×
Ad

ಗ್ಯಾಂಗ್ ರೇಪ್ ಪ್ರಕರಣ: ಉನ್ನತ ಅಧಿಕಾರಿಗಳ ತಂಡ ಮೈಸೂರಿಗೆ ರವಾನೆ; ಗೃಹ ಸಚಿವ ಆರಗ ಜ್ಞಾನೇಂದ್ರ

Update: 2021-08-25 20:00 IST

ಬೆಂಗಳೂರು, ಆ.25: ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ನಿನ್ನೆ ಸಂಜೆ ನಡೆದಿರುವ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೆ ಎಫ್‍ಐಆರ್ ದಾಖಲಿಸಲಾಗಿದ್ದು, ಉನ್ನತ ಅಧಿಕಾರಿಗಳ ತಂಡವನ್ನು ಬೆಂಗಳೂರಿನಿಂದ ಮೈಸೂರಿಗೆ ಕಳುಹಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ಬುಧವಾರ ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣವನ್ನು ಸರಕಾರ ಬಹಳ ಗಂಭೀರವಾಗಿ ಪರಿಗಣಿಸಿದ್ದು, ವೈಯಕ್ತಿಕವಾಗಿ ನನಗೂ ನೋವು ತಂದಿದೆ. ಪ್ರವಾಸಿ ತಾಣಗಳಲ್ಲಿ ಇಂತಹ ಘಟನೆಗಳು ಜರುಗಿದರೆ ಸಹಜವಾಗಿಯೇ ಜನರು ಭಯಭೀತರಾಗುತ್ತಾರೆ ಎಂದರು.

ನಾಳೆ ನಾನು ಮೈಸೂರಿಗೆ ತೆರಳುತ್ತಿದ್ದು, ಅಧಿಕಾರಿಗಳ ಜೊತೆ ಸಭೆ ನಡೆಸುತ್ತೇನೆ. ಈವರೆಗೆ ಆರೋಪಿಗಳನ್ನು ಬಂಧಿಸಲಾಗಿಲ್ಲ. ಆರೋಪಿಗಳ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳುತ್ತೇವೆ. ಪ್ರಕರಣದ ತನಿಖೆ ಪ್ರಗತಿಯಲ್ಲಿರುವುದರಿಂದ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಆರಗ ಜ್ಞಾನೇಂದ್ರ ಹೇಳಿದರು.

ಸಾರ್ವಜನಿಕವಾಗಿ ಗಣೇಶ ಚತುರ್ಥಿ ನಿಬರ್ಂಧಿಸಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕೋವಿಡ್ ಮೂರನೇ ಅಲೆ ಬಗ್ಗೆ ತಜ್ಞರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗಣೇಶ ಚತುರ್ಥಿಯನ್ನು ಯಾವ ರೀತಿ ಆಚರಿಸಲು ಅನುಮತಿ ನೀಡಬಹುದು ಎಂಬುದರ ಕುರಿತು ಮುಖ್ಯಮಂತ್ರಿ ಜೊತೆ ಕೂತು ಚರ್ಚಿಸಿ ನಿರ್ಧರಿಸುತ್ತೇವೆ ಎಂದರು.

ಸಾರ್ವಜನಿಕವಾಗಿ ಗಣೇಶ ಚತುರ್ಥಿ ಆಚರಣೆಗೆ ಅವಕಾಶ ಕೋರಿ ನಮ್ಮ ಪಕ್ಷದ ಶಾಸಕರೇ ಒತ್ತಾಯಿಸುತ್ತಿದ್ದಾರೆ. ಆದರೆ, ಮೊದಲು ಜನರ ಜೀವ ಮುಖ್ಯ. ಮಿಕ್ಕಿದ್ದೆಲ್ಲ ನಂತರ. ಸರಕಾರ ಹಬ್ಬವನ್ನೆ ಆಚರಿಸಬಾರದು ಎಂದು ಎಲ್ಲಿಯೂ ಹೇಳಿಲ್ಲ. ಆದರೆ, ಆಚರಣೆ ಯಾವ ರೀತಿಯಲ್ಲಿರಬೇಕು ಎಂಬುದರ ಕುರಿತು ನಾವು ತಿಳಿಸುತ್ತೇವೆ ಎಂದು ಅರಗ ಜ್ಞಾನೇಂದ್ರ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News