ಸೆ.15ರೊಳಗೆ ಎಲ್ಲ ಶಾಲೆಗಳಿಗೆ ಪಠ್ಯ ಪುಸ್ತಕ ಪೂರೈಕೆ: ಸಚಿವ ಬಿ.ಸಿ ನಾಗೇಶ್

Update: 2021-08-25 14:08 GMT

ಬೆಂಗಳೂರು, ಆ.25, ರಾಜ್ಯದ ಎಲ್ಲ ಸರಕಾರಿ ಶಾಲೆಗಳಿಗೆ ಪಠ್ಯ ಪುಸ್ತಕಗಳನ್ನು ಸೆಪ್ಟೆಂಬರ್ 15ರೊಳಗೆ ಪೂರೈಕೆ ಮಾಡುವ ಗುರಿ ಹೊಂದಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್-19 ಕಾರಣದಿಂದ ಸರಕಾರಿ ಮುದ್ರಣಾಲಯಗಳು ಕೆಲ ಅವಧಿಗೆ ಮುದ್ರಣ ಸ್ಥಗಿತಗೊಳಿಸಿದ್ದವು. ಹೀಗಾಗಿ, ಮುದ್ರಣ ಪ್ರಕ್ರಿಯೆ ವಿಳಂಬವಾಗಿದೆ. ಆದರೂ, ಶಾಲೆ ಆರಂಭಕ್ಕೆ ಮೊದಲೇ ಶೇ.50ರಷ್ಟು ಪಠ್ಯಪುಸ್ತಕಗಳು ಶಾಲೆಗಳನ್ನು ತಲುಪಬೇಕು ಎಂಬ ಗುರಿ ಹೊಂದಲಾಗಿತ್ತು. ಅದರಂತೆ ರಾಜ್ಯದ ಶೇ.50ಕ್ಕಿಂತ ಹೆಚ್ಚು ಶಾಲೆಗಳಿಗೆ ಪುಸ್ತಕಗಳನ್ನು ಪೂರೈಸಲಾಗಿದೆ ಎಂದು ತಿಳಿಸಿದ್ದಾರೆ.

ಇಲ್ಲಿಯವರೆಗೆ ಶೇ.70ಕ್ಕಿಂತ ಹೆಚ್ಚು ಪಠ್ಯ ಪುಸ್ತಕಗಳು ಮುದ್ರಣಗೊಂಡಿವೆ. ಮುಂದಿನ ಒಂದು ವಾರದೊಳಗೆ ಮುದ್ರಣಗೊಂಡಿರುವ ಎಲ್ಲ ಪುಸ್ತಕಗಳು ಶಾಲೆಗಳಿಗೆ ತಲುಪುವಂತೆ ವ್ಯವಸ್ಥೆ ಮಾಡಲಾಗುತ್ತದೆ. ಆಯಾ ತರಗತಿಗಳಿಗೆ ಸಂಬಂಧಿಸಿದ ಎಲ್ಲ ವಿಷಯ, ಭಾಷೆ ಪುಸ್ತಕಗಳು ಮುದ್ರಣಗೊಂಡ ಕೂಡಲೇ ಶಾಲೆಗಳಿಗೆ ಪೂರೈಕೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಆನ್‍ಲೈನ್ ಶಿಕ್ಷಣದ ಅಗತ್ಯಕ್ಕೆ ತಕ್ಕಂತೆ ಪಠ್ಯವನ್ನು ಸಿದ್ಧಪಡಿಸಿ ಆನ್‍ಲೈನ್‍ಗೆ ಅಪ್‍ಲೋಡ್ ಮಾಡಲಾಗಿತ್ತು. ಅವುಗಳನ್ನು ಡೌನ್‍ಲೋಡ್ ಮಾಡಿಕೊಳ್ಳುವಂತೆ ಮಕ್ಕಳಿಗೆ, ಪಾಲಕರಿಗೆ ತಿಳಿಸಲಾಗಿತ್ತು. ಹೀಗಾಗಿ, ಬಹುತೇಕ ಮಕ್ಕಳು ಆನ್‍ಲೈನ್‍ನಲ್ಲೇ ಪುಸ್ತಕಗಳನ್ನು ಡೌನ್‍ಲೋಡ್ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ’ ಎಂದು ಅವರು ಹೇಳಿದ್ದಾರೆ.

‘ಶಾಲೆಗಳ ಮುಖ್ಯ ಶಿಕ್ಷಕರಿಗೆ, ಆಡಳಿತ ಮಂಡಳಿಗಳಿಗೆ ಪಠ್ಯ ಪುಸ್ತಕಗಳನ್ನು ಡೌನ್‍ಲೋಡ್ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡುವಂತೆ ಈಗಾಗಲೇ ಸೂಚನೆ ನೀಡಲಾಗಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News