ಮಹಿಳೆಯಾಗಿ ನಾವೇ ನಿಂದನೆ ಅನುಭವಿಸಬೇಕಾಗಿದೆ: ಗೃಹ ಸಚಿವರ ಹೇಳಿಕೆಗೆ ನಟಿ ರಮ್ಯಾ ಆಕ್ರೋಶ

Update: 2021-08-27 18:24 GMT

ಬೆಂಗಳೂರು: ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಯುವತಿಯ ಕುರಿತ ಹೇಳಿಕೆಯೊಂದು ಭಾರೀ ವಿವಾದಕ್ಕೆ ಕಾರಣವಾಗಿದ್ದು, ಇದೀಗ ಇದರ ಬೆನ್ನಲ್ಲೇ ಮಹಿಳೆಯರ ಕುರಿತು ಮಾಜಿ ಸಂಸದೆ ರಮ್ಯಾ ಅವರ ಟ್ವಿಟರ್ ಪೋಸ್ಟ್ ಒಂದು ವೈರಲ್ ಆಗಿದೆ. 

ತಮ್ಮ ಸಾಮಾಜಿಕ ಜಾಲ ತಾಣ ಫೇಸ್ ಬುಕ್, ಇನ್ಸ್ಟಾಗ್ರಾಮ್ ನಲ್ಲೂ ಕೂಡ ಈ ಕುರಿತು ಪೋಸ್ಟ್ ಮಾಡಿರುವ ರಮ್ಯಾ ಅವರು,   'ಪ್ರತಿ ಬಾರಿಯೂ ಪುರುಷರು ಮಾಡಿದ ತಪ್ಪಿಗೆ ಮಹಿಳೆಯರನ್ನೇ ಯಾಕೆ ಗುರಿ ಮಾಡಲಾಗುತ್ತಿದೆ ಎಂದು ಪ್ರಶ್ನಸಿದ್ದಾರೆ. ಪುರುಷನೊಬ್ಬ ಮಹಿಳೆಯ ಮೇಲೆ ಎಸಗುವ ಅಪರಾಧಕ್ಕೆ ಯಾವಾಗಲೂ ಮಹಿಳೆಯಾಗಿ ನಾವೇ ನಿಂದನೆ ಅನುಭವಿಸಬೇಕಾಗಿದೆ. ಅದು ಅತ್ಯಾಚಾರವಾಗಿರಲಿ, ಅಥವಾ ದೈಹಿಕ, ಮಾನಸಿಕ ಕಿರುಕುಳ, ಬೈಗುಳವೆ ಆಗಿರಲಿ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

'ಅದು ನಿನ್ನ ತಪ್ಪು, ನೀನು ಹಾಗೆ ಹೇಳಬಾರದಿತ್ತು, ನೀನು ಹಾಗೆ ಮಾಡಬಾರದಿತ್ತು, ಅದನ್ನು ಧರಿಸಬಾರದಿತ್ತು, ತುಂಬಾ ಟೈಟ್, ತುಂಬಾ ಚಿಕ್ಕದು, ತುಂಬಾ ಆಕರ್ಷಕ, ತುಂಬಾ ಉದ್ದದ್ದು, ಸಂಜೆ ನಂತರ ನೀನು ಹೊರಹೋಗಬಾರದು, ಮೇಕಪ್ ಮಾಡಿಕೊಳ್ಳಬಾರದು, ಕೆಂಪು ಬಣ್ಣದ ಲಿಪ್ ಸ್ಟಿಕ್ ಏಕೆ?' ಎಂಬ ಈ ರೀತಿಯ ಮೂರ್ಖತನದ ಮಾತು ಕೊನೆಯಾಗಬೇಕು ಎಂದು ಹೇಳಿದ್ದಾರೆ. 

'ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನು ಮತ್ತು  ನನ್ನ ಸ್ನೇಹಿತರು ಇದನ್ನು ಎದುರಿಸಿದ್ದೇವೆ. ಮಹಿಳೆಯರ ಮೇಲಿನ ಅಪರಾಧಗಳಿಗೆ ಕುರುಡಾಗದಿರಿ, ದನಿ ಎತ್ತಿ' ಎಂದು ತಮ್ಮ ಪೋಸ್ಟ್ ನಲ್ಲಿ ಹೇಳಿಕೊಂಡಿದ್ದಾರೆ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News