ಗೃಹ ಸಚಿವ ಅರಗ ಜ್ಞಾಗೇಂದ್ರ ಅವರ ಬೇಜವಾಬ್ದಾರಿ ಹೇಳಿಕೆ ಖಂಡನೀಯ: ಮಾಜಿ ಸಚಿವ ಎಚ್.ಸಿ.ಮಹದೇವಪ್ಪ

Update: 2021-08-27 16:56 GMT

ಮೈಸೂರು,ಆ.27: ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಘಟನೆಗೆ ಸಂಬಂಧಿಸಿದಂತೆ ಅರಗ ಜ್ಞಾನೇಂದ್ರ ಅವರ ಬೇಜವಾಬ್ದಾರಿ ಹೇಳಿಕೆ ಖಂಡನೀಯ ಎಂದು ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಕಿಡಿಕಾರಿದ್ದಾರೆ.

ಗೃಹ ಇಲಾಖೆ ಎಂದರೆ ಒಂದು ರಾಜ್ಯದಲ್ಲಿ ವಾಸಿಸುತ್ತಿರುವವರ, ಹಕ್ಕು, ಮಾನ, ಪ್ರಾಣ, ಆಸ್ತಿ-ಪಾಸ್ತಿಯ ರಕ್ಷಣೆ, ಸಮಾನತೆ ಮತ್ತು ಸೌಹಾರ್ದತೆಯನ್ನು ಕಾಪಾಡುವ ಕರ್ತವ್ಯವನ್ನು ಹೊಂದಿರುತ್ತದೆ. ಇದಕ್ಕೆ ಪೂರಕವಾಗಿಯೇ ಕಾಂಗ್ರೆಸ್ ಸರ್ಕಾರವು ಅಧಿಕಾರದಲ್ಲಿರುವ ಸಂದರ್ಭದಲ್ಲಿ ಚಾಮುಂಡಿ ಸಂಚಾರಿ ಸುರಕ್ಷತಾ ಪಡೆಗಳನ್ನು ನಿಯೋಜಿಸುವ ಮೂಲಕ ಸಮರ್ಪಕ ಸುರಕ್ಷತಾ ವಾತಾವರಣವನ್ನು ನಿರ್ಮಿಸುವ ಪ್ರಯತ್ನವನ್ನು ಮಾಡಿತ್ತು. ಇದು ರಾಜ್ಯದಲ್ಲಿ ರಕ್ಷಣಾ ವ್ಯವಸ್ಥೆಯ ದೃಷ್ಟಿಯಿಂದ ಮಾಡಿದ ಮೊದಲ ವಿನೂತನವಾದ ಪ್ರಯತ್ನವಾಗಿದ್ದು ಇದನ್ನು ಮೊದಲ ಬಾರಿಗೆ ಮೈಸೂರಿನಲ್ಲಿ ಪರಿಚಯಿಸಲಾಗಿತ್ತು ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ. 

ಅತ್ಯಾಚಾರ ಘಟನೆಗೆ ಸಂಬಂಧಿಸಿದಂತೆ ಗೃಹ ಸಚಿವರ ಹೇಳಿಕೆಯನ್ನು ಗಮನಿಸಿದರೆ ಇವರಿಗೆ ಜನ ಸಾಮಾನ್ಯರನ್ನು ಮತ್ತು ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಯಾವುದೇ ಉದ್ದೇಶ ಇದ್ದಂತೆ ಕಾಣುತ್ತಿಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿರುವ ಇವರ ವರ್ತನೆಗಳು ಸಂವಿಧಾನಾತ್ಮಕವಾದ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದ್ದು ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಇನ್ನು ಇಂತಹ ಅತ್ಯಾಚಾರ ಘಟನೆಗಳು ಸಾರ್ವಜನಿಕ ವ್ಯಕ್ತಿಗಳು ಮತ್ತು ಸಾರ್ವಜನಿಕವಾಗಿ ಬದ್ಧತೆ ಇರುವ ಯಾವುದೇ ವ್ಯಕ್ತಿಗಳು ಕೂಡಾ ತಲೆ ತಗ್ಗಿಸುವ ಸಂಗತಿಯಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಹೆಣ್ಣು ಮಕ್ಕಳು ಮಧ್ಯರಾತ್ರಿಯ ವೇಳೆ ನಿರ್ಭಿಡೆಯಿಂದ ಓಡಾಡಿದಾಗ ಮಾತ್ರವೇ ಸ್ವಾತಂತ್ರ್ಯದ ಆಶಯಗಳಿಗೆ ಹೆಚ್ಚು ಅರ್ಥ ಬರುತ್ತದೆ ಎಂಬ ಗಾಂಧೀಜಿಯವರ ಮಾತುಗಳನ್ನು ಮತ್ತೊಮ್ಮೆ ನೆನಪಿಸುತ್ತಾ, ಆದಷ್ಟು ಬೇಗನೇ ಸರ್ಕಾರ ಅತ್ಯಾಚಾರಿಗಳನ್ನು ಬಂಧಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಲಿ ಎಂದು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News