ಯುವಪೀಳಿಗೆ ಮೌಲ್ಯಾಧಾರಿತ ರಾಜಕಾರಣಕ್ಕೆ ಒತ್ತು ನೀಡಲಿ: ಬಸವರಾಜ ಹೊರಟ್ಟಿ
ಬೆಂಗಳೂರು, ಆ. 29: ಇಂದಿನ ಯುವ ಪೀಳಿಗೆ ಮೌಲ್ಯಾಧಾರಿತ ರಾಜಕಾರಣಕ್ಕೆ ಹೆಚ್ಚಿನ ಒತ್ತು ನೀಡಿ ದೇಶದ ಪ್ರಗತಿಗೆ ಶ್ರಮಿಸಬೇಕಾಗಿದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ಗೋವಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಿದ ಅವರು, ರಾಜಕಾರಣ ಮತ್ತು ಮೌಲ್ಯಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಸುಭದ್ರ, ಸಮರ್ಥ ಹಾಗೂ ಸದೃಢ ಭಾರತದ ನಿರ್ಮಾಣದಲ್ಲಿ ಇಂದಿನ ಯುವ ಜನತೆಯ ಪಾತ್ರ ಮಹತ್ವದ್ದಾಗಿದೆ ಎಂದರು.
ಕೇವಲ ರಾಜಕಾರಣದಲ್ಲಿ ಮೌಲ್ಯಗಳು ಉಳಿದರೆ ಸಾಲದು, ಆರೋಗ್ಯ, ಶಿಕ್ಷಣ, ಉದ್ಯಮ ಸೇರಿದಂತೆ ಸಮಾಜದ ಎಲ್ಲಾ ರಂಗಗಳಲ್ಲಿಯೂ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಆಗ ಮಾತ್ರ ದೇಶದ ಸರ್ವಾಗೀಣ ಅಭಿವೃದ್ಧಿ ಕಾಣಲು ಸಾಧ್ಯವೆಂದು ಅವರು ಹೇಳಿದ್ದಾರೆ.
ಭಾರತ ಸ್ವಾತಂತ್ರ್ಯ ಪಡೆಯಲು ಲಕ್ಷಾಂತರ ಯುವ ಜನತೆಯ ಬಲಿದಾನ, ತ್ಯಾಗವಿದೆ. ಅಂತಹ ಮಹಾನ್ ನಾಯಕರ ಇತಿಹಾಸವನ್ನು ಓದಿ ಇಂದಿನ ಯುವ ಜನತೆ ಪ್ರೇರಣೆ ಪಡೆಯಬೇಕು. ನಮ್ಮ ಶಿಕ್ಷಣದಲ್ಲಿಯೂ ಈ ಕುರಿತು ಪಠ್ಯ ಅಳವಡಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.
ಮಾನವೀಯ ಮೌಲ್ಯಗಳ ಜೊತೆಗೆ ಸಾಮಾಜಿಕ ಮೌಲ್ಯಗಳನ್ನು ಅಳವಡಿಸಿಕೊಂಡು ದೇಶದ ಸವಾರ್‍ಂಗೀಣ ಅಭಿವೃದ್ಧಿಗೆ ಯುವ ಜನತೆ ಮುಂದಾಗಬೇಕು ಎಂದು ಸನ್ಮಾನಗೊಂಡ ಜಾಗತಿಕ ಸಾಧಕರು ನಮ್ಮೆಲ್ಲರಿಗೂ ಪ್ರೇರಣೆ ಆಗಿದ್ದಾರೆಂದು ಶ್ಲಾಘಿಸಿದರು.
ಕೇಂದ್ರ ವಾಣಿಜ್ಯ ಮತ್ತು ಉದ್ದಿಮೆ ರಾಜ್ಯ ಸಚಿವ ಸೋಮ್ ಪ್ರಕಾಶ, ಗೋವಾ ರಾಜ್ಯದ ಸಚಿವ ನಿಲೇಶ ಕಬ್ರಾಲ, ಗೋವಿಂದ ಗಾವಡೆ, ಸಂಸದರಾದ ಸುನೀತಾ ದುಗ್ಗಲ ಮತ್ತಿತರರು ಭಾಗವಹಿಸಿದ್ದರು.