅವರ ಖಾತೆ ಬದಲಾವಣೆ ಸಂಬಂಧ ಸಿಎಂ ಬೊಮ್ಮಾಯಿ ಅವರು ಹೈಕಮಾಂಡ್ ಭೇಟಿ ಮಾಡುವ ಸಾಧ್ಯತೆಗಳಿವೆ. ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲಿದ್ದಾರೆಂದು ಮೂಲಗಳು ತಿಳಿಸಿವೆ
ಅಲ್ಲದೆ, ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಈ ತಿಂಗಳ 28ಕ್ಕೆ ಒಂದು ತಿಂಗಳ ಪೂರ್ಣಗೊಳ್ಳಲಿದೆ. ಇದೇ ವೇಳೆ ಖಾತೆ ಅಸಮಾಧಾನ ಶಮನಗೊಳಿಸುವ ನಿಟ್ಟಿನಲ್ಲಿ ಕೆಲಸ ಖಾತೆ ಬದಲಾವಣೆ ಅಥವಾ ಸಂಪುಟ ವಿಸ್ತರಣೆ ಸಾಧ್ಯತೆಗಳ ಬಗ್ಗೆಯೂ ಬಿಜೆಪಿ ವಲಯದಲ್ಲಿ ಗುಸು ಗುಸು ಆರಂಭವಾಗಿದ್ದು, ವರಿಷ್ಟರು ಯಾವ ಸೂಚನೆ ನೀಡಲಿದ್ದಾರೆಂಬ ಕುತೂಹಲ ಮನೆ ಮಾಡಿದೆ.
ಮೈಸೂರಿನ ಚಾಮುಂಡಿ ಬೆಟ್ಟದ ಬಳಿ ಕಾಲೇಜು ವಿದ್ಯಾರ್ಥಿನಿಯ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ಈಗಾಗಲೇ ಪೊಲೀಸರು ಯುವತಿ ಹೇಳಿಕೆಯನ್ನು ಆಧರಿಸಿ ತನಿಖೆ ಕೈಗೊಂಡಿದ್ದು, ಈ ಪೈಶಾಚಿಕ ಕೃತ್ಯದಲ್ಲಿ ಯಾರೇ ಭಾಗಿಯಾಗಿದ್ದರೂ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದೇನೆ'
-ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