×
Ad

ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ಸಮರ್ಥಿಸಿದ ಶಾಸಕಿ ಪೂರ್ಣಿಮಾ ಶ್ರೀನಿವಾಸ್

Update: 2021-08-27 20:05 IST
 ಶಾಸಕಿ ಪೂರ್ಣಿಮಾ ಶ್ರೀನಿವಾಸ್

ಬೆಂಗಳೂರು, ಆ. 27: `ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಯಾವುದೇ ರೀತಿಯಲ್ಲಿಯೂ ತಪ್ಪಾಗಿ ಹೇಳಿಕೆ ಕೊಟ್ಟಿಲ್ಲ. ಮಹಿಳೆಯರ ಬಗ್ಗೆ ಕಳಕಳಿಯಿಂದಲೇ ಹೇಳಿಕೆ ನೀಡಿದ್ದು, ಆ ಸಮಯದಲ್ಲಿ ಮಹಿಳೆಯರು ಅಲ್ಲಿಗೆ ಹೋಗಬಾರದು ಎನ್ನುವುದನ್ನು ಬೇರೆ ಅರ್ಥದಲ್ಲಿ ಭಾವಿಸಬಾರದು. ಮಹಿಳೆಯರು ಜಾಗ್ರತೆಯಿಂದ ಇರಬೇಕು ಎಂದು ಹೇಳಿದ್ದಾರೆ' ಎಂದು ಚಿತ್ರದುರ್ಗ ಜಿಲ್ಲೆ ಹಿರಿಯೂರು ಕ್ಷೇತ್ರದ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಸಮರ್ಥಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರಕಾರ, ರಾಜ್ಯ ಪೊಲೀಸರು ಅತ್ಯಂತ ದಕ್ಷತೆಯಿಂದ ಕೆಲಸ ಮಾಡುತ್ತಿದ್ದು, ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಕೂಡಲೇ ಬಂಧಿಸಲಿದ್ದಾರೆ. ಅತ್ಯಾಚಾರ ಪ್ರಕರಣಗಳು ಮರುಕಳಿಸಬಾರದು. ಆ ನಿಟ್ಟಿನಲ್ಲಿ ಕಠಿಣ ಕಾನೂನು ಅಗತ್ಯ. ಆಗ ಮಾತ್ರವೇ ಆರೋಪಿಗಳಿಗೆ ಭಯ ಮೂಡಲು ಸಾಧ್ಯ ಎಂದರು.

ಪುರುಷರ ದೃಷ್ಟಿ ಬದಲಾಗಬೇಕು: `ರಾತ್ರಿ 12 ಗಂಟೆಯಾದರೂ ಹೆಣ್ಣು ಮಕ್ಕಳು ಓಡಾಡಬೇಕು. ಹಾಗೆ ಓಡಾಡಿದರೆ ಇಂತಹ ತೊಂದರೆಗೆ ಸಿಲುಕಿಕೊಳ್ಳುವವರಿಗೆ ಧೈರ್ಯ ಬರುತ್ತದೆ. ಹೆಣ್ಣು ಮಕ್ಕಳನ್ನು ಓಡಾಡಬಾರದು ಎಂದು ನಿಬರ್ಂಧಿಸಲು ಸಾಧ್ಯವಿಲ್ಲ. ಹೆಣ್ಣು ಮಕ್ಕಳನ್ನು ಪುರುಷರು ನೋಡುವ ದೃಷ್ಟಿ ಬದಲಾಗಬೇಕು' ಎಂದು ಪೂರ್ಣಿಮಾ ಶ್ರೀನಿವಾಸ್ ಇದೇ ಸಂದರ್ಭದಲ್ಲಿ ತಿಳಿಸಿದರು.

`ಹಗಲು ಹೊತ್ತಿನಲ್ಲಿ ಜನರು ಓಡಾಡುತ್ತಿರುತ್ತಾರೆ. ಸಾರ್ವಜನಿಕರು, ಅಕ್ಕಪಕ್ಕದ ಜನ ಗಮನಿಸುತ್ತಿರುತ್ತಾರೆ. ರಾತ್ರಿ ಹೊತ್ತಿನಲ್ಲಿ ಇಂತಹ ಕೃತ್ಯಗಳು ನಡೆದರೆ ಯಾರಿಗೂ ಕಾಣುವುದಿಲ್ಲ. ರಾತ್ರಿ ಹೊತ್ತು ಸರಿ ಎಂದು ಕಾಮುಕರು ಯೋಚನೆ ಮಾಡುತ್ತಾರೆ. ಸುರಕ್ಷತೆ ಎನ್ನುವುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ರಾತ್ರಿ ಹೊತ್ತು ಹೆಣ್ಣುಮಕ್ಕಳು ಓಡಾಡಬಾರದು ಅಂತಲ್ಲ. ಅವರ ಕೆಲಸಗಳಿದ್ದಾಗ ನಿಭಾಯಿಸಬೇಕಾಗುತ್ತದೆ. ಆದರೆ ಜಾಗ್ರತೆ ವಹಿಸಬೇಕಾಗುತ್ತದೆ' ಎಂದು ಅವರು ಸಲಹೆ ನೀಡಿದರು.

`ಅಗತ್ಯ ಇರುವ ಕಡೆಗಳಲ್ಲಿ ರಾತ್ರಿ ಗಸ್ತು ಹೆಚ್ಚಿಸಬೇಕು. ಪ್ರವಾಸಿ ತಾಣವೂ ಆಗಿರುವ ಚಾಮುಂಡಿ ಬೆಟ್ಟದಲ್ಲಿ ಪೊಲೀಸರ ಗಸ್ತು ಇಲ್ಲದಿದ್ದಿದ್ದು ತಪ್ಪಾಗಿದೆ. ಈ ಬಗ್ಗೆ ಸರಕಾರ ಗಮನ ಹರಿಸಬೇಕಿದೆ. ಅಲ್ಲದೆ, ಶೀಘ್ರದಲ್ಲೆ ನಮ್ಮ ಸರಕಾರ ಆರೋಪಿಗಳನ್ನು ಬಂಧಿಸಿ, ಕಾನೂನು ಅನ್ವಯ ಅವರಿಗೆ ಶಿಕ್ಷೆ ವಿಧಿಸಲಿದೆ' ಎಂದು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಇದೇ ವೇಳೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News