ಬಿಜೆಪಿಯ ಪ್ರಣಾಳಿಕೆಯಲ್ಲಿ `ಅಂತ್ಯ ಸಂಸ್ಕಾರಕ್ಕೆ ಉಚಿತ ವ್ಯವಸ್ಥೆ' ಕುರಿತು ಡಿ.ಕೆ.ಶಿವಕುಮಾರ್ ಹೇಳಿದ್ದು ಹೀಗೆ...

Update: 2021-08-29 15:03 GMT

ಬೆಳಗಾವಿ, ಆ. 29: `ಕೋವಿಡ್ ಸೋಂಕಿನಿಂದ ಮೃತಪಟ್ಟ ಸುರೇಶ್ ಅಂಗಡಿ ಅವರ ಪಾರ್ಥಿವ ಶರೀರವನ್ನು ಬೆಳಗಾವಿಗೆ ತರಲು ಸಾಧ್ಯವಾಗಲಿಲ್ಲ. ರಾಜ್ಯ ಹಾಗೂ ಕೇಂದ್ರದಲ್ಲಿ ಅವರದ್ದೇ ಪಕ್ಷದ ಸರಕಾರವಿದ್ದರೂ ಮೃತದೇಹ ತಂದು ಇಲ್ಲಿನ ಜನರಿಗೆ ದರ್ಶನ ಮಾಡಿಸಲು ಆಗಲಿಲ್ಲ. ಇದೀಗ `ಅಂತ್ಯ ಸಂಸ್ಕಾರಕ್ಕೆ ಉಚಿತ ವ್ಯವಸ್ಥೆ ಕಲ್ಪಿಸುವ' ಭರವಸೆ ನೀಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಅತ್ಯಂತ ಸಂತೋಷ, ವಿಶ್ವಾಸದಿಂದ ನಾನು ಬೆಳಗಾವಿಗೆ ಆಗಮಿಸಿದ್ದೇನೆ. ಲೋಕಸಭೆ ಉಪಚುನಾವಣೆಯಲ್ಲಿ ಬೆಳಗಾವಿ ಮಹಾಜನತೆ ನಮಗೆ ಅತಿಹೆಚ್ಚು ವಿಶ್ವಾಸ ಕೊಟ್ಟಿದ್ದಾರೆ. ಚುನಾವಣೆಯಲ್ಲಿ ಸೋತರೂ ನಮ್ಮ ಪಕ್ಷದ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಅವರಿಗೆ ಇಲ್ಲಿನ ಮತದಾರರು ಹೆಚ್ಚಿನ ಬಲ ಕೊಟ್ಟಿದ್ದಾರೆ' ಎಂದು ನೆನಪು ಮಾಡಿಕೊಂಡರು.

ಶೇ.50ರಷ್ಟು ವಾಣಿಜ್ಯ ತೆರಿಗೆ ವಿನಾಯಿತಿ: ಸೆ.3ಕ್ಕೆ ನಡೆಯಲಿರುವ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೊರೋನ ಸೋಂಕಿನಿಂದ ಸಂಕಷ್ಟಕ್ಕೆ ಸಿಲುಕಿರುವ ವಾಣಿಜ್ಯ ತೆರಿಗೆದಾರರಿಗೆ ಶೇ.50ರಷ್ಟು ವಾಣಿಜ್ಯ ತೆರಿಗೆಯಲ್ಲಿ ವಿನಾಯಿತಿ ನೀಡಲಾಗುವುದು. 20 ವರ್ಷದಿಂದ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಸಿಡಿಪಿ ಇರಲಿಲ್ಲ. ಸತೀಶ್ ಜಾರಕಿಹೊಳಿ ಸಚಿವರಾಗಿದ್ದಾಗ ಸಿಡಿಪಿ ಬಂದಿದೆ. ಮತ್ತೊಂದು ಸಿಡಿಪಿ ಕೊಡುತ್ತೇವೆ ಎಂದರು.

