ಬಿಜೆಪಿಯವರ ಕೇಳಿಯೇ ತಿನ್ನಬೇಕು, ಅವರು ಹೇಳಿದಷ್ಟೇ ತಿನ್ನಬೇಕು: ಕಾಂಗ್ರೆಸ್ ಆಕ್ರೋಶ

Update: 2021-08-27 12:52 GMT

ಬೆಂಗಳೂರು, ಆ. 27: `ಬಿಜೆಪಿ ಸಚಿವರ ಉಡಾಫೆ, ಹೊಣೆಗೇಡಿತನ, ದರ್ಪಗಳೇ ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಿರುವುದಕ್ಕೆ ಕಾರಣ. ಕೆಲ ದಿನಗಳ ಹಿಂದೆ ವ್ಯಕ್ತಿಯೊಬ್ಬರು ಅತ್ಯಾಚಾರದ ಬಗ್ಗೆ ಸಚಿವರ ಗಮನ ಸೆಳೆದಾಗ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರು ನಡೆದುಕೊಂಡ ರೀತಿ ಇದು. ಇಂತಹ ಸಂವೇದನಾಹೀನರಿಂದ ಇನ್ನೆಂತಹ ಆಡಳಿತ ನಿರೀಕ್ಷಿಸಲಾದೀತು?' ಎಂದು ಕಾಂಗ್ರೆಸ್ ಟೀಕಿಸಿದೆ.

ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, `ಆಹಾರ ಸಚಿವ ಉಮೇಶ್ ಕತ್ತಿಯವರೆ, ತಾವು ಕೋಟಿ ಕೋಟಿ ತಿನ್ನಬಹುದು, ಬಡವರು ಮಾತ್ರ ಐದೇ ಕೆಜಿ ತಿನ್ನಬೇಕು ಎಂದರೆ ಹೇಗೆ ಸ್ವಾಮಿ? ಬಿಜೆಪಿ ಸರಕಾರ ಬಡವರ ಹಸಿವಿಗೂ ನಿಯಂತ್ರಣ ಹಾಕುತ್ತಿದೆ, ಹೊಟ್ಟೆಗೂ ಕಡಿವಾಣ ಹಾಕುತ್ತಿದೆ. ಬಿಜೆಪಿಯವರ ಕೇಳಿಯೇ ತಿನ್ನಬೇಕು, ಅವರು ಹೇಳಿದಷ್ಟೇ ತಿನ್ನಬೇಕು! ಇದೇ ಬಿಜೆಪಿಯ ತಾಲಿಬಾನ್ ನೀತಿ' ಎಂದು ವಾಗ್ದಾಳಿ ನಡೆಸಿದೆ.

`ಹಿಂದೆ ಅಕ್ಕಿ ಕೇಳಿದವರಿಗೆ-ಹೋಗಿ ಸಾಯ್ರಿ, ಇಂದು ಅಕ್ಕಿ ಕೊಡಲಾಗದೆ-ಜಾಸ್ತಿ ತಿನ್ಬೇಡ್ರಿ. ಕೈಲಾಗದ ಬಿಜೆಪಿಯ ವರಸೆ ಇದು!
ರಾಜ್ಯದಲ್ಲಿ ಪ್ರಜಾಪ್ರಭುತ್ವ ಸರಕಾರವಿದೆಯೋ, ತಾಲಿಬಾನ್ ಆಡಳಿತವಿದೆಯೋ ಎಂಬ ಅನುಮಾನವಿದೆ! ಹೆಣ್ಣು ಸಂಜೆ ಹೊರಹೋದರೂ ತಪ್ಪು, ಜನ ಜಾಸ್ತಿ ತಿಂದರೂ ತಪ್ಪು ಎಂದು `ತಾಲಿಬಾನಿ ಬಿಜೆಪಿ' ಫಾರ್ಮಾನು ಹೊರಡಿಸುತ್ತಿದೆ' ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

`ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಕೆಲವೇ ದಿನಗಳ ಹಿಂದೆ ಗೃಹಖಾತೆ ನಿರ್ವಹಣೆ ಕಿರಿಕಿರಿಯಾಗುತ್ತಿದೆ ಎಂದು ತಮ್ಮ ಅಸಾಮಥ್ರ್ಯ ಹೊರಹಾಕಿದ್ದರು, ಈಗ ಅವರ ನಡುವಳಿಕೆಯಿಂದಲೂ ಅದು ಸಾಬೀತಾಗಿದೆ. ರಾಜ್ಯವನ್ನು ರಾಜಕೀಯ ಪ್ರಯೋಗಶಾಲೆ ಮಾಡಿಕೊಂಡಿರುವ ಬಿಜೆಪಿ ಪಕ್ಷದ ಅಸಮರ್ಥರಿಂದ ರಾಜ್ಯ ನಲುಗುತ್ತಿದೆ' ಎಂದು ಕಾಂಗ್ರೆಸ್ ಇದೇ ಸಂದರ್ಭದಲ್ಲಿ ಲೇವಡಿ ಮಾಡಿದೆ.

