ಆಕ್ಷೇಪಾರ್ಹ ಪದ ಬಳಕೆ ಆರೋಪ: ನಟ ಜಗ್ಗೇಶ್ ವಿರುದ್ಧ ದೂರು
ಬೆಂಗಳೂರು, ಆ.25: ಆಕ್ಷೇಪಾರ್ಹ ಪದ ಬಳಕೆ ಆರೋಪದ ಮೇರೆಗೆ ನಟ ನವರಸನಾಯಕ ಜಗ್ಗೇಶ್ ವಿರುದ್ಧ ದೂರು ಸಲ್ಲಿಸಲಾಗಿದೆ.
ದಲಿತ ನಾಯಕ ಡಾ.ಸಿ.ಎಸ್.ರಘು ಅವರು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಪೊಲೀಸ್ ಮಹಾ ನಿರ್ದೇಶಕ ಡಾ.ಪಿ.ರವೀಂದ್ರನಾಥ್ ಅವರಿಗೆ ದೂರು ಸಲ್ಲಿಕೆ ಮಾಡಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯ ಶಾಲಾ ಮಕ್ಕಳಿಗೆ ಹಂಚಿಕೆ ಮಾಡಲಾಗುವ ಸ್ವೆಟರ್ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಆರೋಪ ಸಂಬಂಧ ನಟರಾದ ಜಗ್ಗೇಶ್, ಕೋಮಲ್ ವಿರುದ್ಧ ರಘು ಆರೋಪ ಮಾಡಿದ್ದರು. ಇದಾದ ಬಳಿಕ, ಸೂಕ್ತ ಕ್ರಮ ಕೈಗೊಳ್ಳುವಂತೆ ಮಂಗಳವಾರ ಪ್ರತಿಭಟನೆ ನಡೆಸಿದ್ದರು.
ಬುಧವಾರ ಈ ಕುರಿತು ಟ್ವಿಟ್‍ನಲ್ಲಿ ಪ್ರತಿಕ್ರಿಯಿಸಿರುವ ಜಗ್ಗೇಶ್, 'ನಾನು ಉತ್ತಮ ಎಂದು ಅಧಮರಿಗೆ ಎದೆ ಬಗೆದು ವ್ಯರ್ಥ ತೋರಿಕೆ ಏಕೆ ಬೇಕು. ಆನೆ ರಾಜಮಾರ್ಗದಲ್ಲಿ ಆಗಲಿ ಗಲ್ಲಿಯಲ್ಲಾಗಲಿ ನಡೆವಾಗ ನಾಯಿ ಬೊಗಳುವುದು ಸಹಜ. ನಮ್ಮ ಗುಣ ಆನೆಯಂತೆ ಇದ್ದಾಗ ಬೊಗಳುವ ನಾಯಿಗಳ ಸಮಕ್ಕೆ ನಾವು ಇಳಿಯಬಾರದು. ಆಕಸ್ಮಿಕ ಸಿಟ್ಟಿಗೆ ಇಳಿದರೆ ನಮ್ಮ ಆನೆಯ ಸ್ಥಾನ ನಾಯಿಗೆ ಸಮ ಆಗುತ್ತದೆ. ನಾನು ಕಲಿತ ನೀತಿಪಾಠ ಇಂದಿನ ಸಮಾಜದ ನಡೆಗೆ' ಎಂದು ಹೇಳಿದ್ದರು.
ಇದೀಗ ಈ ಟ್ವಿಟ್‍ನಲ್ಲಿ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದು, ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ರಘು ಅವರು ದೂರು ಸಲ್ಲಿಕೆ ಮಾಡಿದ್ದಾರೆ.