`ನಾನೀಗ ಜವಾಬ್ದಾರಿಯುತ ಸ್ಥಾನದಲ್ಲಿದ್ದೇನೆ': ಗೃಹ ಸಚಿವರ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಕೇಂದ್ರ ಸಚಿವೆ ಶೋಭಾ ನಕಾರ

Update: 2021-08-27 15:28 GMT

ಬೆಂಗಳೂರು, ಆ. 27: `ಮೈಸೂರಿನ ವಿದ್ಯಾರ್ಥಿನಿಯ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವರ ಪ್ರತಿಕ್ರಿಯೆಗೆ ನೀವು(ಮಾಧ್ಯಮದವರು) ನನ್ನನ್ನು ಏಕೆ ಪ್ರಶ್ನೆ ಮಾಡ್ತೀರಿ?' ಎಂದು ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಪ್ರಶ್ನೆ ಮಾಡಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ವಿವಿಧ ಇಲಾಖೆಗಳ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೊಷ್ಟಿ ನಡೆಸಿದ ಅವರು, `ನಾನು ಈಗಾಗಲೇ ಮೈಸೂರಿನ ನಗರ ಪೊಲೀಸ್ ಆಯುಕ್ತರೊಂದಿಗೆ ಸಮಾಲೋಚನೆ ನಡೆಸಿದ್ದು, ಆರೋಪಿಗಳನ್ನು ಬಂಧಿಸಲು ಸೂಚಿಸಿದ್ದೇನೆ. ಈಗಾಗಲೇ ಪೊಲೀಸರು ಕೆಲವರನ್ನು ಸಂಶಯದ ಮೇಲೆ ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ' ಎಂದರು.

`ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ಕುರಿತು ನಾನು ಈಗಾಗಲೇ ಪ್ರತಿಕ್ರಿಯೆ ಕೊಟ್ಟಿದ್ದೇನೆ. ನಾನೀಗ ಜವಾಬ್ದಾರಿಯುತ ಸ್ಥಾನದಲ್ಲಿದ್ದೇನೆ. ಕೇಂದ್ರದ ಮಂತ್ರಿಯಾಗಿದ್ದೇನೆ. ನಾನೀಗ ಹೋರಾಟ ಮಾಡುವ ಜಾಗದಲ್ಲಿ ಇಲ್ಲ. ಯಾವಾಗ ಜವಾಬ್ದಾರಿ ಬದಲಾಗುತ್ತದೆ ಅದೇ ರೀತಿ ಆಕ್ಟ್ ಮಾಡಬೇಕು. ಜನಾಶೀರ್ವಾದ ಯಾತ್ರೆ ಸಂದರ್ಭದಲ್ಲಿ ನಾನು ರಾತ್ರಿ 12 ಗಂಟೆಯ ವರೆಗೆ ಓಡಾಡಿದ್ದು ಗೊತ್ತಾಗುತ್ತದೆ' ಎಂದು ಹೇಳಿದರು.

ರೈತರ ಜತೆ ಮಾತುಕತೆಗೆ ಸಿದ್ಧ: `ಕೇಂದ್ರ ಸರಕಾರ ಮೂರು ಕೃಷಿ ಕಾಯ್ದೆಗಳಿಗೆ ತಿದ್ದುಪಡಿ ತಂದಿದೆ. ಎಪಿಎಂಸಿಗಳಲ್ಲಿ ರೈತರಿಗೆ ಆಗುತ್ತಿದ್ದ ಅನ್ಯಾಯವನ್ನು ಸರಿಪಡಿಸಲು ತಿದ್ದುಪಡಿ ತರಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ರೈತರೊಂದಿಗೆ ಮಾತುಕತೆ ನಡೆಸಲು ಕೇಂದ್ರ ಸರಕಾರ ಸದಾ ಸಿದ್ಧ' ಎಂದು ಶೋಭಾ ಕರಂದ್ಲಾಜೆ ಇದೇ ಸಂದರ್ಭದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News