×
Ad

ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ 80 ದಿನಗಳ 9 ಅಧಿವೇಶನಕ್ಕೆ 98.80 ಕೋಟಿ ರೂ.ಖರ್ಚು:ಆರ್ ಟಿಐ ವರದಿ ಬಹಿರಂಗ

Update: 2021-08-29 17:46 IST

ಬೆಳಗಾವಿ, ಆ. 29: `ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದ ವಿಧಾನ ಮಂಡಲದ 9 ಅಧಿವೇಶನಕ್ಕೆ ಒಟ್ಟು 98.80 ಕೋಟಿ ರೂಪಾಯಿಗಳಷ್ಟು ಬೃಹತ್ ಮೊತ್ತವನ್ನು ವೆಚ್ಚ ಮಾಡಲಾಗಿದೆ' ಎಂಬ ಅಂಶ ಬೆಳಕಿಗೆ ಬಂದಿದೆ.

ರವಿವಾರ ಜಿಲ್ಲೆಯ ಮೂಡಲಗಿಯ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಅವರು ಮಾಹಿತಿ ಹಕ್ಕು ಕಾಯ್ದೆಯಲ್ಲಿ ಪಡೆದಿರುವ ಈ ಮಾಹಿತಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದರು. `ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ 2006ರಿಂದ 2018ರ ವರೆಗೆ ಒಟ್ಟು 80 ದಿನಗಳ ಕಾಲ ವಿಧಾನ ಮಂಡಲ ಅಧಿವೇಶನ ನಡೆದಿದೆ. ದಿನವೊಂದಕ್ಕೆ ಸರಾಸರಿ 1.20ಕೋಟಿ ರೂ.ವೆಚ್ಚ ಮಾಡಿರುವುದು ಸರಕಾರದಿಂದ ಒದಗಿಸಿರುವ ದಾಖಲೆಗಳಿಂದ ಬಯಲಾಗಿದೆ' ಎಂದು ಮಾಹಿತಿ ನೀಡಿದ್ದಾರೆ.

`ಉತ್ತರ ಕರ್ನಾಟಕ ಭಾಗದ ಅಭಿವೃದ್ದಿಗೆ ದೃಷ್ಟಿಯಿಂದ ರಾಜ್ಯದ ಜನತೆ ತೆರಿಗೆ ಹಣದಲ್ಲಿ ನಿರ್ಮಿಸಿದ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆಸಿದ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆಯೇ ಚರ್ಚೆಯಾಗಿಲ್ಲ. ಆದರೆ, ಸಾರ್ವಜನಿಕರ ತೆರಿಗೆ ಹಣವನ್ನು ಪೆÇೀಲು ಮಾಡಲಾಗಿದೆ. ಮುಂಬರುವ ಅಧಿವೇಶನವು ಪ್ರತಿಭಟನೆ ನಡೆಸುವವರ ಮನವಿ ಸ್ವೀಕರಿಸುವ ಕಾರ್ಯಕ್ರಮ ಆಗಬಾರದು' ಎಂದು ಭೀಮಪ್ಪ ಗಡಾದ ಕೋರಿದರು.

`ರಾಜ್ಯದ ಗಡಿ ಜಿಲ್ಲೆ ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಲು ಕಾಳಜಿ ವಹಿಸಬೇಕು. ಸಚಿವ ಸಂಪುಟ ಸಭೆಗಳನ್ನು ಬೆಳಗಾವಿಯಲ್ಲಿಯೇ ನಡೆಸುವಂತಾಗಬೇಕು. ರಾಜ್ಯ ಮಟ್ಟದ ಕೆಲ ಪ್ರಮುಖ ಕಚೇರಿಗಳನ್ನು ಇಲ್ಲಿಗೆ ಸ್ಥಳಾಂತರಿಸಬೇಕು. ಆ ಮೂಲಕ ಬೆಳಗಾವಿ ಸುವರ್ಣ ವಿಧಾನಸೌಧ ಬಳಕೆ ಆಗಬೇಕು' ಎಂದು ಅವರು ಆಗ್ರಹಿಸಿದರು.

