ಬಿಜೆಪಿ ಸರಕಾರದಿಂದ ಜನರಿಗೆ 'ಸಾವಿನ ಭಾಗ್ಯ': ಕಾಂಗ್ರೆಸ್ ಲೇವಡಿ

Update: 2021-08-30 17:11 GMT

ಬೆಂಗಳೂರು, ಆ. 30: `ರಾಜ್ಯದ ಜನತೆಗೆ ಉತ್ತಮ ಬದುಕಿನ ಭರವಸೆ ನೀಡಲಾಗದ ಬಿಜೆಪಿ `ಉಚಿತ ಶವ ಸಂಸ್ಕಾರದ ಭರವಸೆ' ನೀಡುತ್ತಿದೆ! ಅಕ್ಕಿ ಕೇಳಿದವರಿಗೆ ಹೋಗಿ ಸಾಯ್ರಿ ಎಂದ ಬಿಜೆಪಿ ಸರಕಾರ ಜನರ ಸಾವನ್ನೇ ಬಯಸುತ್ತಿದೆ.
5 ಕೆಜಿ ಅಷ್ಟೇ ತಿನ್ನಿ ಎನ್ನುವ ಮೂಲಕ ಜನರ ಹಸಿವನ್ನು ಅಣಕಿಸುವ ಬಿಜೆಪಿ ಸರಕಾರ ಜನರಿಗೆ `ಸಾವಿನಭಾಗ್ಯ' ಕೊಡಲು ಮುಂದಾಗಿದೆ' ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

ಸೋಮವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, `ಕಾಂಗ್ರೆಸ್ ಜನರ ಬದುಕನ್ನು ಹಸನಾಗಿಸಲು ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್ ನೀಡಿತು. ಬಿಜೆಪಿ ಭರವಸೆಯ ಬದುಕು ನೀಡಲಾಗದೆ `ಉಚಿತ ಸಾವಿನ ಭಾಗ್ಯ ನೀಡುತ್ತಿದೆ!' ಉದ್ಯೋಗ, ಅಕ್ಕಿ ನೀಡಲಾಗದೆ, ಬೆಲೆ ಏರಿಕೆ ತಡೆಯದೆ, ವೈದ್ಯಕೀಯ ವ್ಯವಸ್ಥೆ ನಿರ್ಮಿಸದೆ, ರಕ್ಷಣೆ ನೀಡದೆ ಜನತೆಗೆ ಸಾವು ಒಂದೇ ದಾರಿ ಎನ್ನುತ್ತಿದೆ ಬಿಜೆಪಿ' ಎಂದು ವಾಗ್ದಾಳಿ ನಡೆಸಿದೆ.

`ಬೆಳಗಾವಿ ಜನತೆ ಬಿಜೆಪಿಯನ್ನ ಆಯ್ಕೆ ಮಾಡಿದರೂ ಬಿಜೆಪಿಯಿಂದ ಬೆಳಗಾವಿಗೆ ಸಿಕ್ಕ ಕೊಡುಗೆ ಶೂನ್ಯ. ಕೇಂದ್ರದಲ್ಲೂ ಬಿಜೆಪಿ, ರಾಜ್ಯದಲ್ಲೂ ಬಿಜೆಪಿ, ಸಂಸದರೂ ಬಿಜೆಪಿ, ಹಲವು ಶಾಸಕರೂ ಬಿಜೆಪಿ. ಹೀಗಿದ್ದೂ ಬೆಳಗಾವಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡದ ಬಿಜೆಪಿ ಬೆಳಗಾವಿ ಪಾಲಿಕೆ ಚುನಾವಣೆಯಲ್ಲಿ ಜನರ ಮತ ಕೇಳುವುದಕ್ಕೆ ನಾಚಿಕೆಯಾಗಬೇಕು!' ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

`ಕೇಂದ್ರದಲ್ಲೂ ಬಿಜೆಪಿ, ರಾಜ್ಯದಲ್ಲೂ ಬಿಜೆಪಿ ಹೀಗಿದ್ದೂ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ದ್ರೋಹ ಬಗೆದ ಬಿಜೆಪಿ ಕಲ್ಬುರ್ಗಿ ಮಹಾ ಪಾಲಿಕೆ ಚುನಾವಣೆಯಲ್ಲಿ ಯಾವ ಮುಖದೊಂದಿಗೆ ಮತ ಕೇಳುತ್ತದೆ?! ಕಾಂಗ್ರೆಸ್ ಮಂಜೂರು ಮಾಡಿದ್ದ ಹಲವು ಅಭಿವೃದ್ಧಿಪರ ಯೋಜನೆಗಳನ್ನು ಎತ್ತಂಗಡಿ ಮಾಡಿ ದ್ರೋಹ ಬಗೆದಿದ್ದೇ ಬಿಜೆಪಿ ಸಾಧನೆ' ಎಂದು ಕಾಂಗ್ರೆಸ್ ಟೀಕಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News