×
Ad

ಬಿಜೆಪಿ ಸರಕಾರ ಹಗರಣಗಳ ಕೂಪ: ಕಾಂಗ್ರೆಸ್ ಟೀಕೆ

Update: 2021-08-25 22:10 IST

ಬೆಂಗಳೂರು, ಆ.25: ಬಿಜೆಪಿ ಸರಕಾರ ಹಗರಣಗಳ ಕೂಪವಾಗಿದೆ. ಬಡ ಮಕ್ಕಳ ಪಾಲಿನ ಮೊಟ್ಟೆಯಿಂದ ಸ್ವೆಟರ್‍ವರೆಗೂ ಎಲ್ಲವನ್ನೂ ತಿನ್ನುತ್ತಿದ್ದಾರೆ. ಬಿಬಿಎಂಪಿ ಶಾಲೆಗಳ ಸುಮಾರು 16,167 ಮಕ್ಕಳಿಗೆ ಸ್ವೆಟರ್ ನೀಡುವ ಯೋಜನೆಯಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಬಿಜೆಪಿ ವಕ್ತಾರ ಜಗ್ಗೇಶ್ ನಿಯಮ ಮೀರಿ ಸಹೋದರನಿಗೆ ಟೆಂಡರ್ ಕೊಡಿಸಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ.

ಈ ಸಂಬಂಧ ಟ್ವೀಟ್‍ಗಳನ್ನು ಮಾಡಿರುವ ಕಾಂಗ್ರೆಸ್, ಮಕ್ಕಳಿಗೆ ಸ್ವೆಟರ್ ಹಂಚಿಕೆಯನ್ನೇ ಮಾಡದೆ 1.75 ಕೋಟಿ ಬಿಲ್ ಪಾವತಿಯಾಗಿದ್ದು ಹೇಗೆ? ಕೈಮಗ್ಗ ನಿಗಮದ ಟೆಂಡರ್ ನಿಯಮ ಮೀರಿ ಕೋಮಲ್ ಹೆಸರಿಗೆ ಹೋಗಿದ್ದು ಹೇಗೆ? ಶಾಲೆ ತೆರೆಯದೆ ಹಂಚಿದ್ದೇವೆನ್ನುವುದು ಸುಳ್ಳು. ಹಂಚಿಕೆಯಾಗದಿದ್ದರೂ ಹಣ ಬಿಡುಗಡೆಗೆ ಸಚಿವ ಆರ್.ಅಶೋಕ್ ಅಧಿಕಾರಿಗಳಿಗೆ ಒತ್ತಡ ಹಾಕಿದ್ದೇಕೆ? ಈ ಹಗರಣದಲ್ಲಿ ಅವರದ್ದೆಷ್ಟು ಪಾಲು? ಎಂದು ಪ್ರಶ್ನಿಸಿದೆ.

ಈ ಪ್ರಕರಣ ನನಗೆ ಸಂಬಂಧವಿಲ್ಲವೆಂದು ಕೋಮಲ್ ನಿರಾಕರಿಸುತ್ತಾರೆ, ಹಾಗಿದ್ದರೆ ಅವರ ಸಹೋದರ ಎಪ್ರಿಲ್ 27ರಂದು ಕೋಮಲ್‍ರ ಬಿಬಿಎಂಪಿ ಟೆಂಡರ್ ಬಗ್ಗೆ ಪ್ರಸ್ತಾಪಿಸಿದ್ದು ಹೇಗೆ? ಬಿಜೆಪಿಯ ಆಡಳಿತ ಭ್ರಷ್ಟಾಚಾರದ ಕೂಪವಾಗಿದೆ ಎಂದು ಸ್ವತಃ ಬಿಜೆಪಿಯ ಜಗ್ಗೇಶ್ ಆರೋಪಿಸಿದ್ದಾರೆ. ಭ್ರಷ್ಟರೇ ಭ್ರಷ್ಟಾಚಾರದ ಬಗ್ಗೆ ಆರೋಪಿಸುವುದು-ಹಾಸ್ಯನಟನೆ ಎಂದು ಕಾಂಗ್ರೆಸ್ ಕಿಡಿಗಾರಿದೆ.

ಬಡ ಮಕ್ಕಳ ಮೊಟ್ಟೆ ಕದ್ದಂತೆ, ಸ್ವೆಟರ್ ಕದ್ದಿರುವ ಈ ಪ್ರಕರಣದ ತನಿಖೆ ನಡೆಸುವಿರಾ ಅಥವಾ ಶಶಿಕಲಾ ಜೊಲ್ಲೆಯವರಿಗೆ ಕ್ಲೀನ್ ಚಿಟ್ ಕೊಟ್ಟಂತೆ ಇದಕ್ಕೂ ಕೊಡುವಿರಾ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ? ಈ ಹಗರಣದ ಬಗ್ಗೆ ಕೂಡಲೇ ತನಿಖೆಗೆ ವಹಿಸಿ, ಬಿಬಿಎಂಪಿ ಅಧಿಕಾರಿಗಳ ಗೋಲ್ಮಾಲ್, ಸಚಿವ ಆರ್.ಅಶೋಕ್ ಅವರ ಪಾತ್ರ, ಜಗ್ಗೇಶ್ ಅವರ ಪ್ರಭಾವ ಎಲ್ಲವೂ ಹೊರಬರಲಿ ಎಂದು ಕಾಂಗ್ರೆಸ್ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News