ರಾಮಕೃಷ್ಣ ಹೆಗಡೆ ಮೌಲ್ಯಾಧಾರಿತ ರಾಜಕಾರಣಿ: ರಮೇಶ್‍ಕುಮಾರ್
ಬೆಂಗಳೂರು, ಆ. 29: `ಮೌಲ್ಯಾಧಾರಿತ ರಾಜಕಾರಣಿಯಾಗಿದ್ದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಮೌಲ್ಯವನ್ನು ನಾವು ಇಂದಿಗೂ ಸ್ಮರಿಸುತ್ತೇವೆ' ಎಂದು ಮಾಜಿ ಸ್ಪೀಕರ್ ಕೆ.ಆರ್.ರಮೇಶ್‍ಕುಮಾರ್ ಹೇಳಿದ್ದಾರೆ.
ರವಿವಾರ ನಗರದ ಚಿತ್ರಕಲಾ ಪರಿಷತ್‍ನಲ್ಲಿ ರಾಷ್ಟ್ರೀಯ ನವ ನಿರ್ಮಾಣ ವೇದಿಕೆ ಮತ್ತು ಭಾರತ ಯಾತ್ರಾ ಕೇಂದ್ರ ಆಯೋಜಿಸಿದ್ದ ರಾಮಕೃಷ್ಣ ಹೆಗಡೆ ಅವರ 95ನೆ ಜನ್ಮ ದಿನಾಚರಣೆ ಹಾಗೂ ಡಾ.ಗೊ.ರು.ಚನ್ನಬಸಪ್ಪ ಅವರಿಗೆ ರಾಮಕೃಷ್ಣ ಹೆಗಡೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
`ಲೋಕನಾಯಕ್ ಜಯಪ್ರಕಾಶ್ ನಾರಾಯಣ್ ಅವರು ನಮಗೆ ಮಕ್ಕಳು ಜನಿಸಿದರೆ ರಾಜಕಾರಣಕ್ಕೆ ಬರುವ ಸಾಧ್ಯತೆಯಿದೆ ಎಂಬ ಕಾರಣಕ್ಕೆ ಮಕ್ಕಳೇ ಬೇಡ ಎಂದು ನಿರ್ಧಾರ ಮಾಡಿದ್ದರು. ಅವರ ಪತ್ನಿ ಕೂಡ ಆ ವಿಚಾರಕ್ಕೆ ಬದ್ಧರಾಗಿದ್ದರು. ಅವರ ದಾರಿಯಲ್ಲಿ ನಡೆದವರು ಹೆಗಡೆಯವರು. ರಾಮಕೃಷ್ಣ ಹೆಗಡೆ ಅವರಿಗೆ ಮಕ್ಕಳಿದ್ದರೂ ಯಾರನ್ನೂ ಅವರು ರಾಜಕೀಯದಲ್ಲಿ ಬೆಳೆಸಲಿಲ್ಲ. ಮೌಲ್ಯಾಧಾರಿತ ರಾಜಕಾರಣ ಮಾಡಿಕೊಂಡು ಬಂದವರು. ಹಾಗೆಯೇ ದೇವರಾಜು ಅರಸು ಅವರೂ ಮೌಲ್ಯಾಧಾರಿತ ರಾಜಕಾರಣವನ್ನು ಮಾಡಿದ್ದವರು' ಎಂದು ಸ್ಮರಿಸಿದರು.
`ರಾಜಕಾರಣಿಗಳಿಗೆ ಹೃದಯ ಇರಬೇಕು. ಅದು ಇಲ್ಲದೇ ಹೋದರೆ ನಿರರ್ಥಕ. ನಾಯಿ ಸತ್ತರೆ ನಾವು ಅಳುತ್ತೇವೆ. ಆದರೆ, ಚಾಮರಾಜನಗರ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದಾಗಿ ಜನ ಸತ್ತರೂ ಯಾರೂ ನೋಡಲಿಲ್ಲ. ಎರಡ್ಮೂರು ದಿನ ಮಾತ್ರ ಘಟನೆ ಬಗ್ಗೆ ಮಾತನಾಡಿದರು. ಬಳಿಕ ಅದನ್ನು ಮರೆತುಬಿಟ್ಟರು. ಇದು ರಾಜಕಾರಣಿಗಳ ಮೌಲ್ಯವನ್ನು ಪ್ರಶ್ನೆ ಮಾಡುತ್ತದೆ' ಎಂದು ರಮೇಶ್ ಕುಮಾರ್ ವಿಷಾಧ ವ್ಯಕ್ತಪಡಿಸಿದರು.
