ಸಾಮೂಹಿಕ ಅತ್ಯಾಚಾರ ಪ್ರಕರಣ: ಸರಕಾರದ ವೈಫಲ್ಯವೇ ಕಾರಣ; ಮಾಜಿ ಸಿಎಂ ಕುಮಾರಸ್ವಾಮಿ ಆರೋಪ

Update: 2021-08-30 17:25 GMT

ಕಲಬುರಗಿ: `ಮೈಸೂರಿನ ವಿದ್ಯಾರ್ಥಿನಿಯ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸರಕಾರದ ವೈಫಲ್ಯವೇ ಕಾರಣ. ಈ ಹಿಂದೆಯೂ ಇಂತಹ ಅನೇಕ ಕೃತ್ಯಗಳಲ್ಲಿ ಪಾಲ್ಗೊಂಡಿರುವುದಾಗಿ ಆರೋಪಿಗಳೇ ಒಪ್ಪಿಕೊಂಡಿದ್ದು, ಈ ಕಿರಾತಕರು ಅದೆಷ್ಟು ಅಮಾಯಕ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿರಬಹುದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಮವಾರ ಕಲಬುರಗಿ ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, `ಬಿಜೆಪಿ ಬಗ್ಗೆ ಎಂದೂ ಸಾಫ್ಟ್ ಆಗುವ ಪ್ರಶ್ನೆಯೆ ಇಲ್ಲ. ಕೋವಿಡ್ ಸಾಂಕ್ರಾಮಿಕದ ಕಾರಣಕ್ಕೆ ಸರಕಾರಕ್ಕೆ ಸಹಕಾರ ನೀಡುವುದು ನನ್ನ ಜವಾಬ್ದಾರಿ. ಜನತೆ ಸಂಕಷ್ಟದಲ್ಲಿದ್ದ ಕಾರಣ ಆಡಳಿತಾರೂಢ ಸರಕಾರಕ್ಕೆ ಸಹಕಾರ ನೀಡಿದ್ದೇವೆ ಅಷ್ಟೇ. ಮೈಸೂರು ಮಹಾ ಪಾಲಿಕೆಯಲ್ಲಿ ನಾವು ಅವಕಾಶವಾದಿ ರಾಜಕಾರಣ ನಡೆಸಿಲ್ಲ' ಎಂದರು ಸ್ಪಷ್ಟಪಡಿಸಿದರು.

ಮೈಸೂರಿನಲ್ಲಿ ಕಾಂಗ್ರೆಸ್ ಪಕ್ಷ ಮೈತ್ರಿಗೆ ಸಿದ್ಧವಿರಲಿಲ್ಲ. ನಮ್ಮ ಅಭ್ಯರ್ಥಿಯನ್ನ ಕಣಕ್ಕಿಳಿಸಿ ಬೆಂಬಲಿಸಿದ್ದೇವೆ ಅಷ್ಟೇ ಎಂದು ವಿವರಣೆ ನೀಡಿದ ಕುಮಾರಸ್ವಾಮಿ, ಕಲಬುರಗಿ ಮಹಾ ಪಾಲಿಕೆ ಚುನಾವಣೆಯಲ್ಲಿ 42 ಅಭ್ಯರ್ಥಿಗಳು ಜೆಡಿಎಸ್ ಪಕ್ಷದಿಂದ ಕಣದಲ್ಲಿದ್ದಾರೆ. ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ಭರಾಟೆಯ ಪ್ರಚಾರದಲ್ಲಿ ತೊಡಗಿವೆ. ಈ ಚುನಾವಣೆ ಮುಖಾಂತರ ಕಲಬುರಗಿಯಲ್ಲಿ ಜೆಡಿಎಸ್ ಅಧಿಕಾರ ಹಿಡಿಯಲಿದೆ' ಎಂದು ಕುಮಾರಸ್ವಾಮಿ ಭರವಸೆ ವ್ಯಕ್ತಪಡಿಸಿದರು.

`ನಾನು ಸಿಎಂ ಆಗಿದ್ದಾಗ ಉತ್ತರ ಕರ್ನಾಟಕದ ನೀರಿನ ಸಮಸ್ಯೆಯನ್ನ ಬಗೆಹರಿಸಿದ್ದೇನೆ. ಪ್ರವಾಹದಿಂದ ತತ್ತರಿಸಿದ ಜನರಿಗೆ ಇದುವರೆಗೆ ಸೂಕ್ತ ಪರಿಹಾರ ಸಿಕ್ಕಿಲ್ಲ. ಕಾಂಗ್ರೆಸ್‍ನವರು ಪ್ರತಿದಿನ ಭ್ರಷ್ಟಾಚಾರದ ಬಗ್ಗೆನೆ ಚರ್ಚಿಸುತ್ತಾರೆ. ಆದರೆ, ಅವರ ಅಧಿಕಾರದ ಅವಧಿಯಲ್ಲೇ ಸಾಕಷ್ಟು ಭ್ರಷ್ಟಾಚಾರ ಆಗಿದೆ. ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಸ್ವತಂತ್ರವಾಗಿ ಅಧಿಕಾರಕ್ಕೆ ತರುತ್ತೇವೆ ಎಂದು ಕುಮಾರಸ್ವಾಮಿ ನುಡಿದರು.

ಕಾರ್ಯಕರ್ತರನ್ನು ಅವಮಾನಿಸುವುದಿಲ್ಲ: ಪಕ್ಷದ ಕಾರ್ಯಕರ್ತರು ಸರಿಯಿಲ್ಲ ಎಂಬ ಮಾತನ್ನ ನಾನು ಎಲ್ಲೂ ಹೇಳಿಲ್ಲ. ಆದರೆ, ಕೆಲ ಮಾಧ್ಯಮಗಳಲ್ಲಿ ನನ್ನ ಹೇಳಿಕೆ ತಿರುಚಲಾಗಿದೆ. ಪಕ್ಷಕ್ಕಾಗಿ ದುಡಿಯುವ ಕಾರ್ಯಕರ್ತರನ್ನು ಗುರುತಿಸುವ ಕೆಲಸ ಜೆಡಿಎಸ್‍ನಲ್ಲಿ ಮಾತ್ರವಿದೆ. ಮಾಜಿ ಸಚಿವ ಜಿ.ಟಿ ದೇವೇಗೌಡ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಅವರೇ ಹೇಳಿಕೊಂಡಿದ್ದಾರೆ. ನಾನು ಯಾರನ್ನು ಹೋಗಿ ಎಂದು ಹೇಳಲ್ಲ, ಹೇಳುವುದು ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News