ನಗರದ ಅಭಿವೃದ್ಧಿ ಜೊತೆ ಉದ್ಯೋಗ ಸೃಷ್ಟಿ ಮಾಡುತ್ತೇವೆ. ಜನರು ಉದ್ಯೋಗಕ್ಕೆ ಬೆಂಗಳೂರಿಗೆ ಹೋಗುವುದನ್ನು ತಪ್ಪಬೇಕು. ಕೇವಲ ಬೆಂಗಳೂರಿಗೆ ಬಿಲ್ಡಿಂಡ್‍ಗಳು ಸೀಮಿತ ಆಗಬಾರದು ಇಲ್ಲಿಗೂ ಬೇಕು. ಐಟಿ ಪಾರ್ಕ್, ಕಚೇರಿ, ಹೋಟೆಲ್ ಸೇರಿ ವಾಣಿಜ್ಯ ಚಟುವಟಿಕೆಗಳ ವೃದ್ದಿಗೆ ಆಸ್ಥೆ ವಹಿಸಲಾಗುವುದು. ಕೋವಿಡ್ ಸಂಕಷ್ಟಕ್ಕೆ ಸಿಕ್ಕ ನೇಕಾರರು, ರಿಕ್ಷಾ ಚಾಲಕರು ಸೇರಿದಂತೆ ವಿವಿಧ ಸಮುದಾಯಗಳ ಜನವರ್ಗಗಳಿಗೆ 5 ಸಾವಿರ ರೂ.ಪರಿಹಾರ ನೀಡಲಾಗುವುದು ಎಂದರು.

ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆಯಲ್ಲಿ 15 ವರ್ಷದಿಂದ ಬಿಜೆಪಿ ಆಡಳಿತದಲ್ಲಿದ್ದು, ಎರಡು ಪ್ರಣಾಳಿಕೆ ಬಿಡುಗಡೆ ಮಾಡಿದ್ದರು. ಬಿಜೆಪಿ ಪ್ರಣಾಳಿಕೆಯಲ್ಲಿ ಬೆಳಗಾವಿ ಸೇರಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ ಹೈಸ್ಪೀಡ್ ರೈಲು ಮಾಡ್ತೀವಿ ಎಂದಿದ್ದಾರೆ. ಎಲ್ಲಿ ಯಾರಿಗೆ ರೈಲು ಬಿಟ್ಟರು ಎಂದು ಡಿ.ಕೆ.ಶಿವಕುಮಾರ್ ಇದೇ ವೇಳೆ ವ್ಯಂಗ್ಯ ಮಾಡಿದರು.

ರಾಜ್ಯ, ಕೇಂದ್ರದಲ್ಲಿ ಬಿಜೆಪಿಯವರೇ ಇದ್ದಾರೆ. ಬೆಳಗಾವಿ ನಗರದ ಇಬ್ಬರು ಶಾಸಕರು ಬಿಜೆಪಿಯವರು, ಸಂಸದರು ಬಿಜೆಪಿಯವರು. ಡಬಲ್ ಇಂಜಿನ್ ಸರಕಾರ ಇದೀಗ ತ್ರಿಬಲ್ ಇಂಜಿನ್ ಸರಕಾರ ಎಂದು ಹೇಳುತ್ತಿದ್ದಾರೆ. ಆದರೆ, ಸುವರ್ಣ ವಿಧನಸೌಧ ನಿರ್ಮಿಸಿ ಬೆಳಗಾವಿ ಎರಡನೇ ರಾಜಧಾನಿ ಎಂದು ಘೋಷಿಸಿ ಉದಾಸೀನತೆ ಮಾಡಿದ್ದಾರೆ. ಬೆಳಗಾವಿಯಲ್ಲಿ ಒಂದು ವಾರ ಸಭೆ ನಡೆಸಿದರೆ ಬೆಳಗಾವಿಗೆ ಆರ್ಥಿಕ ಬಲ ಬರುತ್ತದೆ. ಆದರೆ, ಬಿಜೆಪಿಯವರಿಗೆ ಯಾವುದೇ ಕಳಕಳಿ ಇಲ್ಲ ಎಂದು ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News