×
Ad

ತುಮಕೂರು: ಅಂತರ್ ಜಾತಿ ದಂಪತಿಗೆ ಸಾಮಾಜಿಕ ಬಹಿಷ್ಕಾರ

Update: 2021-08-27 22:31 IST

ತುಮಕೂರು: ಅಂತರ್ ಜಾತಿಯ ಮದುವೆಯಾಗಿ, ಗ್ರಾಮದಲ್ಲಿಯೇ ನೆಮ್ಮದಿಯಿಂದ ಬದುಕುತ್ತಿರುವುದನ್ನು ಸಹಿಸಲಾರದೆ ದಂಪತಿಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಘಟನೆ ಕ್ಷೇತ್ರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಅವರ ಸ್ವ ಕ್ಷೇತ್ರ ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯೂರು ಹೋಬಳಿ ಕೋರಗೆರೆ ಗ್ರಾಮದಲ್ಲಿ ನಡೆದಿದೆ.

ಕೋರಗೆರೆ ಗ್ರಾಮದ ದಲಿತ ಸಮುದಾಯಕ್ಕೆ ಸೇರಿದ ನಾಗರಾಜು ಮತ್ತು ಶೆಟ್ಟಬಣಜಿಗ ಸಮುದಾಯದ ಶಶಿಕಲ ಎಂಬುವವರು ಪರಸ್ವರ ಪ್ರೀತಿಸಿ, 2007ರಲ್ಲಿಯೇ ಎರಡು ಮನೆಯವರ ವಿರೋಧದದ ನಡುವೆಯೂ ಮದುವೆಯಾಗಿದ್ದರು. ಮದುವೆಯ ನಂತರ ತಮ್ಮ ಗ್ರಾಮದಲ್ಲಿಯೇ ವಾಸಿಸುತಿದ್ದು, ಮೊದಲಿಗೆ ಕೂಲಿ, ನಾಲಿ ಮಾಡಿ ಜೀವನ ನಡೆಸುತಿದ್ದ ಕುಟುಂಬ ನಂತರ, ತಮಗಿದ್ದ ಜಮೀನಿನಲ್ಲಿಯೇ ಸಣ್ಣ ಮನೆ ನಿರ್ಮಿಸಿಕೊಂಡು, ಕೊಳವೆಬಾವಿ ಕೊರೆಸಿ, ಜಮೀನು ಅಭಿವೃದ್ದಿಪಡಿಸಿ ಕೊಂಡು, ತಾವಾಯಿತು, ತಮ್ಮ ಭೂಮಿಯಾಯಿತು ಎಂದು ನೆಮ್ಮದಿಯ ಬದುಕು ಕಾಣುವ ಸ್ಥಿತಿಗೆ ಬಂದಿದೆ. 

