ಸಾಮೂಹಿಕ ಅತ್ಯಾಚಾರ ಪ್ರಕರಣ: ಮಧ್ಯಾಹ್ನದವರೆಗೂ ಅಧಿಕಾರಿಗಳ ಸಭೆ, ಘಟನಾ ಸ್ಥಳಕ್ಕೆ ಭೇಟಿ ನೀಡದ ಗೃಹಸಚಿವ

Update: 2021-08-27 11:25 GMT

ಮೈಸೂರು, ಆ.27: ಲಲಿತಾದ್ರಿಪುರ ಬೆಟ್ಟದಲ್ಲಿ ಆ.24ರಂದು ನಡೆದ ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರದ ಹಿನ್ನೆಲೆಯಲ್ಲಿ ಗುರುವಾರ ರಾತ್ರಿಯೇ ಮೈಸೂರಿಗೆ ಆಗಮಿಸಿ ವಾಸ್ತವ್ಯ ಹೂಡಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ಮಧ್ಯಾಹ್ನದವರೆಗೆ ಶುಕ್ರವಾರ ಸುತ್ತಾಟ, ಪೂಜೆಗಳಲ್ಲೇ ಕಾಲ ಕಳೆದರು ಎಂಬ ಆರೋಪ ಕೇಳಿಬಂದಿದೆ.

ಬಳಿಕ ಚಾಮುಂಡಿಬೆಟ್ಟಕ್ಕೆ ತೆರಳಿ, ವಿಶೇಷ ಪೂಜೆ ಸಲ್ಲಿಸಿದ ಗೃಹ ಸಚಿವರು, ನಂತರ ಕರ್ನಾಟಕ ಪೊಲೀಸ್ ಅಕಾಡಮಿಗೆ ಭೇಟಿ ನೀಡಿದರು. ಅಲ್ಲಿ ಫೈರಿಂಗ್ ಸ್ಟಿಮಿಲೇಟರ್ನ್ನು ಉದ್ಘಾಟಿಸಿ, ತಾವೂ ಫೈರಿಂಗ್ ನಡೆಸಿ ಖುಷಿಪಟ್ಟರು. ಮಾದರಿ ಪೊಲೀಸ್ ಠಾಣೆ, ಪರೀಕ್ಷಾರ್ಥಿಗಳ ಕೊಠಡಿ, ಸಭಾಂಗಣ, ಗ್ರಂಥಾಲಯ ವೀಕ್ಷಿಸಿದರು. ಇದೆಲ್ಲ ಮುಗಿಯುವಷ್ಟರಲ್ಲಿ ಮಧ್ಯಾಹ್ನವಾಗಿತ್ತು. ಬಳಿಕ ಅತ್ಯಾಚಾರ ಪ್ರಕರಣದ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡಸಿದರು.

 ಆ ಬಳಿಕ ಘಟನಾ ಸ್ಥಳಕ್ಕೆ ಭೇಟಿ ನೀಡಿದರೂ ಅದು ಐದು ನಿಮಿಷಗಳಿಗೆ ಸೀಮಿತವಾಗಿತ್ತು. ಈ ಸಂದರ್ಭ ಅವರು ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅತ್ಯಾಚಾರ ಆರೋಪಿಗಳನ್ನು ತಕ್ಷಣ ಪತ್ತೆ ಹಚ್ಚಲು ಆಗುವುದಿಲ್ಲ. ಹೆಚ್ಚಿನ ಸಮಯದ ಅಗತ್ಯವಿದೆ. ಸದ್ಯ ಸಂತ್ರಸ್ತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಕೆ ಹೇಳಿಕೆ ಪಡೆದ ಬಳಿಕವೇ ತನಿಖೆಯನ್ನು ಚುರುಕುಗೊಳಿಸಲು ಸಾಧ್ಯ’ ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News