ಮಾಜಿ ಸಭಾಪತಿ ಬಿ.ಎಲ್.ಶಂಕರ್ ಮಾತನಾಡಿ, `ಜನತಾ ಪರಿವಾರದ ಎಲ್ಲ ನಾಯಕರು ಒಗ್ಗಟ್ಟಿನಿಂದ ಇದ್ದಿದ್ದರೆ ಎಚ್‍ಡಿಡಿ ಅವರು ಪ್ರಧಾನಿಯಾಗಿ ಮುಂದುವರೆಯುತ್ತಿದ್ದರು. ರಾಮಕೃಷ್ಣ ಹೆಗಡೆ ಅವರು ಪ್ರಧಾನಿಯಾಗುತ್ತಿದ್ದರು. ಉತ್ತರ ಭಾರತದವರು ದಕ್ಷಿಣದ ನಾಯಕರನ್ನು ಬೆಳೆಯಲು ಬಿಡಲಿಲ್ಲ. ಹೀಗಾಗಿ, ಕನ್ನಡಿಗರು ಪ್ರಧಾನಿ ಸ್ಥಾನದಿಂದ ವಂಚಿತರಾದರು' ಎಂದು ಇದೇ ವೇಳೆ ತಿಳಿಸಿದರು.
`ಜನತಾ ಪರಿವಾರದವರು ಒಳ್ಳೆಯ ವ್ಯಕ್ತಿತ್ವದವರು, ಉತ್ತಮ ಆಡಳಿತಗಾರರು ಆಗಿದ್ದರು. ತಮ್ಮ ಪಕ್ಷ ಬಿಟ್ಟು ಬೇರೆ ಪಕ್ಷಗಳ ಏಳ್ಗೆಗೆ ದುಡಿಯುತ್ತಾರೆ. ಬೇರೆ ಪಕ್ಷಗಳಲ್ಲಿ ಯಾವುದೇ ಸ್ಥಾನ ಬೇಕಾದರೂ ಪಡೆಯುತ್ತಾರೆ. ಆದರೆ, ಜನತಾ ಪರಿವಾರದಲ್ಲಿ ಸ್ವಪ್ರತಿಷ್ಠೆಗೆ ಒಳಪಡುತ್ತಾರೆ. ಕಮ್ಯುನಿಸ್ಟ್ ಬಿಟ್ಟು ಉಳಿದೆಲ್ಲಾ ಪಕ್ಷದಲ್ಲಿ ಜನತಾ ಪರಿವಾರದ ನಾಯಕರು ದೊಡ್ಡ ದೊಡ್ಡ ಸ್ಥಾನದಲ್ಲಿದ್ದಾರೆ. ಜನತಾ ಪರಿವಾರದ ನಾಯಕರು ಇದ್ದಿದ್ದರೆ ದೇಶಕ್ಕೆ ಈ ಪರಿಸ್ಥಿತಿ ಬರುತ್ತಿರಲಿಲ್ಲ' ಎಂದು ಪರೋಕ್ಷವಾಗಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ನವ ನಿರ್ಮಾಣ ವೇದಿಕೆಯ ಅಧ್ಯಕ್ಷ ಮಮತಾ ನಿಚ್ಚಾನಿ, ಡಾ.ಎಂ.ಪಿ.ನಾಡಗೌಡ, ನಿರ್ದೇಶಕ ಸೀತಾರಾಮ್, ಮಾಜಿ ಶಾಸಕ ಪಿ.ಎಸ್.ಪ್ರಕಾಶ್, ಚಿತ್ರಕಲಾ ಪರಿಷತ್ ಉಪಾಧ್ಯಕ್ಷ ಟಿ.ಪ್ರಭಾಕರ್ ಉಪಸ್ಥಿತರಿದ್ದರು.
ಮೃತರ ಕುಟುಂಬಕ್ಕೆ ಆಸರೆಯಾಗಬೇಕು
`ಚಾಮರಾಜನಗರ ಆಕ್ಸಿಜನ್ ಕೊರತೆಯಿಂದ ಮೃತಪಟ್ಟವರ ಕುಟುಂಬಕ್ಕೆ ಬರೀ ಪರಿಹಾರ ನೀಡಿದರೆ ಸಾಕಾಗುವುದಿಲ್ಲ. ಅವರು ಬದುಕಿಗೆ ಆಸರೆಯಾಗಿದ್ದವರನ್ನು ಕಳೆದುಕೊಂಡಿದ್ದಾರೆ. ಅವರಿಗೆ ನಾವು ಬೆಳಕಾಗಬೇಕು. ಯಾವುದೇ ಪಕ್ಷದವರು ಇದನ್ನು ಮಾಡುವುದಿಲ್ಲ. ಇದಕ್ಕೆ ಪಕ್ಷದ ಚೌಕಟ್ಟಿಲ್ಲ'
-ಕೆ.ಆರ್.ರಮೇಶ್ ಕುಮಾರ್, ಮಾಜಿ ಸ್ಪೀಕರ್