ಮಡಿಕೇರಿ: ವೀಕೆಂಡ್ ಕರ್ಫ್ಯೂ ನಡುವೆಯೇ ಕೋಟೆ ಬೆಟ್ಟದಲ್ಲಿ ಪ್ರವಾಸಿಗರ ದಂಡು: ಪೊಲೀಸರು, ಅರಣ್ಯ ಸಿಬ್ಬಂದಿಗಳಿಂದ ತಡೆ

Update: 2021-08-28 18:10 GMT

ಮಡಿಕೇರಿ ಆ.28 : ಕೊಡಗು ಜಿಲ್ಲೆಯಲ್ಲಿ ವೀಕೆಂಡ್ ಕಫ್ರ್ಯೂ ಜಾರಿಯಲ್ಲಿದ್ದರೂ ಪ್ರವಾಸಿಗರ ಸಂಖ್ಯೆಗೇನು ಕೊರತೆಯಾಗಿಲ್ಲ. ಶುಕ್ರವಾರ ಸಂಜೆಯೇ ಜಿಲ್ಲೆಯನ್ನು ಪ್ರವೇಶಿಸುತ್ತಿರುವ ರಾಜ್ಯ ಮತ್ತು ಹೊರ ರಾಜ್ಯದ ಪ್ರವಾಸಿಗರು ನಿರಾತಂಕವಾಗಿ ವೀಕೆಂಡ್ ಮೋಜು ಮಸ್ತಿಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ.

 ಇತ್ತೀಚಿನ ದಿನಗಳಲ್ಲಿ ನೀಲಕುರುಂಜಿ ಪುಷ್ಪ ರಾಶಿಯನ್ನು ನೋಡಲೆಂದೇ ಹೆಸರುವಾಸಿ ಪ್ರವಾಸಿತಾಣಗಳಾದ ಮಾಂದಲಪಟ್ಟಿ ಹಾಗೂ ಕೋಟೆ ಬೆಟ್ಟಕ್ಕೆ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಇಂದು ಕೂಡ ಕೋಟೆ ಬೆಟ್ಟದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚೇ ಇತ್ತು. ವೀಕೆಂಡ್ ಕಫ್ರ್ಯೂ ಜಾರಿಯಲ್ಲಿದ್ದರೂ ಇದರ ಪರಿವೇ ಇಲ್ಲದ ಪ್ರವಾಸಿಗರು ತಮ್ಮ ತಮ್ಮ ವಾಹನಗಳಲ್ಲಿ ಆಗಮಿಸುತ್ತಿದ್ದರು. 

ಇದನ್ನು ಗಮನಿಸಿದ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಪ್ರವಾಸಿಗರನ್ನು ತಡೆದು ಕಫ್ರ್ಯೂ ಜಾರಿಯಲ್ಲಿರುವ ಬಗ್ಗೆ ತಿಳಿ ಹೇಳಿ ವಾಪಾಸ್ಸು ಕಳುಹಿಸಿದರು. ನೂರಾರು ಪ್ರವಾಸಿಗರು ನಿರಾಶೆಯಿಂದ ಮರಳಿದರು. ವೃತ್ತ ನಿರೀಕ್ಷಕ ಮಹೇಶ್ ಹಾಗೂ ಎಸಿಎಫ್ ನೆಹರು ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. 

ಕೋವಿಡ್ ವ್ಯಾಪಿಸುವ ಆತಂಕದಿಂದ ಪ್ರವಾಸಿಗರನ್ನು ನಿಯಂತ್ರಿಸಬೇಕೆನ್ನುವ ಉದ್ದೇಶದಿಂದಲೇ ವೀಕೆಂಡ್ ಕಫ್ರ್ಯೂವನ್ನು ಜಿಲ್ಲಾಡಳಿತ ಜಾರಿಗೆ ತಂದಿದೆ. ಆದರೆ ಈ ನಿಯಮ ಯಾಕೋ ಪ್ರವಾಸಿಗರಿಗೆ ಅನ್ವಯವಾದಂತೆ ಕಂಡು ಬರುತ್ತಿಲ್ಲ. ಕೊಡಗಿನ ಜನ ಸರ್ಕಾರದ ನಿಯಮಕ್ಕೆ ಗೌರವ ನೀಡಿ ಮನೆಗಳಲ್ಲೇ ಉಳಿದಿದ್ದರೆ ಪ್ರವಾಸಿಗರು ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಗೆ ಆಗಮಿಸುತ್ತಲೇ ಇದ್ದಾರೆ. ಪ್ರವಾಸಿತಾಣಗಳ ವೀಕ್ಷಣೆಗೆ ಅವಕಾಶ ದೊರೆಯದಿದ್ದರೂ ರೆಸಾರ್ಟ್ ಮತ್ತು ಹೋಂಸ್ಟೇಗಳಲ್ಲಿ ನೆಲೆ ನಿಂತು ಮೋಜು, ಮಸ್ತಿಯಲ್ಲಿ ತೊಡಗಿದ್ದಾರೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News