×
Ad

ಪುಲಿಕೇಶಿನಗರ ಕಟ್ಟಡ ದುರಂತ: ಗುತ್ತಿಗೆದಾರ, ಬಿಬಿಎಂಪಿ ಪ್ರತಿವಾದಿಯಾಗಿಸಲು ಹೈಕೋರ್ಟ್ ಸೂಚನೆ

Update: 2021-08-25 22:31 IST

ಬೆಂಗಳೂರು, ಆ.25: ಪುಲಿಕೇಶಿ ನಗರದಲ್ಲಿ ನಿರ್ಮಾಣ ಹಂತದ ಬಹುಮಹಡಿ ಕಟ್ಟಡ ಕುಸಿತ ಪ್ರಕರಣದಲ್ಲಿ ಸಾವನ್ನಪ್ಪಿದ ಆರು ಕುಟುಂಬಗಳಿಗೆ ಪರಿಹಾರ ನೀಡಲು ನಿರ್ದೇಶಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಯಲ್ಲಿ ಬಿಬಿಎಂಪಿ, ಕಟ್ಟಡದ ಮಾಲಕ ಹಾಗೂ ಗುತ್ತಿಗೆದಾರರನ್ನು ಪ್ರತಿವಾದಿಯಾಗಿಸುವಂತೆ ಹೈಕೋರ್ಟ್ ಅರ್ಜಿದಾರರಿಗೆ ಸೂಚಿಸಿದೆ.

ಬೆಂಗಳೂರು ಪೂರ್ವ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಹೈಕೋರ್ಟ್ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಈ ವೇಳೆ ಅರ್ಜಿದಾರರನ್ನು ಪ್ರಶ್ನಿಸಿದ ಪೀಠ, ಯಾವ ಕಾನೂನಿನ ಅಡಿ ಪರಿಹಾರ ಒದಗಿಸಲು ಕೋರಲಾಗಿದೆ ಎಂದು ಕೇಳಿತು. ಇದಕ್ಕೆ ಉತ್ತರಿಸಿದ ಅರ್ಜಿದಾರರ ಪರ ವಕೀಲ ಎಸ್. ಉಮಾಪತಿ, ಯಾವುದೇ ನಿರ್ದಿಷ್ಟ ಕಾನೂನಿನ ಅಡಿ ಪರಿಹಾರ ಕೋರಿಲ್ಲ. ನಿರ್ಮಾಣ ಹಂತದ ಕಟ್ಟಡ ಕುಸಿದು ಮೃತಪಟ್ಟಿದ್ದ ಕಾರ್ಮಿಕರ ಕುಟುಂಬಕ್ಕೆ ಸರಕಾರವೇ ಪರಿಹಾರ ನೀಡಿತ್ತು. 

ಈ ಸಂಬಂಧ 1998ರಲ್ಲಿ ಹೈಕೋರ್ಟ್ ಆದೇಶ ನೀಡಿದ ಅನುಸಾರ ಪರಿಹಾರ ಕೋರಿದ್ದೇವೆ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಪುಲಿಕೇಶಿ ನಗರದ ಕಟ್ಟಡ ಕುಸಿತ ಪ್ರಕರಣದಲ್ಲಿ ಮೃತಪಟ್ಟಿರುವರು ಯಾರೆಂದು ಪ್ರಶ್ನಿಸಿತು. 

ವಕೀಲ ಉಮಾಪತಿ ಮಾಹಿತಿ ನೀಡಿ, ಮೃತರೆಲ್ಲರೂ ಕಟ್ಟಡ ನಿರ್ಮಾಣ ಮಾಡುತ್ತಿದ್ದ ಕಾರ್ಮಿಕರು ಎಂದರು. ಹಾಗಿದ್ದರೆ, ಮೃತರಿಗೆ ಕಾರ್ಮಿಕರ ಪರಿಹಾರ ಕಾಯ್ದೆ ಅನುಸಾರ ಪರಿಹಾರ ನೀಡಬಹುದಾಗಿದೆ. ಹೀಗಾಗಿ, ಅರ್ಜಿಯಲ್ಲಿ ಕಟ್ಟಡದ ಮಾಲಕ, ಗುತ್ತಿಗೆದಾರ ಹಾಗೂ ಬಿಬಿಎಂಪಿಯನ್ನು ಪ್ರತಿವಾದಿಯಾಗಿಸಲು ಸೂಚಿಸಿ, ವಿಚಾರಣೆಯನ್ನು ಅ.1ಕ್ಕೆ ಮುಂದೂಡಿತು.

ಪ್ರಕರಣವೇನು: ಪುಲಕೇಶಿನಗರದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡ 2019ರ ಜುಲೈ 10ರಂದು ಕುಸಿದು ಬಿದ್ದು, 6 ಜನ ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದರು. ಈ ಸಂಬಂಧ ಎಫ್‍ಐಆರ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಪೂರ್ಣಗೊಳಿಸಿಲ್ಲ. ವಿಚಾರಣಾ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿಲ್ಲ ಎಂದು ಆರೋಪಿಸಿರುವ ಅರ್ಜಿದಾರರು ಪಿಐಎಲ್ ಸಲ್ಲಿಸಿದ್ದಾರೆ. 

ಅರ್ಜಿಯಲ್ಲಿ, ಪ್ರಕರಣದ ತನಿಖೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ, ಅಂತಿಮ ವರದಿ ಸಲ್ಲಿಸಲು ಪೊಲೀಸರಿಗೆ ನಿರ್ದೇಶಿಸಬೇಕು ಹಾಗೂ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ವಿತರಿಸಲು ಸರಕಾರಕ್ಕೆ ನಿರ್ದೇಶಿಸಬೇಕು ಎಂದು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News