ಚಿಕ್ಕಮಗಳೂರು: ಅಕ್ರಮ ಸಕ್ರಮ ಸಮಿತಿಯಿಂದ ಕಿರುಕುಳ ಆರೋಪ; ಡೆತ್‍ನೋಟ್ ಬರೆದಿಟ್ಟು ಕಂದಾಯ ನಿರೀಕ್ಷಕ ಆತ್ಮಹತ್ಯೆ

Update: 2021-08-25 14:27 GMT

ಚಿಕ್ಕಮಗಳೂರು, ಆ.25: ಅಕ್ರಮ ಸಕ್ರಮ ಸಮಿತಿಯವರ ಕಿರುಕುಳಕ್ಕೆ ಬೇಸತ್ತು ಕಂದಾಯ ನಿರೀಕ್ಷಕರೊಬ್ಬರು ಡೆತ್‍ನೋಟ್ ಬರೆದಿಟ್ಟು ನೀರಿನ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಲಕ್ಕವಳ್ಳಿ ಗ್ರಾಮದಲ್ಲಿ ವರದಿಯಾಗಿದೆ.

ಲಕ್ಕವಳ್ಳಿ ನಾಡಕಚೇರಿಯ ಕಂದಾಯ ನಿರೀಕ್ಷಕ ಸೋಮಶೇಖರ್(45) ಆತ್ಮಹತ್ಯೆಗೆ ಶರಣಾದ ಅಧಿಕಾರಿಯಾಗಿದ್ದಾರೆ. ಈ ಹಿಂದೆ ಬಾಳೆಹೊನ್ನೂರು ನಾಡಕಚೇರಿಯಲ್ಲಿ ಗ್ರಾಮ ಲೆಕ್ಕಿಗರಾಗಿ ಸೇವೆ ಸಲ್ಲಿಸಿದ್ದ ಸೋಮಶೇಖರ್ ಅವರು ಇತ್ತೀಚೆಗೆ ಭಡ್ತಿ ಹೊಂದಿ ಲಕ್ಕವಳ್ಳಿಯಲ್ಲಿ ಕಂದಾಯ ನಿರೀಕ್ಷಕರಾಗಿ ಸೇವೆಯಲ್ಲಿದ್ದರು.

ಬುಧವಾರ ಮಧ್ಯಾಹ್ನದ ವೇಳೆಯಲ್ಲಿ ಲಕ್ಕವಳ್ಳಿ ಪಟ್ಟಣದ ಸಮೀಪದಲ್ಲಿರುವ ಕದಲಿರಂಗನಾಥ ಸ್ವಾಮಿ ದೇವಾಲಯದ ಬಳಿಯಲ್ಲಿ ಹರಿಯುವ ನಾಲೆಗೆ ಹಾರಿ ಈ ಅಧಿಕಾರಿ ಆತ್ಮಹತ್ಯೆಗೆ ಶರಣಾಗಿದ್ದು, ಕಂದಾಯ ಇಲಾಖೆಯ ಅಕ್ರಮ ಸಕ್ರಮ ಸಮಿತಿಯವರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಂದು ಆತ್ಮಹತ್ಯೆಗೂ ಮುನ್ನ ಸೋಮಶೇಖರ್ ಪತ್ರ ಬರೆದಿಟ್ಟಿದ್ದಾರೆ

ಸ್ಮಶಾನ ಭೂಮಿ ಸೇರಿದಂತೆ ವಿವಿಧ ಸರಕಾರಿ ಭೂಮಿಯ ಒತ್ತುವರಿ ತೆರವು ಮಾಡುವ ಬದಲು ಅದನ್ನು ಅಕ್ರಮ ಮಾಡುವಂತೆ ಸಮಿತಿಯ ಪ್ರಭಾವಿ ಸದಸ್ಯರು ಸೋಮಶೇಖರ್ ಅವರ ಮೇಲೆ ನಿರಂತರವಾಗಿ ಒತ್ತಡ ಹಾಕುತ್ತಾ ಬೆದರಿಕೆಯನ್ನೂ ಹಾಕುತ್ತಿದ್ದರು. ಇದರಿಂದ ಅವರು ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಇದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ಹೇಳಿದ್ದಾರೆ ಎನ್ನಲಾಗಿದೆ.

ಮೃತ ಅಧಿಕಾರಿ ಪತ್ನಿ, ಮಗಳನ್ನು ಅಗಲಿದ್ದು, ಈ ಘಟನೆಗೆ ಕಂದಾಯ ಇಲಾಖೆ ನೌಕರರ ಸಂಘ ತೀವ್ರ ಕಳವಳ ವ್ಯಕ್ತಪಡಿಸಿ ಗುರುವಾರ ಕಪ್ಪುಪಟ್ಟಿ ಧರಿಸಿ ಕೆಲಸ ಮಾಡುವುದರೊಂದಿಗೆ ಅಧಿಕಾರಿಗಳಿಗೆ ನೀಡಲಾಗುತ್ತಿರುವ ಕಿರುಕುಳದ ಬಗ್ಗೆ ಮನವಿ ಸಲ್ಲಿಸಲು ತೀರ್ಮಾನಿಸಿದ್ದಾರೆ.
ಘಟನೆ ಸಂಬಂಧ ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸೋಮಶೇಖರ್ ಅವರ ಮೃತದೇಹವನ್ನು ನೀರಿನಿಂದ ಮೇಲೆತ್ತಿ ಕುಟುಂಬಸ್ಥರಿಗೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News