×
Ad

ಮಲೆನಾಡು ರೈತರ ಹೋರಾಟ ಸಮಿತಿ ನೇತೃತ್ವದಲ್ಲಿ ಭೂಮಿ ಹಕ್ಕಿಗಾಗಿ ಶರಾವತಿ ಸಂತ್ರಸ್ಥರ ಬಹೃತ ಪ್ರತಿಭಟನೆ

Update: 2021-08-30 18:13 IST

ಶಿವಮೊಗ್ಗ: ಮುಳುಗಡೆ ಸಂತ್ರಸ್ಥ ರೈತರ ಬದುಕನ್ನು ಬೀದಿಗೆ ತಳ್ಳಿದ ಈ ಸರ್ಕಾರ ರೈತ ವಿರೋಧಿ ಸರ್ಕಾರವಾಗಿದೆ ಎಂದು ಮಲೆನಾಡು ರೈತ ಹೋರಾಟ ಸಮಿತಿ ಸಂಚಾಲಕ  ತೀ.ನಾ. ಶ್ರೀನಿವಾಸ್ ಆಕ್ರೋಶ ವ್ಯಕ್ತಪಡಿಸಿದರು.

ತೀರ್ಥಹಳ್ಳಿ ಪಟ್ಟಣದಲ್ಲಿ ಮಲೆನಾಡು ರೈತರ ಹೋರಾಟ ಸಮಿತಿ ಆಯೋಜಿಸಿದ್ದ ಶರಾವತಿ ಸಂತ್ರಸ್ಥರ ಭೂಮಿ ಹಕ್ಕಿಗಾಗಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದರು.

ದೇಶದ ಗಡಿ ಕಾಯುವ ಸೈನಿಕನಂತೆ, ಅನ್ನದಾತನ ಬದುಕು ಮುಖ್ಯ. ಹಲವು ದಶಕಗಳಿಂದ ಭೂ ಹಕ್ಕಿಗಾಗಿ ಸಂತ್ರಸ್ಥರ ಕೂಗು ನಿರಂತರವಾಗಿದ್ದರೂ ಸರ್ಕಾರ ಮಾತ್ರ ಮೌನವಾಗಿದೆ. ಇದು ಖಂಡನೀಯ ಎಂದರು.

ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು 77,000 ರೈತರು ಅರಣ್ಯ ಹಕ್ಕು ಭೂಮಿ ಮಂಜೂರಾತಿ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಿ ಮಂಜೂರಾತಿಗಾಗಿ ಕಾಯುತ್ತಾ ಕುಳಿತಿದ್ದಾರೆ ಎಂದ ಅವರು, ಶರಾವತಿ ಮುಳುಗಡೆಯ ಬಗ್ಗೆ 1958ರಿಂದ 1964 ರವರೆಗೆ ಸುಮಾರು 64ರ ಸರ್ಕಾರಿ ಆದೇಶಗಳಾಗಿದ್ದರೂ  ತಹಶೀಲ್ದಾರ್ ಗಳು ಇಂತಹ ರೈತರಿಗೆ ಹಕ್ಕುಪತ್ರ ಮತ್ತು ಮಂಜೂರಾತಿ ನೀಡುತ್ತಿಲ್ಲ, ಕಾರಣ ಅರಣ್ಯಾಧಿಕಾರಿಗಳು ತಕರಾರನ್ನು ಹಾಕಿಕೊಂಡು ನ್ಯಾಯಾಲಯದಲ್ಲೂ ಸರಿಯಾಗಿ ವಾದ ಮಂಡನೆ ಮಾಡದೆ ತಪ್ಪು ಮಾಹಿತಿಯಿಂದ ರೈತರ ಹಿತಾಸಕ್ತಿ ವಿರುದ್ಧ ಆದೇಶಗಳು ಬಂದಿರುವುದು ದುರದೃಷ್ಟಕರ ಎಂದರು.

ಕಾಂಗ್ರೆಸ್ ಮುಖಂಡ ಡಾ.ಆರ್.ಎಂ.ಮಂಜುನಾಥ ಗೌಡ ಮಾತನಾಡಿ, ಶರಾವತಿ ವಿದ್ಯುತ್ ಯೋಜನೆಗಾಗಿ ತಮ್ಮ ಭೂಮಿ ಕಳೆದಕೊಂಡ ರೈತರನ್ನು ಈ ಸರ್ಕಾರ ಕಡೆಗಣಿಸಿದೆ. ಭೂ ಮಂಜೂರಾತಿಗಾಗಿ ಕಳೆದ ಐವತ್ತು ವರ್ಷಗಳಿಂದ ಶರಾವತಿ ಸಂತ್ರಸ್ಥರ ಸ್ಥಿತಿ ಶೋಚನೀಯವಾಗಿದೆ,ಸರ್ಕಾರ ಶೀಘ್ರದಲ್ಲಿ ಈ ಸಂತ್ರಸ್ಥರಿಗೆ ನ್ಯಾಯ ಕೊಡದಿದ್ದರೆ ಜಿಲ್ಲೆಯಾದ್ಯಂತ ಉಗ್ರ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದುಹೇಳಿದರು.

