ಸಿಂದಗಿ: ಪೊಲೀಸ್ ವಶದಲ್ಲಿದ್ದ ಅತ್ಯಾಚಾರ ಆರೋಪಿ ಅನುಮಾನಾಸ್ಪದ ಸಾವು
ವಿಜಯಪುರ, ಆ.29: ಬಾಲಕಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಆರೋಪಿಯೋರ್ವ ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಸಿಂದಗಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಇಂದು ಬೆಳಗ್ಗೆ ನಡೆದಿರುವುದು ವರದಿಯಾಗಿದೆ. ಈ ಸಂಬಂಧ ಠಾಣೆಯ ಎದುರು ಜಮಾಯಿಸಿರುವ ಮೃತನ ಕುಟುಂಬಸ್ಥರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಯಂಕಂಚಿ ಗ್ರಾಮದ ದೇವೇಂದ್ರ ಭೀಮರಾಯ ಸಂಗೋಗಿ ಮೃತಪಟ್ಟವರು. ಈತ ಡಾಬಾ ನಡೆಸುತ್ತಿದ್ದನೆನ್ನಲಾಗಿದೆ. ಡಾಬಾದಲ್ಲಿ ಕೆಲಸ ಮಾಡುವ ಕಾರ್ಮಿಕನ 13 ವರ್ಷದ ಮಗಳ ಮೇಲೆ ಆ.24ರಂದು ಅತ್ಯಾಚಾರ ನಡೆದಿತ್ತು. ಈ ಬಗ್ಗೆ ಪೊಕ್ಸೊ ಕೇಸು ದಾಖಲಿಸಿಕೊಂಡಿದ್ದ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ದೇವೇಂದ್ರ ಭೀಮರಾಯ ಸಂಗೋಗಿಯನ್ನು ಶನಿವಾರ ಸಂಜೆ ಬಂಧಿಸಿದ್ದರು. ರಾತ್ರಿ ವೇಳೆ ಈತ ಶೌಚಾಲಯಕ್ಕೆ ಹೋದಾತ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ. ಈ ಪ್ರಕರಣದ ಸಮಗ್ರ ತನಿಖೆಗಾಗಿ ಸಿಐಡಿ ತನಿಖಾ ಸಂಸ್ಥೆಗೆ ವಹಿಸಲು ಶಿಫಾರಸು ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದ ಕುಮಾರ್ ತಿಳಿಸಿದ್ದಾರೆ.
ಆದರೆ ಈ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿರುವ ದೇವೇಂದ್ರ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಪೊಲೀಸ್ ಠಾಣೆಯೆದುರು ಜಮಾಯಿಸಿದ್ದಾರೆ. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.