×
Ad

ಚಿಕ್ಕಮಗಳೂರು: ರೈತರ ವಿರೋಧದ ನಡುವೆ ವಸತಿ ಯೋಜನೆ ಜಾರಿಗೆ ಹುನ್ನಾರ; ಆರೋಪ

Update: 2021-08-30 19:46 IST

ಚಿಕ್ಕಮಗಳೂರು, ಆ.30: ನಗರಾಭಿವೃದ್ದಿ ಪ್ರಾಧಿಕಾರವು ವಿವಿಧ ಗ್ರಾಮಗಳಲ್ಲಿ ರೈತರ ಕೃಷಿ ಜಮೀನುಗಳನ್ನು ವಶಕ್ಕೆ ಪಡೆದು ಹೈಟೆಕ್ ವಸತಿ ಬಡಾವಣೆ ನಿರ್ಮಾಣಕ್ಕೆ ಮುಂದಾಗಿದ್ದು, ಇದಕ್ಕೆ ರೈತರ ವಿರೋಧವಿದ್ದರೂ ಜಿಲ್ಲಾಡಳಿತ ನೋಟಿಸ್ ನೀಡುವ ಮೂಲಕ ಒತ್ತಾಯ ಪೂರ್ವಕವಾಗಿ ಜಮೀನು ಕಿತ್ತುಕೊಳ್ಳಲು ಹುನ್ನಾರ ಮಾಡಿದೆ ಎಂದು ಆರೋಪಿಸಿ ರೈತಸಂಘ ಹಾಗೂ ವಿವಿಧ ಪಕ್ಷಗಳ ನೇತೃತ್ವದಲ್ಲಿ ರೈತರು ನಗರದಲ್ಲಿ ಧರಣಿ ನಡೆಸಿದರು.

ನಗರದ ಆಜಾದ್ ಪಾರ್ಕ್‍ನಲ್ಲಿ ಸಮಾವೇಶಗೊಂಡ ನೂರಾರು ರೈತರು ನಗರಾಭಿವೃದ್ಧಿ ಪ್ರಾಧಿಕಾರ, ನಗರಸಭೆ, ಜಿಲ್ಲಾಡಳಿತ ಹಾಗೂ ಶಾಸಕ ಸಿ.ಟಿ.ರವಿ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.

ಈ ವೇಳೆ ಮಾತನಾಡಿದ ಕಾಂಗ್ರೆಸ್, ಜೆಡಿಎಸ್, ಸಿಪಿಐ, ಬಿಎಸ್ಪಿ ಹಾಗೂ ರೈತ ಸಂಘದ ಮುಖಂಡರು, ಚಿಕ್ಕಮಗಳೂರು ನಗರಸಭೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಕ್ಷೇತ್ರದ ಶಾಸಕ ಸಿ.ಟಿ.ರವಿ ಅಣತಿಯಂತೆ ಜನವಿರೋಧಿ ಯೋಜನೆಗಳನ್ನು ಜಾರಿ ಮಾಡಲು ಮುಂದಾಗಿದ್ದಾರೆ. ರೈತರು ಹಾಗೂ ಸಾರ್ವಜನಿಕರಿಗೆ ಬೇಡವಾದ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಮುಂದಾಗಿದ್ದಾರೆ. ಚಿಕ್ಕಮಗಳೂರು ನಗರ ಸಮೀಪದ ಹಿರೇಮಗಳೂರು, ಲಕ್ಷ್ಮೀಪುರ, ಕನ್ನೇನಹಳ್ಳಿ, ಬಂಡಿಹಳ್ಳಿ, ದೊಡ್ಡಕುರುಬರಹಳ್ಳಿ, ಕುಪ್ಪೇನಹಳ್ಳಿ, ಮಲ್ಲೇನಹಳ್ಳಿ ವ್ಯಾಪ್ತಿಯಲ್ಲಿ ಸಿಡಿಎ ವತಿಯಿಂದ ವಸತಿ ಬಡಾವಣೆ ನಿರ್ಮಾಣಕ್ಕಾಗಿ ರೈತರ ಜಮೀನುಗಳನ್ನು ವಶಕ್ಕೆ ಪಡೆಯಲು ನೋಟಿಸ್ ನೀಡಲಾಗುತ್ತಿದೆ. ಆದರೆ ರೈತರು ತಮ್ಮ ಕೃಷಿ ಭೂಮಿಯನ್ನು ಬಡಾವಣೆ ನಿರ್ಮಾಣ ಯೋಜನೆಗೆ ನೀಡದಿರಲು ತೀರ್ಮಾನಿಸಿದ್ದಾರೆ. ಈ ಸಂಬಂಧ ಆ.4ರಂದು ಸಿಡಿಎ, ನಗರಸಭೆ ಹಾಗೂ ಜಿಲ್ಲಾಧಿಕಾರಿಗೂ ಲಿಖಿತ ಮನವಿ ನೀಡಿದ್ದಾರೆ ಎಂದರು.

