ಮೈಸೂರಿನಲ್ಲಿ ಹೆಚ್ಚಿದ ಅಪರಾಧ ಪ್ರಕರಣ: ಕಾನೂನು ಮತ್ತು ಸುವ್ಯವಸ್ಥೆ ಮತ್ತಷ್ಟು ಭದ್ರಪಡಿಸಲು ಡಿಜಿಪಿ ಪ್ರವೀಣ್ ಸೂದ್ ಸೂ

Update: 2021-08-29 13:02 GMT

ಮೈಸೂರು,ಆ.29: ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದಿಂದ ಎಚ್ಚೆತ್ತ ಪೊಲೀಸ್ ಇಲಾಖೆ ಮೈಸೂರು ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೇ ಮತ್ತಷ್ಟು ಭದ್ರಪಡಿಸಲು ಕ್ರಮ ಕೈಗೊಂಡಿದೆ.

ಕಳೆದ ಎರಡು ದಿನಗಳಿಂದ ಮೈಸೂರಿನಲ್ಲಿಯೇ ಮೊಕ್ಕಾಂ ಹೂಡಿರುವ ಡಿಜಿಪಿ ಪ್ರವೀಣ್ ಸೂದ್ ಹಿರಿಯ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಅತ್ಯಾಚಾರಿಗಳ ವಿಚಾರಣೆ ತನಿಖೆ ಚುರುಕುಗೊಳಿಸುವ ಬಗ್ಗೆ ಮಾರ್ಗದರ್ಶನ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಗರದ ಖಾಸಗಿ ಹೋಟೆಲ್‍ನಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತಿರುವ ಡಿಜಿಪಿ ಪ್ರವೀಣ್ ಸೂದ್ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೇ ಬಗ್ಗೆ ಹೆಚ್ಚು ನಿಗಾವಹಿಸುವಂತೆ ಸೂಚಿಸಿದ್ದಾರೆ. ಯಾವುದೇ ಆರೋಪಗಳು ಕೇಳಿ ಬಂದರೆ ನಿರ್ಲಕ್ಷ್ಯ ವಹಿಸದೆ ಜಾಗೃತರಾಗಿ ಕ್ರಮ ಕೈಗೊಳ್ಳಿ ಯಾವುದೇ ಅಹಿತಕರ ಮತ್ತು ದೌರ್ಜನ್ಯ ಪ್ರಕರಣಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಮೈಸೂರಿನಲ್ಲಿ ಇತ್ತೀಚಿಗೆ ಹೆಚ್ಚುತ್ತಿರುವ ಅಪರಾಧಗಳ ಕುರಿತು ಮಾತನಾಡಿದ ಡಿಜಿಪಿ ಪ್ರವೀಣ್ ಸೂದ್, ಅಪರಾಧ ಪ್ರಕರಣಗಳಿಗೆ ತಕ್ಷಣ ಕಡಿವಾಣ ಹಾಕುವಂತೆ ಸೂಚಿಸಿದ್ದಾರೆ.

ಎಡಿಜಿಪಿ ಪ್ರತಾಪ್ ರೆಡ್ಡಿ, ದಕ್ಷಿಣ ವಲಯ ಐಜಿಪಿ ಮಧುಕರ್ ಪವಾರ್, ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಮೈಸೂರು ಎಸ್ಪಿ ಚೇತನ್, ಡಿಸಿಪಿಗಳಾದ ಪ್ರವೀಣ್ ಗುಂಟಿ, ಗೀತಾ ಪ್ರಸನ್ನ ಎಎಸ್ಪಿ ಶಿವಕುಮಾರ್ ಸೇರಿದಂತೆ  ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು ಎಂದು ತಿಳಿದು ಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News