ಕೆಳ ಜಾತಿಯ ಹುಡುಗನೊಬ್ಬನನ್ನು ಮದುವೆಯಾಗಿ ನಮ್ಮೂರಿನಲ್ಲಿಯೇ ನೆಲೆಸಿ, ಸಿರಿವಂತರಾಗುತ್ತಿರುವುದನ್ನು ಸಹಿಸದ ಗ್ರಾಮದ ಮೇಲ್ಜಾತಿಯ ಜನರು,ಕಳೆದ ಎರಡು ತಿಂಗಳ ಹಿಂದೆ ಸದರಿ ಕುಟುಂಬದ ವಿರುದ್ದ ದಲಿತರನ್ನೇ ಎತ್ತಿಕಟ್ಟಿ, ವಿನಾಕಾರಣ ನಾಗರಾಜನ ಮೇಲೆ ಹಲ್ಲೆ ನಡೆಸಿದ್ದೇ ಅಲ್ಲದೆ,ಗ್ರಾಮದಿಂದ ಬಹಿಷ್ಕಾರ ಹಾಕಿದ್ದಾರೆ.ನಾಗರಾಜು ಕುಟುಂಬಕ್ಕೆ ಕುಡಿಯಲು ನೀರು ಕೊಡದೆ, ಗ್ರಾಮದ ಅಂಗಡಿಗಳಲ್ಲಿ ಮನೆಗೆ ಅಗತ್ಯವಿರುವ ಸಾಮಾನುಗಳನ್ನು ನೀಡದೆ ತೊಂದರೆ ಕೊಡುತ್ತಿದ್ದಾರೆ. ಈ ಸಂಬಂಧ ಹುಳಿಯಾರು ಪೊಲೀಸ್ ಠಾಣೆಗೆ ದೂರು ನೀಡಿದರೂ ತೆಗೆದುಕೊಳ್ಳುತ್ತಿಲ್ಲ.ಚಿಕ್ಕನಾಯಕನಹಳ್ಳಿ, ತಿಪಟೂರು ಪೊಲೀಸ್ ಠಾಣೆಗೆ ದೂರು ನೀಡಿದರೂ ನ್ಯಾಯ ಸಿಗದ ಹಿನ್ನೆಲೆಯಲ್ಲಿ ಕಳೆದೆರಡು ದಿನಗಳ ಹಿಂದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಅವರು ನ್ಯಾಯ ಕೊಡಿಸುವ ಭರವಸೆ ನೀಡಿದ್ದಾರೆ.ಇನ್ನೇರಡು ದಿನಗಳಲ್ಲಿ ಗ್ರಾಮಕ್ಕೆ ಖುದ್ದು ಭೇಟಿ ನೀಡುವುದಾಗಿ ತಿಳಿಸಿದ್ದಾರೆ ಎಂದು ನಾಗರಾಜು ಪತ್ನಿ ಶಶಿಕಲ ಮಾಧ್ಯಮದವರ ಮುಂದೆ ತಮ್ಮ ಅಳಲು ತೋಡಿಕೊಂಡರು.

ಅಂತರಜಾತಿಯ ವಿವಾಹವಾಗಿ,ಯಾರಿಗೂ ತೊಂದರೆ ಕೊಡದೆ, ಗ್ರಾಮದಲ್ಲಿಯೇ ಬದುಕುತ್ತಿರುವುದನ್ನು ಮೇಲ್ವರ್ಗದ ಜನರಿಗೆ ಸಹಿಸಲು ಆಗುತ್ತಿಲ್ಲ. ದಲಿತರನ್ನೇ ಎತ್ತಿಕಟ್ಟಿ ತೊಂದರೆ ನೀಡುತ್ತಿದ್ದಾರೆ. ನಮಗೆ ಇಬ್ಬರು ಗಂಡು ಮಕ್ಕಳಿದ್ದು, ಇರುವ ಜಮೀನು ಬಿಟ್ಟು ಎಲ್ಲಿಗೆ ಹೋಗಬೇಕು.ನಾವು ನಮ್ಮದಿಯಿಂದ ನಮ್ಮ ಜಮೀನಿನಲ್ಲಿಯೇ ಬದುಕುವಂತಹ ಅವಕಾಶವನ್ನು ಜಿಲ್ಲಾಡಳಿತ ನೀಡಬೇಕೆಂಬುದು ನಮ್ಮ ಮನವಿಯಾಗಿದೆ ಎಂದರು.

ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾದ ನಾಗರಾಜು ಮಾತನಾಡಿ,ಕಳೆದ 14 ವರ್ಷಗಳಿಂದ ನಾವಾಯಿತು, ನಮ್ಮ ಕುಟುಂಬವಾಯಿತು ಎಂದು ಜೀವನ ನಡೆಸುತ್ತಿದ್ದೇವೆ.ಆದರೆ ದಲಿತನೊಬ್ಬ ಕೊಳವೆ ಬಾವಿ ಕೊರೆಯಿಸಿ,ಜಮೀನು ಅಭಿವೃದ್ದಿ ಪಡಿಸಿರುವುದನ್ನು ಸಹಿಸಲಾಗದೆ.ನಮಗೆ ಸರಿಸಮನಾಗಿ ಬದುಕುತಿದ್ದಾರೆ ಎಂದು ಇಲ್ಲ,ಸಲ್ಲದ ವಿಚಾರಗಳಿಗೆ ಜಗಳ ತೆಗೆದು ಕಿರುಕುಳ ನೀಡುತಿದ್ದಾರೆ ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News