ಕೋವಿಡ್ ನಮಗೆ ಅತ್ಯುತ್ತಮ ಪಾಠ ಕಲಿಸಿದೆ: ಸಚಿವ ಆರ್.ಅಶೋಕ್

Update: 2021-08-29 12:35 GMT

ಬೆಂಗಳೂರು, ಆ. 29: `ನಾವು ಈ ರೀತಿಯ ಸಂಕಷ್ಟವೊಂದನ್ನ ಎದುರಿಸಬೇಕಾದಂತಹ ಸಂದರ್ಭ ಬರುತ್ತದೆ ಎಂದು ಕನಸಿನಲ್ಲಿಯೂ ಊಹಿಸಿರಲಿಲ್ಲ. ಕೋವಿಡ್ ಎಲ್ಲವನ್ನು ಬದಲಿಸಿ ಹಾಕಿದೆ. ಕೋವಿಡ್‍ನ ಘೋರತೆ ನೆನೆಸಿಕೊಂಡರೆ ಆಂಬ್ಯುಲೆನ್ಸ್ ಸೈರನ್ ಸದ್ದು ಮತ್ತು ಶವಗಳನ್ನ ಸುಡುವ ಚಿತ್ರಗಳೇ ಕಣ್ಣಾ ಮುಂದೆ ಸುಳಿಯುತ್ತವೆ' ಎಂದು ಕಂದಾಯ ಸಚಿವ ಆರ್. ಅಶೋಕ್ ಇಂದಿಲ್ಲಿ ಕೋವಿಡ್‍ನ ಭೀಕರತೆಯನ್ನು ನೆನಪು ಮಾಡಿಕೊಂಡಿದ್ದಾರೆ.

ರವಿವಾರ ಇಲ್ಲಿನ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ 100ಕ್ಕೂ ಅಧಿಕ ವೈದ್ಯರುಗಳಿಗೆ ಸನ್ಮಾನ ಮಾಡಿ ಮಾತನಾಡಿದ ಅವರು, `ಕೋವಿಡ್ ಸಾಂಕ್ರಾಮಿಕದಿಂದಾಗಿ ಬದುಕು ಅಂತಂತ್ರವಾಗಿದೆ ಎಂದೆನಿಸಬಹುದು. ಆದರೆ, ಕೆಲ ಪಾಠಗಳನ್ನು ಅದು ಕಲಿಸಿದೆ. ಉದ್ದನೆಯ ಸಾಲಿನಲ್ಲಿ ನಿಲ್ಲುವುದು ಮತ್ತು ಜೀವನದ ಬಗ್ಗೆ ಶಿಸ್ತು ಬೆಳೆಸಿಕೊಳ್ಳುವುದನ್ನ ಕೋವಿಡ್ ಹೇಳಿಕೊಟ್ಟಿದೆ' ಎಂದರು.

ಒಂದೊಮ್ಮೆ ಜನ ಮನೆಯಿಂದ ಹೊರ ಬರಲು ಹಿಂದೇಟು ಹಾಕುತ್ತಿದ್ದ ಸಂದರ್ಭಗಳಲ್ಲಿ, ವೈದ್ಯರು ರೋಗಿಗಳ ಚಿಕಿತ್ಸೆಗೆ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟರು. ಇಂದು ನಮಗಿರುವ ಏಕೈಕ ಭರವಸೆಯೆಂದರೆ ಅದು ವೈದ್ಯರು ಮಾತ್ರ. ಹೀಗಾಗಿ ನಾನು ಅವರಿಗೆ ತುಂಬು ಹೃದಯದಿಂದ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಹಾಗೆಯೇ ಪೌರಕಾರ್ಮಿಕರಿಗೂ ಧನ್ಯವಾದಗಳನ್ನ ಸಲ್ಲಿಸಲು ಇಚ್ಛಿಸುತ್ತೇನೆ. ಕಾರಣ ಅವರು ನಗರದ ಸ್ವಚ್ಛತೆಗೆ ಎರಡು ಅಲೆಯ ವೇಳೆಯಲ್ಲಿಯೂ ಕಟಿಬದ್ಧರಾಗಿ ನಿಂತರು' ಎಂದು ಅಶೋಕ್ ಕೊಂಡಾಡಿದರು.

ಸಾಮಾಜಿಕ ಕಾರ್ಯಗಳನ್ನು ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ಕೈಗೊಳ್ಳಲು ಇಚ್ಛಿಸುವ ವೈದ್ಯರನ್ನು ಸೇರಿದಂತೆ ಹಲವು ವಲಯಗಳ ವ್ಯಕ್ತಿಗಳಿಗೆ ತಮ್ಮ ಜೊತೆ ಕೈ ಜೋಡಿಸಬೇಕು. ಕೋವಿಡ್ ಸೋಂಕಿ ಇನ್ನೂ ನಮ್ಮಿಂದ ಸಂಪೂರ್ಣ ಹೋಗಿಲ್ಲ. ಹೀಗಾಗಿ ಎಲ್ಲರೂ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಅಂತರ ಕಾಯ್ದುಕೊಳ್ಳುವುದರ ಜೊತೆಗೆ ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳುವ ಮೂಲಕ ಸರಕಾರದ ಮಾರ್ಗಸೂಚಿಯನ್ನು ಎಲ್ಲರೂ ಪಾಲಿಸಬೇಕು ಎಂದು ಅಶೋಕ್ ಕರೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News