ಓ ಮೆಣಸೇ...

Update: 2021-08-29 19:30 GMT

ಮಾಜಿ ಪ್ರಧಾನಿಗಳಾದ ವಾಜಪೇಯಿ ಮತ್ತು ಜವಾಹರ ಲಾಲ್ ನೆಹರೂ ಆದರ್ಶ ನಾಯಕರು- ನಿತಿನ್ ಗಡ್ಕರಿ, ಕೇಂದ್ರ ಸಚಿವ
ಅರ್ಧ ಸತ್ಯಗಳಿಗೆ ಖ್ಯಾತರಾಗಿರುವ ನಿಮ್ಮ ಮಾತಿನ ಯಾವ ಭಾಗವನ್ನು ನಂಬೋಣ?


ಹಿಂದೂ ಪದವನ್ನು ಹೈಜಾಕ್ ಮಾಡಲು ಬಿಜೆಪಿಗೆ ಬಿಡುವುದಿಲ್ಲ- ಹರೀಶ್ ರಾವತ್, ಉತ್ತರಾಖಂಡ ಮಾಜಿ ಮುಖ್ಯಮಂತ್ರಿ
ಎಂದೋ ಆಗಿ ಬಿಟ್ಟಿರುವ ಇತಿಹಾಸದ ದುರಂತದ ಬಗ್ಗೆ ಭವಿಷ್ಯತ್ ಧ್ವನಿಯಲ್ಲಿ ಮಾತನಾಡುತ್ತಿದ್ದೀರಲ್ಲಾ!


ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಖಾಯಂ ಆಗಿ ಪ್ರತಿಪಕ್ಷದಲ್ಲೇ ಇರುವುದು ಖಾತ್ರಿಯಾಗಿದೆ - ನಳಿನ್ ಕುಮಾರ್ ಕಟೀಲು, ಸಂಸದ
ನೀವು ಮುಖ್ಯಮಂತ್ರಿಯಾಗುತ್ತೀರೆಂದು ನಿಮ್ಮನ್ನು ನಂಬಿಸಿದ್ದ ಜ್ಯೋತಿಷಿ ತಾನೇ ಈ ಭವಿಷ್ಯ ನುಡಿದಿರುವುದು?


ಕಾಂಗ್ರೆಸ್ ನಾಯಕರಿಗೆ ರಾಷ್ಟ್ರಭಕ್ತರಿಗೂ, ಭಯೋತ್ಪಾದಕರಿಗೂ ವ್ಯತ್ಯಾಸ ತಿಳಿಯದ ಅಸ್ವಸ್ಥತೆ ಬಂದಿದೆ - ಸಿ.ಟಿ.ರವಿ, ಶಾಸಕ
ಭಯೋತ್ಪಾದಕರು ರಾಷ್ಟ್ರಭಕ್ತರಂತೆ ನಟಿಸತೊಡಗಿದಾಗ ಸ್ವಸ್ಥರಿಗೆ ಸ್ವಲ್ಪ ಗೊಂದಲ ವಾಗುವುದು ಸಹಜ.


ಮಾನಸಿಕ ಸ್ಥಿಮಿತ ಕಳೆದುಕೊಂಡವರಲ್ಲಿ ಅನೇಕರು ಬಿಜೆಪಿಯಲ್ಲಿದ್ದಾರೆ - ಎಸ್.ಉಗ್ರಪ್ಪ, ಮಾಜಿ ಸಂಸದ
ಸ್ಥಿಮಿತ ಉಳ್ಳವರು ಅಲ್ಲಿಗೇಕೆ ಹೋಗುತ್ತಾರೆ? ನಿಮಗೆ ಅಷ್ಟೂ ಅರ್ಥ ಆಗೊಲ್ವೇ?


ಪ್ರಧಾನಿ ಮೋದಿಯವರಿಗೆ ‘ಅಖಂಡ ಹಿಂದೂಸ್ತಾನ್’ ಬೇಕಿದ್ದರೆ ಪಾಕಿಸ್ತಾನದ ಸುಮಾರು 11 ಕೋಟಿ ಮುಸ್ಲಿಮರ ಬಗ್ಗೆ ಅವರ ಬಳಿ ಯಾವ ಯೋಜನೆ ಇದೆ ಎಂಬುದನ್ನು ತಿಳಿಸಬೇಕು - ಸಂಜಯ್ ರಾವುತ್, ಶಿವಸೇನೆ ಸಂಸದ

ಇನ್ನೊಂದು ಹತ್ಯಾಕಾಂಡದ ಯೋಜನೆ ಇದ್ದಿರಲೂಬಹುದು.


