ಕೆಂಪೇಗೌಡ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕನ್ನಡ ವಾತಾವರಣವಿರಲಿ: ಟಿ.ಎಸ್.ನಾಗಾಭರಣ
ಬೆಂಗಳೂರು, ಆ.25: ಕರ್ನಾಟಕದಲ್ಲಿ ತ್ರಿಭಾಷಾ ಸೂತ್ರವನ್ನು ಒಪ್ಪಿದ್ದೇವೆ ಎಂದ ಮಾತ್ರಕ್ಕೆ ಕನ್ನಡ ಕಡೆಗಣನೆಯನ್ನು ಸಹಿಸಲಾಗುವುದಿಲ್ಲ. ಹೀಗಾಗಿ ಕೆಂಪೇಗೌಡ ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಪೂರ್ಣ ಕನ್ನಡ ವಾತಾವರಣಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ತಿಳಿಸಿದ್ದಾರೆ.
ಬುಧವಾರ ಡಿ.ದೇವರಾಜ ಅರಸು ಸವಿನೆನಪಿನಲ್ಲಿ ಕನ್ನಡ ಅಭಿವೃದ್ದಿ ಪ್ರಾಧಿಕಾರದ ವತಿಯಿಂದ ಸಾರಿಗೆ ವಲಯದಲ್ಲಿ ಕನ್ನಡ ಜಾಗೃತಿ ಅಭಿಯಾನದ ಅಂಗವಾಗಿ ಕೆಂಪೇಗೌಡ ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣ ದೇವನಹಳ್ಳಿಗೆ ಭೇಟಿ ನೀಡಿ, ಕನ್ನಡ ಜಾಗೃತಿ ಅಭಿಯಾನದ ಮೂಲ ಆಶಯ ಮತ್ತು ಹಕ್ಕೊತ್ತಾಯವನ್ನು ವಿವರಿಸಿದ್ದಾರೆ.
ಕೆಂಪೇಗೌಡ ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣದ ದಿಕ್ಸೂಚಿ ಫಲಕಗಳಲ್ಲಿ, ದೇಶೀಯ ವಿಮಾನಗಳ ಧ್ವನಿ ಪ್ರಕಟಣೆಗಳಲ್ಲಿ, ಸಿಬ್ಬಂದಿಯ ವ್ಯವಹಾರದಲ್ಲಿ, ಗುರುತಿನ ಚೀಟಿಗಳಲ್ಲಿ, ಕಡ್ಡಾಯವಾಗಿ ಕನ್ನಡ ಬಳಸಿ ಸಂಪೂರ್ಣ ಕನ್ನಡ ವಾತಾವರಣ ಇರುವಂತೆ ಮಾಡಬೇಕೆಂದು ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಹೊಸದಾಗಿ ನಿರ್ಮಿಸುತ್ತಿರುವ ಟರ್ಮಿನಲ್‍ಗಳಲ್ಲಿ ಕನ್ನಡ ಹೆಸರಿಡಿ, ತರ್ಜುಮೆ ಮಾಡಕೂಡದು. ಕನ್ನಡ ಭಾಷೆ, ಪದಗಳು ಕಾಣಲಿ ಕೇಳಬೇಕು. ಆಗ ಪ್ರಯಾಣಿಕರೇ ಕನ್ನಡ ತಿಳಿಯಲು ಉತ್ಸುಕರಾಗುತ್ತಾರೆ. ಹೊಸ ಕಟ್ಟಡಗಳಲ್ಲಿ ಅಳವಡಿಸುತ್ತಿರುವ ಕನ್ನಡ ನಾಡು ನುಡಿ ಬಿಂಬಿಸುವ ಕಲಾ ಪ್ರಕಾರಗಳು, ವಿಗ್ರಹಗಳು, ಚಿತ್ರಕಲಾ ಮಾದರಿಗಳು, ಕಲಾ ಪ್ರಕಾರಗಳು ಮುಂತಾದವುಗಳನ್ನು ಮುಂಚಿತವಾಗಿ ಪರಿಶೀಲಿಸಿ ಕಡ್ಡಾಯವಾಗಿ ಕರ್ನಾಟಕದ ಪ್ರತಿಭೆಗಳನ್ನು ಗುರುತಿಸಿ ಅವಕಾಶ ಮಾಡಿಕೊಡಿ ಎಂದು ಅವರು ತಿಳಿಸಿದ್ದಾರೆ.
ವಿಮಾನ ನಿಲ್ದಾಣದ ಮುಖ್ಯ ಹಣಕಾಸು ಅಧಿಕಾರಿ ಭಾಸ್ಕರ್ ಆನಂದ್‍ರಾವ್, ಕಾರ್ಪೊರೇಟ್ ವ್ಯವಹಾರಗಳ ಮುಖ್ಯಸ್ಥರಾದ ಶ್ರೀನಿವಾಸ್ ವಿ.ಎಸ್.ಎಂ, ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರಾದ ನಾಗರಾಜ್ ಜಿ, ಕಾರ್ಯಾಚರಣೆ ವಿಭಾಗದ ಮುಖ್ಯಸ್ಥರಾದ ಶ್ರೀಧರ್, ಸಿಎಸ್‍ಆರ್ ವಿಭಾಗದ ಮುಖ್ಯಸ್ಥರಾದ ಹೇಮಚಂದ್ರ ಮಧುಸೂದನ, ಯೋಜನಾ ವಿಭಾಗದ ಉಪಾಧ್ಯಕ್ಷ ಸುಂದರ ಚಂದ್ರಮೌಳಿ ಮತ್ತಿತರರಿದ್ದರು.