ದಕ್ಷಿಣ ಕನ್ನಡ ಸಹಿತ 4 ಜಿಲ್ಲೆಗಳಲ್ಲಿ ವಾರಾಂತ್ಯದ ಕರ್ಫ್ಯೂ ಮುಂದುವರಿಕೆ: ಸಚಿವ ಆರ್.ಅಶೋಕ್
ಬೆಂಗಳೂರು, ಆ. 30: ಕೋವಿಡ್ ಪಾಸಿಟಿವಿಟಿ ದರ ಹೆಚ್ಚಿರುವ ಕೊಡಗು, ಹಾಸನ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮಾತ್ರ 'ವಾರಾಂತ್ಯದ ಕರ್ಫ್ಯೂ' ಮುಂದುವರಿಯಲಿದೆ. ಉಳಿದಂತೆ ಮೈಸೂರು, ಶಿವಮೊಗ್ಗ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೇಕಡ 2ಕ್ಕಿಂತ ಕಡಿಮೆ ಇರುವ ಹಿನ್ನೆಲೆಯಲ್ಲಿ ಈ ಜಿಲ್ಲೆಗಳಲ್ಲಿ ಈ ಹಿಂದೆ ವಿಧಿಸಿದ ನಿರ್ಬಂಧಗಳನ್ನು ಸಡಿಲಿಕೆ ಮಾಡಲು ನಿರ್ಧರಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಸೋಮವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಹಿರಿಯ ಸಚಿವರು ಹಾಗೂ ತಜ್ಞರ ಉನ್ನತ ಮಟ್ಟದ ಸಭೆಯ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಚಿವ ಆರ್.ಅಶೋಕ್, `ಕೋವಿಡ್ ಪಾಸಿಟಿವಿಟಿ ದರ ಶೇಕಡ 2ಕ್ಕಿಂತ ಕಡಿಮೆ ಇರುವ ರಾಜ್ಯದ ಎಲ್ಲ ತಾಲೂಕುಗಳಲ್ಲಿಯೂ ಆರನೆ ತರಗತಿಯಿಂದ ಎಂಟನೆ ತರಗತಿಯ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್ 6ರಿಂದ ಭೌತಿಕ ತರಗತಿಗಳನ್ನು ಆರಂಭಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ತೀರ್ಮಾನಿಸಲಾಗಿದೆ' ಎಂದು ತಿಳಿಸಿದರು.
`ಒಟ್ಟಾರೆ ತರಗತಿ ವಿದ್ಯಾರ್ಥಿಗಳ ಪೈಕಿ ಶೇ.50ರಷ್ಟು ವಿದ್ಯಾರ್ಥಿಗಳಿಗೆ (ಬ್ಯಾಚ್ ರೂಪದಲ್ಲಿ) ದಿನ ಬಿಟ್ಟು ದಿನ ತರಗತಿಗಳನ್ನು ನಡೆಸಲಾಗುವುದು. ವಾರದ ಐದು ದಿನ, ಸೋಮವಾರದಿಂದ ಶುಕ್ರವಾರದ ವರೆಗೆ ಮಾತ್ರ ತರಗತಿಗಳು ನಡೆಸಲಿದ್ದು, ಶನಿವಾರ ಮತ್ತು ರವಿವಾರ ಶಾಲಾ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಲಾಗುವುದು' ಎಂದು ಮಾಹಿತಿ ನೀಡಿದರು.
ಸೆ.5ಕ್ಕೆ ತೀರ್ಮಾನ: `ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ ನೀಡುವ ಸಂಬಂಧ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳ ಮುಖಂಡರಿಂದ ಒತ್ತಡವಿದೆ. ಈ ಸಂಬಂಧ ಸಮಾಲೋಚನೆ ನಡೆಸಿದ್ದು, ಸೆಪ್ಟೆಂಬರ್ 5ರಂದು ಸಿಎಂ ಅಧ್ಯಕ್ಷತೆಯಲ್ಲಿ ತಜ್ಞರ ಉನ್ನತ ಮಟ್ಟದ ಸಭೆ ನಡೆಸಿ ಅಂತಿಮ ತೀರ್ಮಾನ ಪ್ರಕಟಿಸಲಾಗುವುದು' ಎಂದು ಸಚಿವ ಆರ್.ಅಶೋಕ್ ಸ್ಪಷ್ಟಣೆ ನೀಡಿದರು.
