ಪ್ರತಿ ಬುಧವಾರ ವಿಶೇಷ ಲಸಿಕಾ ಉತ್ಸವ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್

Update: 2021-08-30 13:20 GMT

ಬೆಂಗಳೂರು, ಆ. 30: `ಇನ್ನು ಮುಂದೆ ಪ್ರತಿ ಬುಧವಾರ ವಿಶೇಷ ಲಸಿಕಾ ಉತ್ಸವ ನಡೆಸಿ ಸುಮಾರು 10 ಲಕ್ಷ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಇಂದಿಲ್ಲಿ ತಿಳಿಸಿದ್ದಾರೆ.

ಸೋಮವಾರ ವಿಧಾನಸೌಧದ ಮೂರನೆ ಮಹಡಿಯಲ್ಲಿನ ಸಮಿತಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, `ಆಗಸ್ಟ್ ತಿಂಗಳಲ್ಲೇ 1.10 ಕೋಟಿ ಲಸಿಕೆ ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಬಂದಿದೆ. ನಾನು ಮತ್ತು ಮುಖ್ಯಮಂತ್ರಿಗಳು ಕೇಂದ್ರ ಆರೋಗ್ಯ ಸಚಿವರೊಂದಿಗೆ ಚರ್ಚಿಸಿದ ಬಳಿಕ ಸಮರ್ಪಕವಾಗಿ ಲಸಿಕೆ ಪೂರೈಕೆಯಾಗುತ್ತಿದೆ. ಇನ್ನು ಮುಂದೆ ಪ್ರತಿದಿನ 5 ಲಕ್ಷ ಲಸಿಕೆ ನೀಡಲಾಗುವುದು' ಎಂದು ಹೇಳಿದರು.

`ವಾರದಲ್ಲಿ ಒಂದು ದಿನ ಪ್ರತಿ ಬುಧವಾರ ಲಸಿಕಾ ಉತ್ಸವ ನಡೆಸಿ ಈ ಪ್ರಮಾಣವನ್ನು 5 ದಿಂದ 10 ಲಕ್ಷಕ್ಕೆ ಹೆಚ್ಚಿಸಲಾಗುವುದು. ಇದರಿಂದ ಒಂದೂವರೆಯಿಂದ ಎರಡು ಕೋಟಿ ಲಸಿಕೆಯನ್ನು ಒಂದು ತಿಂಗಳಲ್ಲಿ ನೀಡಬಹುದು. ಇಡೀ ದೇಶದಲ್ಲಿ ಲಸಿಕೆ ಕಾರ್ಯ ಪೂರ್ಣಗೊಂಡ ನಗರ ಬೆಂಗಳೂರು ಆಗಬೇಕು ಎಂಬುದು ನಮ್ಮ ಗುರಿ' ಎಂದು ಡಾ.ಸುಧಾಕರ್ ತಿಳಿಸಿದರು.

`ಇಡೀ ರಾಜ್ಯದಲ್ಲಿ ಈಗಾಗಲೇ 4 ಕೋಟಿ ಲಸಿಕೆ ನೀಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 1 ಕೋಟಿ ಲಸಿಕೆ ನೀಡಲಾಗಿದೆ. ಬೀದರ್, ಯಾದಗಿರಿ, ರಾಯಚೂರು, ಕಲಬುರಗಿ ಜಿಲ್ಲೆಗಳಲ್ಲಿ ಹೆಚ್ಚು ಮಾಡಲು ಕ್ರಮ ಕೈಗೊಳ್ಳಲಾಗುವುದು. ಕೊಳೆಗೇರಿ ನಿವಾಸಿಗಳಿಗೆ ಪ್ರತಿದಿನ ವಿಶೇಷ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಅವರು ವಾಸ ಮಾಡುವ ಸ್ಥಳದಲ್ಲೇ ಸಿಬ್ಬಂದಿ ನಿಯೋಜಿಸಿ ಅಲ್ಲೇ ಲಸಿಕೆ ನೀಡಲಾಗುವುದು' ಎಂದರು.

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮೊದಲಾದ ಗಡಿಭಾಗದ ಜಿಲ್ಲೆಗಳಲ್ಲಿ ಆದ್ಯತೆ ನೀಡಲಾಗಿದೆ. ಗಡಿಯಿಂದ 20 ಕಿ.ಮೀ. ವ್ಯಾಪ್ತಿಯ ಗ್ರಾಮಗಳಲ್ಲಿ ಪ್ರಾಶಸ್ತ್ಯದಲ್ಲಿ ಲಸಿಕೆ ನೀಡಲಾಗುವುದು. ಡಿಸೆಂಬರ್ ಅಂತ್ಯಕ್ಕೆ ಎರಡು ಡೋಸ್ ಲಸಿಕೆ ನೀಡುವ ಗುರಿ ಇದೆ ಎಂದ ಅವರು, ಕೋವಿಡ್ ಸೋಂಕಿನಿಂದ ರಕ್ಷಣೆಗೆ ಏಕೈಕ ಮಾರ್ಗ ಲಸಿಕೆ ಪಡೆಯುವುದು. ಹೀಗಾಗಿ ಎಲ್ಲರೂ ತಪ್ಪದೆ ಲಸಿಕೆ ಪಡೆದುಕೊಳ್ಳಬೇಕು ಎಂದರು.

