×
Ad

ರೈತರ ಆದಾಯ ದ್ವಿಗುಣಗೊಳಿಸಿದ ಮೊದಲ ರಾಜ್ಯ ಕರ್ನಾಟಕ ಆಗಬೇಕು:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Update: 2021-08-25 18:02 IST

ಬೆಂಗಳೂರು, ಆ. 25: ರಾಜ್ಯದಲ್ಲಿನ ರೈತರ ಆದಾಯ ದ್ವಿಗುಣಗೊಳಿಸಲು ಸರಕಾರ ಹಲವಾರು ಕ್ರಮ ಕೈಗೊಂಡಿದ್ದು, ರೈತರ ಕೃಷಿ ಉತ್ಪನ್ನಗಳ ಮೌಲ್ಯ ಹೆಚ್ಚಿಸಲು 2ನೆ ಕೃಷಿ ನಿರ್ದೇಶನಾಲಯವನ್ನು ಅಸ್ತಿತ್ವಕ್ಕೆ ತರಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದಿಲ್ಲಿ ಭರವಸೆ ವ್ಯಕ್ತಪಡಿಸಿದ್ದಾರೆ.

ಬುಧವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ 2023ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸುವ ಕಾರ್ಯತಂತ್ರ ಕುರಿತಂತೆ ಕೇಂದ್ರ ಸರಕಾರ ರಚಿಸಿರುವ ಉನ್ನತಾಧಿಕಾರ ಸಮಿತಿಯ ಕಾರ್ಯತಂತ್ರ ಕುರಿತಂತೆ ಕೃಷಿ ಸಚಿವಾಲಯದ ಡಾ.ಅಶೋಕ್ ದಳವಾಯಿ ಅವರು ಪ್ರಾತ್ಯಕ್ಷಿಕೆ ನಡೆಸಿಕೊಟ್ಟ ಬಳಿಕ ಮಾತನಾಡಿದ ಅವರು, ತೋಟಗಾರಿಕೆ, ಹೈನುಗಾರಿಕೆ, ರೇಶ್ಮೆ, ಪಶುಸಂಗೋಪನೆ, ಡೈರಿ, ಮೀನುಗಾರಿಕೆ ಒಳಗೊಂಡಂತೆ ಆಗ್ರೋ ಉತ್ಪನ್ನಗಳ ಸಂಸ್ಕರಣೆಗೆ ಒತ್ತು ನೀಡಿ ಉತ್ಪನ್ನಗಳ ಮೌಲ್ಯ ಹೆಚ್ಚಿಸಲು ವಿಶೇಷ ಕಾರ್ಯಪಡೆಯನ್ನು ರಚಿಸಲಾಗುವುದು ಎಂದು ತಿಳಿಸಿದರು.

ಇದಕ್ಕೆ ಸೆಕೆಂಡರಿ ಅಗ್ರಿಕಲ್ಚರ್ ಡೈರೆಕ್ಟರೇಟ್ ಎಂದು ಹೆಸರಿಟ್ಟು ಕೃಷಿಯಲ್ಲಿ ದೊಡ್ಡ ಬದಲಾವಣೆ ಮಾಡುವ ಮೂಲಕ ರೈತರ ಆದಾಯ ದ್ವಿಗುಣಕ್ಕೆ ಒತ್ತು ನೀಡಲಾಗುವುದು. ಇಡೀ ದೇಶದಲ್ಲೇ ರೈತರ ಆದಾಯವನ್ನು ದ್ವಿಗುಣಗೊಳಿಸಿದ ಮೊದಲ ರಾಜ್ಯ ಕರ್ನಾಟಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಬೇಕು ಎಂಬ ಬಯಕೆ ನಮ್ಮದು. ರೈತರ ಆದಾಯ ದ್ವಿಗುಣಕ್ಕೆ ಬಹಳಷ್ಟು ಆಸಕ್ತಿ ತೆಗೆದುಕೊಂಡು ಹಲವಾರು ಕ್ರಮಗಳನ್ನು ಜಾರಿಗೊಳಿಸಲಾಗುವುದು ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ರೈತರ ಆದಾಯ ದ್ವಿಗುಣಗೊಳಿಸಲು ಕೇಂದ್ರ ಸರಕಾರ ನಮ್ಮ ಜತೆ ಕೈಜೋಡಿಸಲು ಸಿದ್ಧವಿದೆ. ಹೀಗಾಗಿ ಇಲ್ಲಿ ರೈತರಿರುವ ಸಮಿತಿಯನ್ನು ರಚಿಸಿ ಕೇಂದ್ರದ ಜತೆ ನಿರಂತರ ಸಂಪರ್ಕದಲ್ಲಿಟ್ಟುಕೊಂಡು ಕರ್ನಾಟಕಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ವರದಿಯನ್ನು ಜಾರಿಗೊಳಿಸುತ್ತೇವೆ. ಬಿತ್ತನೆ ಬೀಜ, ಕೀಟನಾಶಕ, ರಸಗೊಬ್ಬರ ನಿರ್ವಹಣೆಯನ್ನು ಸುಧಾರಿಸಿ ಭೂಮಿಯ ಫಲವತ್ತತೆಯನ್ನು ಹೆಚ್ಚಿಸಲು ಕೃಷಿ ವಿಶ್ವ ವಿದ್ಯಾಲಯಗಳ ಸಹಾಯ ತೆಗೆದುಕೊಳ್ಳಲು ಕೃಷಿ ಸಚಿವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗುವುದು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ಅಶೋಕ್ ದಳವಾಯಿ, ಕೃಷಿ ಸಚಿವ ಬಿ.ಸಿ.ಪಾಟೀಲ್, ತೋಟಗಾರಿಕೆ ಸಚಿವ ಮುನಿರತ್ನ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್ ಸೇರಿದಂತೆ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಹಿರಿಯ ಅಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News