`ಸುವರ್ಣ ವಿಧಾನಸೌಧದ ಉದ್ಘಾಟನೆ ಕಾರ್ಯಕ್ರಮಕ್ಕೆ 8 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಪ್ರವಾಸಿ ಮಂದಿರದಲ್ಲಿ ರಾಷ್ಟ್ರಪತಿ ಅವರಿಗೆ ಆಸನಕ್ಕಾಗಿ 36 ಲಕ್ಷ ರೂ.ವೆಚ್ಚ ಮಾಡಲಾಗಿದೆ. ಆಗ ಪ್ರವಾಸಿಮಂದಿರದ ಉದ್ಯಾನ ಅಭಿವೃದ್ಧಿಪಡಿಸಲು 31 ಲಕ್ಷ ರೂ., ಅಧಿವೇಶನದಲ್ಲಿ ಪಾಲ್ಗೊಳ್ಳುವ ಪ್ರತಿ ಶಾಸಕರಿಗೆ 2 ಸಾವಿರ ರೂ.ದಿನ ಭತ್ಯೆ, ಅವರ ಕ್ಷೇತ್ರಗಳಿಂದ ಇಲ್ಲಿಗೆ ಬರುವುದಕ್ಕಾಗಿ ಪ್ರತಿ ಕಿ.ಮೀ.ಗೆ 25 ರೂ.ಪ್ರಯಾಣ ಭತ್ಯೆ ನೀಡಲಾಗಿದೆ. ಹುಬ್ಬಳ್ಳಿಯಲ್ಲಿ ವಾಸ್ತವ್ಯ ಹೂಡಿದ್ದ ಶಾಸಕರು ಸುವರ್ಣ ವಿಧಾನಸೌಧಕ್ಕೆ ಬರಲು ಸಾರಿಗೆ ಭತ್ಯೆಯಾಗಿ ನಿತ್ಯ 5 ಸಾವಿರ ರೂ. ಮತ್ತು ನಗರದಲ್ಲಿ ತಂಗಿದ್ದವರಿಗೆ ಸೌಧ ತಲುಪಲು ದಿನವೊಂದಕ್ಕೆ 2,500 ರೂ.ಭತ್ಯೆ ನೀಡಲಾಗಿದೆ ಎಂದು ತಿಳಿಸಿದರು.

`2017ರ ಅಧಿವೇಶನದ ವೇಳೆ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಹೂಡಿದ್ದ ಮುಖ್ಯಮಂತ್ರಿ, ನಾಲ್ವರು ಸಚಿವರು ಹಾಗೂ ಸಿಬ್ಬಂದಿಯ ಊಟ ಮತ್ತು ಉಪಾಹಾರಕ್ಕಾಗಿ 24 ಲಕ್ಷ ರೂ.ಖರ್ಚು ಮಾಡಲಾಗಿದೆ. ಸುವರ್ಣ ವಿಧಾನಸೌಧದ ಉದ್ಯಾನ ನಿರ್ವಹಣೆ, ಸಿವಿಲ್ ಕಾಮಗಾರಿ ಹಾಗೂ ವಿದ್ಯುತ್ ಬಿಲ್‍ಗಾಗಿ 2017ರ ಎಪ್ರಿಲ್ ವರೆಗೆ 8 ಕೋಟಿ ರೂ.ವೆಚ್ಚವಾಗಿದ್ದು, ಇದೇ ವೇಳೆ ಕಟ್ಟಡದ `ಪಾಚಿ ತೊಳೆಯಲು' 24 ಲಕ್ಷ ರೂ.ಗಳನ್ನು ಖರ್ಚು ಮಾಡಲಾಗಿದೆ ಎಂದು ಅವರು ವಿವರ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News