`ರಾಜ್ಯದಲ್ಲಿ ಶಾಲಾ, ಕಾಲೇಜುಗಳನ್ನು ಆರಂಭಿಸಲಾಗಿದೆ. ಪ್ರಾಥಮಿಕ ಶಾಲೆ ಆರಂಭಿಸಲು ಚರ್ಚೆಯಾಗಿದೆ. ಈ ಬಗ್ಗೆ ಸರಕಾರ ಅಂತಿಮ ತೀರ್ಮಾನ ಕೈಗೊಳ್ಳಲಿದೆ. ಮಕ್ಕಳ ಶೈಕ್ಷಣಿಕ ಭವಿಷ್ಯ ರೂಪಿಸುವುದು ಸರಕಾರ ಕರ್ತವ್ಯ. ಪೋಷಕರ ಕಡೆಯಿಂದಲೂ ಶಾಲೆ ಆರಂಭಕ್ಕೆ ಒತ್ತಡ ಬರುತ್ತಿದೆ. ಶಿಕ್ಷಣ ಸಂಸ್ಥೆಗಳು ಆರಂಭವಾದ ಬಳಿಕ ದುಷ್ಪರಿಣಾಮ ಉಂಟಾಗಿಲ್ಲ. ಆದುದರಿಂದ ವಿಶ್ವಾಸ ಬಂದಿದೆ ಎಂದು ಸುಧಾಕರ್ ತಿಳಿಸಿದರು.

`ಎಲ್ಲ ಹಬ್ಬಗಳ ಆಚರಣೆಗೆ ಒಂದೇ ಕೋವಿಡ್ ಮಾರ್ಗಸೂಚಿ ನೀಡಲಾಗಿದೆ. ಸರಕಾರಕ್ಕೆ ಯಾವುದೇ ಚಟುವಟಿಕೆ ನಿಬರ್ಂಧಿಸುವುದರಲ್ಲಿ ಸಂತೋಷವಿಲ್ಲ. ಆದರೆ, ಪರಿಸ್ಥಿತಿಗೆ ಅನುಗುಣವಾಗಿ ಕ್ರಮ ಕೈಗೊಳ್ಳಬೇಕಾಗುತ್ತದೆ. ಎಲ್ಲರ ಹಿತ ಕಾಯುವುದು ಸರಕಾರ ಕೆಲಸ. ಕೋವಿಡ್ ಮಾರ್ಗಸೂಚಿಗೆ ನಮ್ಮನ್ನೂ ಒಳಗೊಂಡಂತೆ ಎಲ್ಲರೂ ಬೆಲೆ ಕೊಡಬೇಕು. ಚುನಾವಣಾ ಆಯೋಗಕ್ಕೆ ಪತ್ರ ಬರೆದು, ಚುನಾವಣೆ ಮುಂದೂಡಬೇಕು ಎಂದು ಕೋರಲಾಗಿತ್ತು. ಈ ಎಲ್ಲ ಸಂದಿಗ್ಧ ಪರಿಸ್ಥಿತಿ ಹೊರತಾಗಿಯೂ ಕೋವಿಡ್ ನಿಯಂತ್ರಿಸುತ್ತೇವೆ' ಎಂದು ಸುಧಾಕರ್ ಸ್ಪಷ್ಟಪಡಿಸಿದರು.

ನಂಬರ್ ಸಮಸ್ಯೆ: `ಕೋವಿಡ್ ಲಸಿಕೆ ಮೊದಲ ಡೋಸ್ ಪಡೆದಾಗ ನೀಡಿದ ಮೊಬೈಲ್ ಫೋನ್ ಸಂಖ್ಯೆಯನ್ನೇ ಎರಡನೇ ಡೋಸ್ ಪಡೆದಾಗಲೂ ನೀಡಬೇಕು. ಇಲ್ಲದಿದ್ದರೆ ಲಸಿಕೆ ಪಡೆದವರ ಪ್ರಮಾಣದ ಬಗ್ಗೆ ಸರಿಯಾದ ಮಾಹಿತಿ ಲಭ್ಯವಾಗುವುದಿಲ್ಲ. ಕೋವಿಡ್ ಮೂರನೇ ಅಲೆ ತಡೆಯಲು ಸುರಕ್ಷತಾ ಕ್ರಮ ಪಾಲಿಸಬೇಕು' ಎಂದು ಸಚಿವ ಡಾ.ಕೆ.ಸುಧಾಕರ್ ಇದೇ ಸಂದರ್ಭದಲ್ಲಿ ಕೋರಿದರು.

`ಫಾನಾ ಸಂಘಟನೆ ಮೂರನೇ ಅಲೆ ವಿರುದ್ಧ ಹೋರಾಡುವ ಕುರಿತು ವರದಿ ನೀಡಿದೆ. ಇದರ ಸಲಹೆಯನ್ನೂ ಪರಿಶೀಲಿಸಿ ನೋಡಲಾಗುವುದು. ಇದರ ಬಗ್ಗೆ ತಾಂತ್ರಿಕ ಸಲಹಾ ಸಮಿತಿಯ ಜೊತೆಗೂ ಚರ್ಚಿಸಲಾಗುವುದು. ಈವರೆಗೆ ಜಾರಿಯಲ್ಲಿ ಇಲ್ಲದ ಶಿಫಾರಸುಗಳನ್ನೂ ಜಾರಿ ಮಾಡಲಾಗುವುದು. ಮೂರನೇ ಅಲೆ ತಡೆಗಟ್ಟಲು ಸರಕಾರ ಸಿದ್ಧವಾಗಿದೆ ಎಂದು ಸುಧಾಕರ್ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News