ನಮ್ಮತ್ತ ಬೆರಳು ತೋರಿಸಿ ಪ್ರಯೋಜನವಿಲ್ಲ, ಬಿಜೆಪಿ ದೇಶವನ್ನು ಮಾರಾಟ ಮಾಡಿದೆ: ಮಮತಾ ಬ್ಯಾನರ್ಜಿ

Update: 2021-08-28 12:26 GMT

ಹೊಸದಿಲ್ಲಿ/ ಕೋಲ್ಕತ್ತಾ: ಕಲ್ಲಿದ್ದಲು ಕಳ್ಳಸಾಗಣೆ ಆರೋಪಿತ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ತೃಣಮೂಲ ಸಂಸದ ಅಭಿಷೇಕ್ ಬ್ಯಾನರ್ಜಿ ಮತ್ತು ಅವರ ಪತ್ನಿ ರುಜಿರಾ ಬ್ಯಾನರ್ಜಿಗೆ ಸಮನ್ಸ್ ನೀಡಿದ ಬೆನ್ನಲ್ಲೇ, "ಬಿಜೆಪಿ ನಮ್ಮ ವಿರುದ್ಧ ಕೇಂದ್ರ ಏಜೆನ್ಸಿಗಳನ್ನು ಬಳಸುತ್ತಿದೆ" ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

ಅಭಿಷೇಕ್‌ ಬ್ಯಾನರ್ಜಿಗೆ ದಿಲ್ಲಿಯಲ್ಲಿರುವ ಏಜೆನ್ಸಿಯ ಮುಂದೆ ಹಾಜರಾಗುವಂತೆ ಹೇಳಲಾಗಿದ್ದರೆ, ಅವರ ಪತ್ನಿಗೆ ಸೆಪ್ಟೆಂಬರ್ 1 ರಂದು ತಮ್ಮ ಮುಂದೆ ಹಾಜರಾಗುವಂತೆ ಸೂಚಿಸಲಾಗಿದೆ.

ಬಿಜೆಪಿಯು ತನ್ನ ಪಕ್ಷದ ವಿರುದ್ಧ ರಾಜಕೀಯವಾಗಿ ಹೋರಾಡುವಂತೆ ಸವಾಲು ಹಾಕಿದ ಮುಖ್ಯಮಂತ್ರಿ ಮಮತಾ "ನೀವು ಯಾಕೆ ನಮ್ಮ ವಿರುದ್ಧ ಇಡಿಯನ್ನು ಛೂ ಬಿಡುತ್ತಿದ್ದೀರಿ? ನೀವು ನಮ್ಮ ಒಂದು ಪ್ರಕರಣವನ್ನಿಟ್ಟು ಆಡುತ್ತಿದ್ದೀರಾದರೆ, ನಿಮ್ಮ ಪ್ರಕರಣಗಳ ಮೂಟೆಗಳನ್ನೇ ನಾವು ಬಯಲಿಗೆಳೆಯಲಿದ್ದೇವೆ. ಹೇಗೆ ಹೋರಾಡಬೇಕೆಂದು ನಮಗೆ ತಿಳಿದಿದೆ. ಗುಜರಾತ್‌ ನ ಇತಿಹಾಸವೂ ನಮಗೆ ತಿಳಿದಿದೆ" ಎಂದು ಮಮತಾ ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಕಲ್ಲಿದ್ದಲು ಹಗರಣದ ಕುರಿತಾದಂತೆ ಟಿಎಂಸಿ ಕಡೆಗೆ ನೀವು ಬೆರಳು ತೋರಿಸುವ ಅಗತ್ಯವಿಲ್ಲ. ಅದು ಕೇಂದ್ರದ ಅಡಿಯಲ್ಲಿದೆ. ಕೇಂದ್ರದ ಸಚಿವರುಗಳ ಕಥೆಯೇನು? ಬಂಗಾಳದ ಕಲ್ಲಿದ್ದಲು ಗಣಿಯನ್ನು ಲೂಟಿ ಮಾಡಿದ ಬಿಜೆಪಿ ನಾಯಕರ ಕಥೆಯೇನು? ಕೇಂದ್ರ ಸರಕಾರವು ದೇಶದ ರೈಲ್ವೇ, ವಿಮಾನ ನಿಲ್ದಾಣ ಮುಂತಾದವುಗಳನ್ನು ಮಾರಲು ಹೊರಟಿದೆ. ಅವರು ಎಲ್ಲವನ್ನೂ ಮಾರಬಹುದು ಆದರೆ ಈ ದೇಶದ ಮಣ್ಣನ್ನು ಮಾರಲು ಅವರಿಗೆ ಸಾಧ್ಯವಿದೆಯೇ?" ಎಂದು ಮಮತಾ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News