`ಹೊಣೆಗೇಡಿ ಗೃಹ ಸಚಿವರಾಗಿ ವೈಫಲ್ಯ ಪ್ರಶ್ನಿಸಿದ ಮಾತ್ರಕ್ಕೆ ಕಾಂಗ್ರೆಸ್‍ಗೆ ರಾಜಕೀಯ ಮಾಡುತ್ತಿದೆ ಎನ್ನುವ ಇದೇ ಗೃಹ ಸಚಿವರು ಹಿಂದೆ ತಾವು ಮಾಡಿದ್ದೇನು. ಇವರದ್ದೇ ಕ್ಷೇತ್ರದಲ್ಲಿ ನಡೆದ ನಂದಿತಾ ಪ್ರಕರಣವನ್ನು ಹೇಗೆಲ್ಲಾ ರಾಜಕೀಯ ಲಾಭಕ್ಕೆ ಬಳಸಿದರು, ನೆನಪಿಸಿಕೊಳ್ಳಲಿ. ಅತ್ಯಾಚಾರದಲ್ಲಿ ರಾಜಕೀಯ ಮಾಡಿದವರು ನೀವಲ್ಲವೇ?' ಎಂದು ಕಾಂಗ್ರೆಸ್ ಖಾರವಾಗಿ ಪ್ರಶ್ನೆ ಮಾಡಿದೆ.

`ಎಲ್ಲ ಸರಕಾರಗಳ ಅವಧಿಯಲ್ಲೂ ಅತ್ಯಾಚಾರ ಘಟನೆ ನಡೆದಿವೆ-ಸಚಿವ ಶಿವರಾಂ ಹೆಬ್ಬಾರ್. ನಡೆದಿದೆ ಸ್ವಾಮಿ, ಆದರೆ ಆಗ ಯಾರೂ ಹೊಣೆಗೇಡಿತನ ಪ್ರದರ್ಶಿಸಲಿಲ್ಲ, ಅಸಂಬದ್ಧ ಮಾತುಗಳನ್ನಾಡಲಿಲ್ಲ. ಅತ್ಯಾಚಾರದಂತಹ ಗಂಭೀರ ಕೃತ್ಯವನ್ನು ಸಾಮಾನ್ಯಕರಿಸುವ ಪ್ರಯತ್ನ ಮಾತಾಡುತ್ತಿರುವ ಬಿಜೆಪಿ ತಾಲಿಬಾನ್ ಮನಸ್ಥಿತಿ ಹೊಂದಿದೆ' ಎಂದು ಕಾಂಗ್ರೆಸ್ ಟೀಕಿಸಿದೆ.


`ಬಿಜೆಪಿ ಪಾಲಿಗೆ `ಬೇಟಿ ಬಚಾವೋ' ಎಂಬ ಘೋಷಣೆ ಮೋದಿ ಫೋಟೋ ಇರುವ ಜಾಹಿರಾತಿಗೆ ಮಾತ್ರ! ಅದರ ಅಸಲಿ ಅರ್ಥ ನಿಮ್ಮ ಹೆಣ್ಣುಮಕ್ಕಳನ್ನು ನೀವೇ ಬಚಾವು ಮಾಡಿಕೊಳ್ಳಿ ಬಿಜೆಪಿ ಸರಕಾರದಿಂದ ಅಸಾಧ್ಯ ಎಂದು. ಎಲ್ಲ ಕಡೆ ಪೊಲೀಸ್ ರಕ್ಷಣೆ ನೀಡಲು ಅಸಾಧ್ಯವೆಂದು ಪ್ರವಾಸೋದ್ಯಮ ಸಚಿವರಾದ ಆನಂದ್ ಸಿಂಗ್ ಹೇಳಿಕೆಯೇ ಇದಕ್ಕೆ ನಿದರ್ಶನ'
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News