ಈ ಗ್ರಾಮಗಳ ವ್ಯಾಪ್ತಿಯಲ್ಲಿ ಸಣ್ಣ ಹಿಡುವಳಿಗಳನ್ನು ಹೊಂದಿರುವ ರೈತರು ಹೆಚ್ಚಾಗಿದ್ದು, ಜಮೀನು ಮಾರಿಕೊಂಡರೇ ಜೀವನ ನಿರ್ವಹಣೆ ಕಷ್ಟ ಎಂಬುದನ್ನು ಮನಗಂಡು ರೈತರು ಜಮೀನು ಮಾರಾಟ ಮಾಡಲು ಸಾಮೂಹಿಕವಾಗಿ ನಿರ್ಣಯಕೈಗೊಂಡಿದ್ದಾರೆ. ಆದರೆ ಜಿಲ್ಲಾಡಳಿತ, ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ನಗರಸಭೆ ಅಧಿಕಾರಿಗಳು ಹಠಕ್ಕೆ ಬಿದ್ದು ಜಮೀನು ವಶಪಡಿಸಿಕೊಳ್ಳಲು ಹುನ್ನಾರ ಮಾಡಿದ್ದಾರೆ. ಇದಕ್ಕಾಗಿ ಜಿಲ್ಲಾಧಿಕಾರಿ ಮೂಲಕ ಪದೇ ಪದೇ ನೋಟಿಸ್ ನೀಡಲಾಗುತ್ತಿದೆ. ರೈತರ ವಿರೋಧದ ನಡುವೆಯೂ ಜಮೀನು ವಶಕ್ಕೆ ಮುಂದಾದಲ್ಲಿ ಉಗ್ರ ಹೋರಾಟಕ್ಕಿಳಿಯುವುದಾಗಿ ಎಚ್ಚರಿಸಿದ ಮುಖಂಡರು, ವಸತಿ ಯೋಜನೆಗಳ ಹೆಸರಿನಲ್ಲಿ ಶಾಸಕ ಸಿ.ಟಿ.ರವಿ ಹಾಗೂ ಅವರ ಹಿಂಬಾಲಕರು ದಡ್ಡು ಮಾಡುವ ದಂಧೆಗೆ ಇಳಿದಿದ್ದಾರೆ. ರೈತರಿಗೆ ನೀರಾವರಿ ಸೌಲಭ್ಯಗಳನ್ನು ಕೊಡಿಸಿ ಎಂದರೆ ರೈತರ ಕೃಷಿ ಜಮೀನನ್ನೇ ಕಿತ್ತುಕೊಳ್ಳಲು ಸಂಚು ಮಾಡಿದ್ದಾರೆ ಎಂದು ಆರೋಪಿಸಿದರು.

ಚಿಕ್ಕಮಗಳೂರು ತಾಲೂಕಿನ ಬಯಲು ಭಾಗದಲ್ಲಿ ನೀರಾವರಿ ಸೌಲಭ್ಯ ಇಲ್ಲ. ನೀರಾವರಿ ಯೋಜನೆಗಳಾದ ಕರಗಡ, ಮಳಲೂರು ನೀರಾವರಿ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ರೈತರು ಕೃಷಿ ಮಾಡಲು ಸಾಧ್ಯವಾಗುತ್ತಿಲ್ಲ. ಮಳೆ ನೀರು, ಕೆರೆ ನೀರು ಬಳಸಿಕೊಂಡು ಸಣ್ಣ ರೈತರು ಅಲ್ಪಸ್ವಲ್ಪ ಬೆಳೆ ಬೆಳೆದು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಆದರೆ ಜನಪ್ರತಿನಿಧಿಗಳು ರೈತರ ಜಮೀನು ಕಿತ್ತುಕೊಂಡು ಬೀದಿಪಾಲು ಮಾಡಲು ಯೋಜನೆ ರೂಪಿಸುತ್ತಿರುವುದು ಜನವಿರೋಧಿ ನಿಲುವಾಗಿದೆ. ಯಾವುದೇ ಕಾರಣಕ್ಕೂ ವಸತಿ ಯೋಜನೆಗೆ ಜಮೀನು ನೀಡಲ್ಲ. ಜಿಲ್ಲಾಡಳಿತ ರೈತರ ಮನವಿಗೆ ಸ್ಪಂದಿಸಬೇಕು. ರಾಜಕಾರಣಿಗಳ ಒತ್ತಡಕ್ಕೆ ಮಣಿದು ಜಮೀನು ವಶಕ್ಕೆ ಮುಂದಾದಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದರು ಇದೇ ವೇಳೆ ಎಚ್ಚರಿಸಿದರು.