ಸಂಸತ್ ಅಧಿವೇಶನದಲ್ಲಿ ಪ್ರಶ್ನೆ ಕೇಳುವುದಕ್ಕೆ ಅವಕಾಶವೇ ಸಿಗಲಿಲ್ಲ
- ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ
ಮೌನ ಪಾಲಿಸುವುದಕ್ಕೆ ಏನು ಕೊಡುತ್ತೀರಿ? ಎಷ್ಟು ಕೊಡುತ್ತೀರಿ ಎಂಬ ಪ್ರಶ್ನೆಗಳನ್ನು ಕೇಳಲು ಬೇರೆಡೆ ಅವಕಾಶ ಸಿಕ್ಕಿರಬೇಕಲ್ಲಾ?


ಶ್ರೀ ನಾರಾಯಣ ಗುರುಗಳು ಶಿಕ್ಷಣದಲ್ಲಿ ಸ್ವಾತಂತ್ರ ಇರಬೇಕು ಎಂದು ಹೇಳಿದ್ದರೇ ಹೊರತು ಶಿಕ್ಷಣದಲ್ಲಿ ಮೀಸಲಾತಿ ಬೇಕು ಎಂದು ಕೇಳಿಲ್ಲ - ಸುನೀಲ್ ಕುಮಾರ್, ಸಚಿವ
ರಾಜಕೀಯದಲ್ಲಿ ಮೇಲ್ಜಾತಿವಾದ ಮತ್ತು ಕೋಮುವಾದ ಇರಬೇಕು ಎಂದೂ ಅವರು ಹೇಳಿರಲಿಲ್ಲವಲ್ಲ?


 ಧೈರ್ಯ, ನಿಸ್ವಾರ್ಥತೆ ಇರುವವನು ಮಾತ್ರ ಧರ್ಮ ರಕ್ಷಕನಾಗಲು ಸಾಧ್ಯ - ತೇಜಸ್ವಿ ಸೂರ್ಯ, ಸಂಸದ

ಆದ್ದರಿಂದ ಹೇಡಿಗಳಂತೆ ಬಡವರ ವಿರುದ್ಧ ಹಾರಾಡುವುದನ್ನು ನಿಲ್ಲಿಸಿ.


ಸಿ.ಟಿ.ರವಿಯವರು ಮೋದಿ, ಶಾ ಖುಷಿಪಡಿಸಲು ಕಾಂಗ್ರೆಸ್ ಮುಖಂಡರ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ - ಬಿ.ವಿ.ಶ್ರೀನಿವಾಸ್, ಯುವ ಕಾಂಗ್ರೆಸ್ ಅಧ್ಯಕ್ಷ

ಕೆಲವು ಅತೃಪ್ತ ಕಾಂಗ್ರೆಸಿಗರನ್ನೂ ಖುಷಿ ಪಡಿಸುವ ಉದ್ದೇಶ ಇದೆಯಂತೆ.


ಲಿಂಗಾಯತ ಪ್ರತ್ಯೇಕ ಹೋರಾಟದಿಂದ ಕಾಂಗ್ರೆಸ್‌ಗೆ ಹಿನ್ನಡೆಯಾಗಿಲ್ಲ - ಎಂ.ಬಿ.ಪಾಟೀಲ್, ಮಾಜಿ ಸಚಿವ
ಯಾವುದರಿಂದ ಹಿನ್ನಡೆ ಆಗಿಲ್ಲ ಎಂಬುದರ ಚಿಂತೆ ಬಿಟ್ಟು ಯಾವುದರಿಂದ ಹಿನ್ನಡೆ ಆಗಿದೆ ಎಂಬುದನ್ನು ಗುರುತಿಸಿ.


ಪುತ್ತೂರಿನ ಮಗಳಾದ ನಾನು ಮೋದಿ ಹೆಸರಿಗೆ ಕಪ್ಪುಚುಕ್ಕೆ ಬಾರದಂತೆ ಕೆಲಸ ಮಾಡಿ ತೋರಿಸುವೆ - ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ
ಕೆಲಸ ಯಾವುದಾದರೇನು? ಹೆಸರು ಬೆಳ್ಳಗಿರುವುದು ಮುಖ್ಯ.


ನನ್ನದು ಬೀದಿ ನಾಟಕವಲ್ಲ - ಆನಂದ್ ಸಿಂಗ್, ಸಚಿವ
ಬಯಲು ನಾಟಕ?


