ಖಾತೆ ಬದಲಾವಣೆಗೆ ಲಂಚಕ್ಕೆ ಬೇಡಿಕೆ: ಕಂದಾಯ ಅಧಿಕಾರಿಗೆ 4 ವರ್ಷ ಜೈಲು

Update: 2021-08-30 17:18 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಆ.30: ಆಸ್ತಿಯ ಖಾತೆ ಬದಲಾವಣೆಗೆ ಬರೋಬ್ಬರಿ 2.50 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದ ಪ್ರಕರಣ ಸಂಬಂಧ ಬಿಬಿಎಂಪಿ ಸಹಾಯಕ ಕಂದಾಯ ಅಧಿಕಾರಿಯೊಬ್ಬರಿಗೆ  4 ವರ್ಷಗಳ ಕಾಲ ಸಜೆ ಹಾಗೂ 3 ಲಕ್ಷ ರೂ. ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ.

ನಗರದ 23ನೆ ಸಿಟಿಸಿವಿಲ್ ಮತ್ತು ಸತ್ರ ನ್ಯಾಯಾಲಯ ಈ ಆದೇಶ ಹೊರಡಿಸಿದ್ದು, ಇಲ್ಲಿನ ಮಹಾಲಕ್ಷ್ಮೀಪುರಂ ವಾರ್ಡ್ ಸಹಾಯಕ ಕಂದಾಯ ಅಧಿಕಾರಿ ಲಿಂಗಯ್ಯ ಎಂಬುವರು ಶಿಕ್ಷೆಗೆ ಗುರಿಯಾಗಿದ್ದಾರೆ.

ಸುಂಕದಕಟ್ಟೆ ಶ್ರೀಗಂಧ ಕಾವಲ್ ನಿವಾಸಿಯೊಬ್ಬರು 2017ನೆ ಸಾಲಿನ ಮಾರ್ಚ್‍ನಲ್ಲಿ ಅವರ ಸ್ನೇಹಿತರ ಸ್ವತ್ತಿನ ಖಾತೆ ಬದಲಾವಣೆ ಮಾಡುವ ಸಲುವಾಗಿ ಬಿಬಿಎಂಪಿ ಮಹಾಲಕ್ಷ್ಮೀಪುರಂ ವಾರ್ಡ್ ಸಹಾಯಕ ಕಂದಾಯಾಧಿಕಾರಿ ಕಚೇರಿಗೆ ಅರ್ಜಿ ಸಲ್ಲಿಸಿದ್ದರು.

ಆದರೆ, ಸ್ವತ್ತಿನ ಖಾತೆ ಬದಲಾವಣೆ ಮಾಡುವ ಸಲುವಾಗಿ ಸಹಾಯಕ ಕಂದಾಯ ಅಧಿಕಾರಿ ಲಿಂಗಯ್ಯ, 2.50 ಲಕ್ಷ ರೂ. ಲಂಚ ನೀಡುವಂತೆ ಬೇಡಿಕೆಯಿಟ್ಟಿದ್ದರು ಎಂದು ಆರೋಪಿಸಿ ದಾಖಲಾದ ದೂರಿನನ್ವಯ ಕಾರ್ಯಾಚರಣೆ ನಡೆಸಿದ ಎಸಿಬಿ ಅಧಿಕಾರಿಗಳು, ಪ್ರಕರಣ ಭೇದಿಸಿ ಆರೋಪಿ ಲಿಂಗಯ್ಯ ಹಣ ಪಡೆಯುವಾಗ ಸೆರೆ ಹಿಡಿದಿದ್ದರು.

ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಿ, ಆರೋಪಿತರ ವಿರುದ್ಧ ನಗರದ 23ನೆ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯಕ್ಕೆ 2017ನೆ ಸಾಲಿನಲ್ಲಿ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಲಾಗಿದ್ದು, ಇದಾದ ಬಳಿಕ ನ್ಯಾಯಾಲಯವು ವಿಚಾರಣೆ ನಡೆಸಿ, ವಾದ ಪ್ರತಿವಾದ ಆಲಿಸಿದ ಬಳಿಕ ಲಿಂಗಯ್ಯ ಅವರಿಗೆ 4 ವರ್ಷಗಳ ಕಾಲ ಸಜೆ ಹಾಗೂ 3 ಲಕ್ಷ ರೂ. ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ ಎಂದು ಎಸಿಬಿ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News