ಕೋರಗೆರೆ: ಅಂತರ್ಜಾತಿ ವಿವಾಹವಾದ ಕಾರಣಕ್ಕೆ ಸಾಮಾಜಿಕ ಬಹಿಷ್ಕಾರ
ತುಮಕೂರು, ಆ.27: ಅಂತರ್ಜಾತಿ ವಿವಾಹವಾಗಿರುವ ಕಾರಣಕ್ಕೆ ದಂಪತಿಗೆ ಸವರ್ಣೀಯರು ಹಲ್ಲೆ, ಕಿರುಕುಳ ನೀಡುತ್ತಿದ್ದು, ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ ಎಂಬ ಆರೋಪ ಚಿ.ನಾ.ಹಳ್ಳಿ ತಾಲೂಕಿನ ಕೋರಗೆರೆ ಎಂಬಲ್ಲಿಂದ ಕೇಳಿಬಂದಿದೆ.
2007ರಲ್ಲಿ ಚಿ.ನಾ.ಹಳ್ಳಿ ತಾಲೂಕು ಕೋರಗೆರೆ ಗ್ರಾಮದ ದಲಿತ ಸಮುದಾಯದ ನಾಗರಾಜು ಎಂಬವರು ಮತ್ತು ಶೆಟ್ ಬಣಜಿಗ ಜಾತಿಯ ಮಹಿಳೆಯೊಂದಿಗೆ ಪ್ರೀತಿಸಿ ಮದುವೆಯಾಗಿ ಆದೇ ಗ್ರಾಮದಲ್ಲಿ ವಾಸವಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಆದರೆ ಇದನ್ನು ಸಹಿಸದ ಗ್ರಾಮದ ಸವರ್ಣೀಯರು ಇನ್ನಿಲ್ಲದ ಕಿರುಕುಳ ನೀಡುತ್ತಿದ್ದಾರೆ ಎಂದು ಈ ದಂಪತಿ ಆರೋಪಿಸಿದ್ದಾರೆ.
ತಮ್ಮ ಜಮೀನಿನಲ್ಲಿ ಮನೆ ನಿರ್ಮಾಣ ಮಾಡಿಕೊಂಡು, ಕೃಷಿ ಕೆಲಸದ ಜೊತೆಗೆ ಕೂಲಿ ನಾಲಿ ಮಾಡಿ ಜೀವನ ನಡೆಸುತ್ತಿದ್ದೇವೆ. ಈ ನಡುವೆ ತಮ್ಮ ಮೇಲೆ ಹಲ್ಲೆ ನಡೆದಿದೆ, ಅಲ್ಲದೆ ಗ್ರಾಮದಲ್ಲಿ ಇರಕೂಡದು ಎಂದು ಬಹಿಷ್ಕಾರ ಹಾಕಿದ್ದಾರೆ. ಕುಡಿಯುವ ನೀರು, ಅಂಗಡಿ ಸಾಮಾನುಗಳನ್ನು ನೀಡುತ್ತಿಲ್ಲ. ಈ ಬಗ್ಗೆ ಹುಳಿಯಾರು ಠಾಣೆ ಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ತಿಪಟೂರು ಪೊಲೀಸರು ರಾಜಿ ಮಾಡಿಸಲು ಮುಂದಾಗಿದ್ದಾರೆ. ಹಾಗಾಗಿ ಕಳೆದ ಮೂರು ದಿನಗಳ ಹಿಂದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಭೇಟಿಯಾಗಿ ಮನವಿ ಮಾಡಿದ್ದೇವೆ. ಅವರು ನ್ಯಾಯ ಕೊಡಿಸುವ ಭರವಸೆ ನೀಡಿದ್ದಾರೆ. ನಮಗೆ ನೆಮ್ಮದಿಯಿಂದ ಬದುಕಲು ಅವಕಾಶ ಮಾಡಿಕೊಡಿ ಎಂದವರು ಮಾಧ್ಯಮದೆದುರು ಮನವಿ ಮಾಡಿದ್ದಾರೆ.