ಯುಪಿಎ ಸರಕಾರ ನೀಡಿದ ತೈಲಬಾಂಡ್‌ಗಳ ಅಸಲು - ಬಡ್ಡಿ ಪಾವತಿಯ ಹೊರೆ ತೈಲ ಬೆಲೆ ಇಳಿಕೆಗೆ ಅಡ್ಡಿಯಾಗಿದೆ - ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವೆ

ಇತ್ತೀಚೆಗೆ ಕೊಲ್ಲಿ ದೇಶಗಳಲ್ಲಿ ತಾಪಮಾನ ಹೆಚ್ಚಿದ್ದರಿಂದ ತೈಲ ಬೆಲೆಯನ್ನು ಅಷ್ಟೊಂದು ಹೆಚ್ಚಿಸಬೇಕಾಯಿತು ಎಂದು ಹೇಳಿ. ಜನ ನಂಬುತ್ತಾರೆ.


ಶಾಸಕ ಹಾಲಪ್ಪರಿಗೆ ಅಭಿವೃದ್ಧಿಗಿಂತ ಓಸಿ ಮಟ್ಕಾ, ಗಾಂಜಾ ಮತ್ತು ಮರಳು ದಂಧೆಯಲ್ಲಿ ಪರ್ಸಂಟೇಜ್ ಪಡೆಯಲು ಹೆಚ್ಚು ಆಸಕ್ತಿ - ಗೋಪಾಲಕೃಷ್ಣ ಬೇಳೂರು, ಮಾಜಿ ಶಾಸಕ

ನಿಮ್ಮ ಪಾಲಿನದ್ದನ್ನೂ ಕಸಿಯುತ್ತಿದ್ದಾರೆಯೇ?


ಅಫ್ಘಾನಿಸ್ತಾನದಲ್ಲಿ ಸಿಲುಕಿದ್ದವರನ್ನು ರಕ್ಷಿಸಿ ಭಾರತಕ್ಕೆ ಕರೆತರುವ ಕಾರ್ಯಾಚರಣೆಗೆ ‘ಆಪರೇಶನ್ ದೇವೀಶಕ್ತಿ’ ಎಂದು ಹೆಸರಿಡಲಾಗಿದೆ - ಎಸ್.ಜೈಶಂಕರ್, ಕೇಂದ್ರ ಸಚಿವ

ಭಾರತದಲ್ಲಿ ಸಂಘಪರಿವಾರದ ಕೈಯಲ್ಲಿ ಸಿಕ್ಕಿರುವ ಸಂವಿಧಾನದ ರಕ್ಷಣಾ ಕಾರ್ಯಾಚರಣೆಗೊಂದು ಹೆಸರು ಕೊಡಿ.


ಕೇಂದ್ರದಲ್ಲಿ ಯುಪಿಎ ಸರಕಾರ ಇದ್ದಿದ್ದರೆ ಅಫ್ಘಾನ್‌ನಿಂದ ತಾಲಿಬಾನಿಗಳನ್ನು ಕರೆತಂದು ಇಲ್ಲಿ ಅವರಿಗೆ ಒಂದು ರಾಜಧಾನಿ ನಿರ್ಮಿಸಿ ಕೊಡುತ್ತಿತ್ತು -ನಳಿನ್ ಕುಮಾರ್ ಕಟೀಲು, ಸಂಸದ
ಅವರ ಅಚಾತುರ್ಯದಿಂದಲ್ಲವೇ, ಇಲ್ಲಿ ರಾಜಧಾನಿಯ ಮೇಲೆ ಮಾತ್ರವಲ್ಲ ಒಟ್ಟು ದೇಶದ ಮೇಲೆ ತಾಲಿಬಾನಿಗಳು ನಿಯಂತ್ರಣ ಸಾಧಿಸಿರುವುದು.


ಮುಂದಿನ ಚುನಾವಣೆಯಲ್ಲಿ ಮೋದಿ ಪ್ರಧಾನಿಯಾಗದಿದ್ದರೆ ಈ ದೇಶದ ಪರಿಸ್ಥಿತಿಯನ್ನು ಕಲ್ಪಿಸಲೂ ಸಾಧ್ಯವಿಲ್ಲ - ಎಸ್.ಎಲ್.ಭೈರಪ್ಪ, ಸಾಹಿತಿ
   
ಕಲ್ಪಿಸುವ ಸಾಮರ್ಥ್ಯ ಕಳೆದು ಹೋಗಿದ್ದರೆ ಸೂಕ್ತ ವೈದ್ಯರ ಬಳಿ ಹೋಗಿ. ಚಿಕಿತ್ಸೆಗೆ ಪ್ರಯತ್ನಿಸುವುದರಲ್ಲಿ ತಪ್ಪಿಲ್ಲವಲ್ಲಾ!


ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ಇಷ್ಟು ಬೇಗ ವಶಪಡಿಸಿ ಕೊಳ್ಳುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ- ಜ.ಬಿಪಿನ್ ರಾವತ್, ಸಶಸ್ತ್ರ ಪಡೆಗಳ ಮುಖ್ಯಸ್ಥ
ಭಾರತದ ಬೀದಿಗಳಲ್ಲಿ ಮೆರೆಯುತ್ತಿರುವ ಹಿಂಸೆ ಕಂಡವರು ಇಲ್ಲಿನ ತಾಲಿಬಾನಿಗಳ ಕುರಿತು ಕೂಡಾ ಹೀಗೆಯೇ ಅಚ್ಚರಿ ಪಡುತ್ತಿದ್ದಾರೆ.


ಕಾಂಗ್ರೆಸ್‌ನವರು ನನ್ನನ್ನು ‘ರೇಪ್’ ಮಾಡಲು ಪ್ರಯತ್ನಿಸುತ್ತಿದ್ದಾರೆ - ಆರಗ ಜ್ಞಾನೇಂದ್ರ, ಸಚಿವ
ನೀವು ಸಂಜೆ ಹೊತ್ತು ನಿರ್ಜನ ಪ್ರದೇಶಗಳಲ್ಲಿ ತಿರುಗಾಡಬೇಡಿ.


ಕರ್ನಾಟಕದಲ್ಲಿ ಬಿಜೆಪಿ ಮುಖ್ಯಮಂತ್ರಿಯನ್ನು ಬದಲಿಸಿದರೂ ಪರಿಸ್ಥಿತಿ ಬದಲಾಗಿಲ್ಲ - ಮಲ್ಲಿಕಾರ್ಜುನ ಖರ್ಗೆ, ಸಂಸ

ವಿರೋಧ ಪಕ್ಷದ ಮುಖಂಡರನ್ನು ಬದಲಿಸಿದರೆ ಪರಿಸ್ಥಿತಿ ಬದಲಾಗಬಹುದೇ?


ರಾಜ್ಯದಲ್ಲಿ ವಾಸವಿರುವ ಒಬ್ಬ ವ್ಯಕ್ತಿಗೆ ತಿಂಗಳಿಗೆ 5 ಕೆಜಿ ಅಕ್ಕಿ ಸಾಕು- ಉಮೇಶ್ ಕತ್ತಿ, ಸಚಿವ
ಜೈಲಲ್ಲಿದ್ದವರಿಗೂ ಅದಕ್ಕಿಂತ ಹೆಚ್ಚು ಸಿಗುತ್ತೆ ಅಂತಾರಲ್ಲ? ಹಾಗೆ ಹೇಳಿದವರನ್ನು ಜೈಲಿಗೆ ಕಳಿಸಬೇಡಿ.


ಕಾರ್ಯಕರ್ತರ ಭವಿಷ್ಯಕ್ಕಾಗಿ ನಾನು ಬಿಜೆಪಿಗೆ ಸೇರಿದ್ದೇನೆ- ಎನ್.ಮಹೇಶ್, ಶಾಸಕ
ದೇಶದ ಭವಿಷ್ಯ ಮುಖ್ಯ ಎನಿಸಿದಾಗ ಬೇರಾವುದಾದರೂ ಕಡಿಮೆ ಭ್ರಷ್ಟ ಪಕ್ಷವನ್ನು ಸೇರಿಕೊಳ್ಳಿ.


ಜವಾಬ್ದಾರಿ ಬದಲಾದಾಗ ಅದೇ ರೀತಿ ಆ್ಯಕ್ಟ್ ಮಾಡಬೇಕು - ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ
ವಿದೂಷಕ ಪಾತ್ರದಲ್ಲೇ ಪಳಗಿದವರು ಜವಾಬ್ದಾರಿಯುತ ಹಾಗೂ ಸೀರಿಯಸ್ ಪಾತ್ರಗಳಿಗೆ ಒಗ್ಗಿಕೊಳ್ಳಲು ಭಾರೀ ಪ್ರಯಾಸ ಪಡಬೇಕಾಗುತ್ತದೆ. ಇನ್ನಾದರೂ ಪ್ರಾಕ್ಟೀಸ್ ಆರಂಭಿಸಿ.


ಪ್ಯಾರಾ ಅತ್ಲೀಟ್‌ಗಳು ನಿಜ ಜೀವನದ ಹೀರೋಗಳು -ಸಚಿನ್ ತೆಂಡೂಲ್ಕರ್, ಮಾಜಿ ಕ್ರಿಕೆಟಿಗ

ಕ್ರಿಕೆಟಿಗರೇ ಸದ್ಯಕ್ಕೆ ಅವರ ಪಾಲಿನ ವಿಲನ್ ಗಳು

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...