ಧರಣಿ ವೇಳೆ ವಿಪ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಅಂಶುಮಂತ್, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್, ಸಿಪಿಐ ಜಿಲ್ಲಾ ಕಾರ್ಯದರ್ಶಿ ರೇಣುಕಾರಾಧ್ಯ, ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಕೃಷ್ಣ, ರೈತ ಸಂಘದ ಕೆ.ಕೆ.ಕೃಷ್ಣೇಗೌಡ, ಮಹಿಳಾ ಘಟಕದ ವನಶ್ರೀ ಮತ್ತಿತರರು ಮಾತನಾಡಿದರು. ರೈತ ಸಂಘ ಹಾಗೂ ವಿವಿಧ ಪಕ್ಷಗಳ ಮುಖಂಡರಾದ ಹಿರೇಮಗಳೂರು ಪುಟ್ಟಸ್ವಾಮಿ, ಗುರುಶಾಂತಪ್ಪ, ರವೀಶ್ ಕ್ಯಾತನಬೀಡು, ಮರ್ಲೆ ಅಣ್ಣಯ್ಯ, ಬಿ.ಅಮ್ಜದ್, ಹರೀಶ್ ಮಿತ್ರ, ರಸೂಲ್‍ಖಾನ್ ಸೇರಿದಂತೆ ನೂರಾರು ರೈತರು ಧರಣಿಯಲ್ಲಿ ಭಾಗವಹಿಸಿದ್ದರು. ಧರಣಿ ಬಳಿಕ ಜಿಲ್ಲಾಡಳಿತಕ್ಕೆ ಈ ಸಂಬಂಧ ಮನವಿ ಪತ್ರ ಸಲ್ಲಿಸಲಾಯಿತು.

ಜನಪ್ರತಿನಿಧಿಗಳು ಹಾಗೂ ಸಿಡಿಎ ಅಧಿಕಾರಿಗಳು, ಸದಸ್ಯರಿಗೆ ನಗರದಲ್ಲಿ ಹೊಸ ವಸತಿ ಬಡಾವಣೆಗಳನ್ನು ನಿರ್ಮಿಸಲೇ ಬೇಕಿದ್ದರೇ ಸಿ.ಟಿ.ರವಿ ಸಂಬಂಧಿಗಳು, ಹಿಂಬಾಲಕರ ವಶದಲ್ಲಿರುವ ಸರಕಾರಿ ಜಮೀನು, ಕೃಷಿ ಜಮೀನುಗಳನ್ನು ಖುಲ್ಲಾ ಮಾಡಿಸಿ ಅಲ್ಲಿ ಯೋಜನೆಯನ್ನು ಕಾರ್ಯಗತ ಮಾಡಲಿ. ಸಣ್ಣ ರೈತರ ಬದುಕಿಗೆ ಆಸರೆಯಾಗಿರುವ ಕೃಷಿ ಜಮೀನುಗಳನ್ನು ವಶಕ್ಕೆ ಪಡೆಯುವುದು ರೈತ ವಿರೋಧಿ ನಿಲುವಾಗಿದೆ. ರೈತರ ಜಮೀನು ವಶಕ್ಕೆ ಮುಂದಾದಲ್ಲಿ ಉಗ್ರ ಹೋರಾಟ ಅನಿವಾರ್ಯ.
- ಎಚ್.ಎಚ್.ದೇವರಾಜ್, ಜೆಡಿಎಸ್ ರಾಜ್ಯ ಉಪಾಧ್ಯಕ್ಷ


ಬಿಜೆಪಿ ಸರಕಾರಗಳು ರಾಜ್ಯ ಹಾಗೂ ಕೇಂದ್ರದಲ್ಲಿ ಜನವಿರೋಧಿ ಯೋಜನೆಗಳ ಮೂಲಕವೇ ಕುಖ್ಯಾತಿ ಪಡೆಯುತ್ತಿದೆ. ರೈತ ಪರ ಯೋಜನೆಗಳನ್ನು ಜಾರಿ ಮಾಡುವ ಬದಲು ಕೃಷಿಯನ್ನೇ ನಾಶ ಮಾಡುವ ಯೋಜನೆಗಳನ್ನು ಜಾರಿ ಮಾಡಲಾಗುತ್ತಿದೆ. ಕೃಷಿ ತಿದ್ದುಪಡಿ ಮಸೂದೆ, ಭೂ ಸುಧಾರಣೆ ಮಸೂದೆ ತಿದ್ದುಪಡಿ ಮೂಲಕ ರೈತರ ಜಮೀನುಗಳನ್ನು ಬಂಡವಾಳಶಾಹಿಗಳಿಗೆ ಒಪ್ಪಿಸಲು ಹುನ್ನಾರ ಮಾಡಲಾಗಿದೆ. ಇಂತಹ ಯೋಜನೆಗಳಿಂದಾಗಿ ರೈತರು ಹಾಗೂ ಕೃಷಿ ಕ್ಷೇತ್ರ ಶೀಘ್ರ ನಾಶವಾಗಲಿದೆ.
- ಡಾ.ಅಂಶುಮಂತ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News