`ನೆರೆಯ ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಹೆಚ್ಚಿದೆ. ಆದರೆ, ರಾಜ್ಯದಲ್ಲಿ ಕೋವಿಡ್ ಸೋಂಕು ನಿಯಂತ್ರಣದಲ್ಲಿದೆ. ಕೇರಳ ರಾಜ್ಯದಲ್ಲಿ ಓಣಂ ಹಬ್ಬಕ್ಕೆ ಅವಕಾಶ ನೀಡಿದ ಕಾರಣ ಕೋವಿಡ್ ದೃಢ ಪ್ರಮಾಣ ಶೇ.19ಕ್ಕೆ ಏರಿಕೆಯಾಗಿದೆ. ಆದುದರಿಂದ ಬೃಹತ್ ಪ್ರಮಾಣದ ಸಾರ್ವಜನಿಕ ಗಣೇಶೋತ್ಸವ ಆಚರಿಸುವ ಸಂಘ-ಸಂಸ್ಥೆಗಳ ಪ್ರತಿನಿಧಿಗಳ ಜತೆ ಚರ್ಚಿಸಿ, ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಂದ ವರದಿ ಪಡೆದ ಬಳಿಕ ಸೆ.5ರ ಕೋವಿಡ್ ಪಾಸಿಟಿವಿಟಿ ದರವನ್ನು ಆಧರಿಸಿ ಗಣೇಶೋತ್ಸವಕ್ಕೆ ಅವಕಾಶ ನೀಡುವ ಸಂಬಂಧ ತೀರ್ಮಾನಿಸಲಾಗುವುದು ಎಂದು ಅಶೋಕ್ ಸ್ಪಷ್ಟಪಡಿಸಿದರು.
ಕಲ್ಯಾಣ ಮಂಟಪ ತೆರೆಯಲು ಷರತ್ತುಬದ್ಧ ಅನುಮತಿ: ರಾಜ್ಯದಲ್ಲಿ ಕಲ್ಯಾಣ ಮಂಟಪಗಳ ಮಾಲಕರ ಒತ್ತಾಯದ ಹಿನ್ನೆಲೆಯಲ್ಲಿ ಕಲ್ಯಾಣ ಮಂಟಪಗಳಲ್ಲಿ ಮದುವೆ ಸಮಾರಂಭಗಳನ್ನು ನಡೆಸಲು ಶೇ.50ರ ಮಿತಿಯಲ್ಲಿ, ಗರಿಷ್ಠ 400 ಜನರ ಮಿತಿಗೆ ಒಳಪಟ್ಟು ಅನುಮತಿ ನೀಡಲಾಗಿದೆ. ಆದರೆ, ಮದುವೆ ಸಮಾರಂಭಗಳಲ್ಲಿ ಕಡ್ಡಾಯವಾಗಿ ಕೋವಿಡ್ ಮಾರ್ಗಸೂಚಿ ಪಾಲಿಸಲು ಸೂಚನೆ ನೀಡಲಾಗಿದೆ ಎಂದು ಸಚಿವ ಅಶೋಕ್ ಹೇಳಿದರು.
1ರಿಂದ 5ನೇ ತರಗತಿ ವರೆಗೆ ಭೌತಿಕ ತರಗತಿಗಳನ್ನು ಆರಂಭಿಸುವ ಬಗ್ಗೆ ಸದ್ಯಕ್ಕೆ ಯಾವುದೇ ತೀರ್ಮಾನ ಮಾಡಿಲ್ಲ ಎಂದ ಸಚಿವ ಅಶೋಕ್, ರಾಜ್ಯದಲ್ಲಿ 3ನೇ ಅಲೆಯ ಮುನ್ಸೂಚನೆ ಇಲ್ಲ, ಕೇಂದ್ರ ಸರಕಾರವೂ ಈ ಬಗ್ಗೆ ಮಾಹಿತಿ ನೀಡಿಲ್ಲ ಎಂದರು.
ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಚಿವರಾದ ಡಾ.ಕೆ.ಸುಧಾಕರ್, ಎಸ್.ಟಿ.ಸೋಮಶೇಖರ್, ಬಿ.ಸಿ.ನಾಗೇಶ್, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ತಜ್ಞ ವೈದ್ಯರಾದ ಡಾ.ಸುದರ್ಶನ್, ಡಾ.ಮಂಜುನಾಥ್, ಡಾ.ದೇವಿಶೆಟ್ಟಿ, ಸಿಎಂ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಸೇರಿದಂತೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
`ಕೇರಳ ರಾಜ್ಯದಲ್ಲಿ ಕೋವಿಡ್ ಪಾಸಿಟಿವಿಟಿ ದರ ಹೆಚ್ಚಿನ ಪ್ರಮಾಣದಲ್ಲಿರುವ ಹಿನ್ನೆಲೆಯಲ್ಲಿ ಕೇರಳ ರಾಜ್ಯದಿಂದ ಕರ್ನಾಟಕಕ್ಕೆ ಆಗಮಿಸುವ ವಿದ್ಯಾರ್ಥಿಗಳು ಸೇರಿದಂತೆ ಎಲ್ಲರು ಒಂದು ವಾರ(ಏಳು ದಿನ) ಕಾಲ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯ ಮಾಡಲಾಗಿದೆ. ಏಳು ದಿನಗಳ ಬಳಿಕ ಅವರ ಗಂಟಲು ಮತ್ತು ಮೂಗಿನ ದ್ರವ ಸಂಗ್ರಹಿಸಿ ಪರೀಕ್ಷೆ ನಡೆಸಲಾಗುವುದು'
-ಆರ್.ಅಶೋಕ್, ಕಂದಾಯ ಸಚಿವ