ಶರಾವತಿ ವಿದ್ಯುತ್ ಯೋಜನೆಗೆ ಸಾಗರ, ಹೊಸನಗರ ತಾಲ್ಲೂಕಿನಲ್ಲಿ ಸುಮಾರು 1 ಲಕ್ಷ ಎಕರೆ ಭೂಮಿಯು ಮುಳುಗಡೆಯಾಗಿ ಅಂದು ರೈತರು ತಮ್ಮ ಬದುಕನ್ನು ಕಳೆದುಕೊಂಡಿದ್ದರು. ನೂರಾರು ರೈತರನ್ನು ಸರ್ಕಾರವು ಪುನರ್ವಸತಿ ಯೋಜನೆಯಲ್ಲಿ ಜಮೀನು  ಕೊಡುವುದಾಗಿ ಆಶ್ವಾಸನೆ ನೀಡಿ ತೀರ್ಥಹಳ್ಳಿ ತಾಲ್ಲೂಕಿನ ಮಂಡಗದ್ದೆ ಹೋಬಳಿಯ ಅನೇಕ ಗ್ರಾಮಗಳಲ್ಲಿ ಹಣಗೆರೆ, ಸಂಕಲಾಪುರ ಗ್ರಾಮಗಳಲ್ಲಿ ತಂದು ಬಿಟ್ಟಿದ್ದರು .ಅದೇ ರೀತಿ ಅನೇಕ ರೈತರನ್ನು ಶಿವಮೊಗ್ಗ ತಾಲ್ಲೂಕು ಮತ್ತು ಶಿಕಾರಿಪುರ ತಾಲ್ಲೂಕುಗಳಲ್ಲಿ ಜಮೀನು  ಕೊಡುವ ಆಶ್ವಾಸನೆ ಮೇರೆಗೆ ರೈತರು ಸ್ಥಳಾಂತರ ಮಾಡಿದ್ದರು .ಅರುವತ್ತು ವರ್ಷಗಳು ಕಳೆದರೂ ಇಂದಿಗೂ ರೈತರಿಗೆ ಭೂಮಿಯ ಹಕ್ಕುಪತ್ರ, ಮಂಜೂರಾತಿ ನೀಡದೆ ಸಂತ್ರಸ್ಥರ ಬದುಕನ್ನು ಅತಂತ್ರ ಸ್ಥಿತಿಗೆ ತಳ್ಳಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮನೆ ಕಟ್ಟಿಕೊಂಡ ನಿವೇಶನಗಳಿಗೂ ಸಹ ಹಕ್ಕುಪತ್ರಗಳು ಇರುವುದಿಲ್ಲ. ಅಂತಹ ಜನರು ವಾಸಿಸುವ ಸ್ಥಳಗಳಿಗೆ ರಸ್ತೆ, ಕುಡಿಯುವ ನೀರು ,ಹಳ್ಳಗಳ ಸಂಪರ್ಕ ಸೇತುವೆಗಳು’ ಶಾಲೆಗಳು,ವಿದ್ಯುತ್ ಸಂಪರ್ಕ  ಇಲ್ಲದೆ ಇನ್ನಿಲ್ಲದ ತೊಂದರೆ ಗಳನ್ನು  60 ವರ್ಷಗಳಿಂದಲೂ ಅನುಭವಿಸುತ್ತಾ ಬಂದಿದ್ದಾರೆ .ಈ ಬಗ್ಗೆ ಸರಕಾರವು ಸುಮಾರು 9600ಎಕ್ರೆ ಭೂಮಿಯನ್ನು ಕಂದಾಯ ಇಲಾಖೆಗೆ ವರ್ಗಾಯಿಸಲು ನಿರ್ಧಾರವನ್ನು ಮಾಡಿದ್ದರೂ ಅರಣ್ಯ ಇಲಾಖೆ ನಿರಂತರ ಇನ್ನಿಲ್ಲದ ತಕರಾರು  ಹಾಕಿಕೊಂಡು ಕುಳಿತಿರುವುದು ಅಮಾನವೀಯ ವರ್ತನೆ ಎಂದರು.

ಈ ಪ್ರತಿಭಟನೆಯಲ್ಲಿ ಶಿವಮೊಗ್ಗದ ಕಾಂಗ್ರೆಸ್ ಮುಖಂಡ ಬಿ.ಎ.ರಮೇಶ್ ಹೆಗಡೆ, ಯಡೂರು ರಾಜಾರಾಮ ಹೆಗಡೆ, ಡಾ.ಸುಂದರೇಶ್ ಮಾತನಾಡಿದರು.  

ಹಣಗೆರೆ ಗ್ರಾಮ ಪಂಚಾಯಿತಿಯ ಸದಸ್ಯರಾದ ಸಂಕ್ಲಾಪುರದ ರೈತ ನಾಯಕ ಸುಧೀರ್ ,ದೇವಾನಾಯ್ಕ್ ಸಂಕ್ಲಾಪುರ ,ಗೋಪಾಲನಾಯ್ಕ್ ಸಂಕ್ಲಾಪುರ, ಗಂಗಾಧರ್, ರಘು ವಿಠಲ್ ಸಂಕಲಾಪುರ, ತೀರ್ಥಹಳ್ಳಿ ಪ.ಪಂ.ಸದಸ್ಯರು ಮುಂತಾದವರಿದ್ದರು.

ತಹಶೀಲ್ದಾರ್ ಡಾ.ಶ್ರೀಪಾದ್ ಮೂಲಕ ಪ್ರತಿಭಟನಾಕಾರರು ಸರ್ಕಾರಕ್ಕೆ ಮನವಿ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News