ತೆಲಂಗಾಣ: ಪ್ರವಾಹಕ್ಕೆ ನವವಿವಾಹಿತ ವಧು, ಟೆಕ್ಕಿ ಸೇರಿ ಕನಿಷ್ಠ 7 ಮಂದಿ ಬಲಿ

Update: 2021-08-31 07:41 GMT
ಸಾಂದರ್ಭಿಕ ಚಿತ್ರ

ಹೈದರಾಬಾದ್: ತೆಲಂಗಾಣದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಿಂದ ಉಂಟಾದ ಪ್ರವಾಹದಲ್ಲಿ ನವವಿವಾಹಿತ ವಧು, ಟೆಕ್ಕಿ ಸೇರಿದಂತೆ ಕನಿಷ್ಠ ಏಳು ಜನರು ಕೊಚ್ಚಿಕೊಂಡು ಹೋಗಿದ್ದಾರೆ ಎಂದು ವರದಿಯಾಗಿದೆ.

ವಿಕಾರಾಬಾದಿನಲ್ಲಿ ನವವಿವಾಹಿತರಾದ ಪ್ರವಳಿಕಾ ಹಾಗೂ  ನವಾಝ್ ರೆಡ್ಡಿ ಅವರು ವಿವಾಹದ ನಂತರದ ಸಮಾರಂಭದಲ್ಲಿ ಭಾಗವಹಿಸಿ  ಇತರ ನಾಲ್ವರೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ, ನವ ವಧು, ಆಕೆಯ ನಾದಿನಿ ಸೆ ಶ್ವೇತಾ ಹಾಗೂ  ಆಕೆಯ ಮಗ ತ್ರಿನಾಥ ರೆಡ್ಡಿ (8) ಕೊಚ್ಚಿಕೊಂಡು ಹೋದರು. ಹುಡುಗ ಇನ್ನೂ ಪತ್ತೆಯಾಗಿಲ್ಲ.

ಭಾರೀ ಮಳೆಯ ನಂತರ, ಸಾಫ್ಟ್ ವೇರ್ ಇಂಜಿನಿಯರ್ ನ ಶವ ರವಿವಾರ ರಾತ್ರಿ ವಾರಂಗಲ್ ನ ಚರಂಡಿಯಲ್ಲಿ ತೇಲುತ್ತಿರುವುದು ಪತ್ತೆಯಾಗಿದೆ. ಅವರನ್ನು ಶಿವನಗರದ ವೊರೊಮ್ ಕ್ರಾಂತಿ ಕುಮಾರ್ ಎಂದು ಗುರುತಿಸಲಾಗಿದೆ. ಲ್ಯಾಪ್‌ಟಾಪ್ ಅನ್ನು ಸಹ ಮರುಪಡೆಯಲಾಗಿದೆ.

ಶಂಕರಪಲ್ಲಿಯಲ್ಲಿ ಕಾರಿನಲ್ಲಿದ್ದ 70 ವರ್ಷದ ವೃದ್ಧರು ಕೊಚ್ಚಿಕೊಂಡು ಹೋದ ಬಗ್ಗೆ ವರದಿಯಾಗಿದೆ. ಆದಿಲಾಬಾದ್‌ನಲ್ಲಿ 30 ವರ್ಷದ ಕಾರ್ಮಿಕ ಕೂಡ ಕೊಚ್ಚಿ ಹೋಗಿದ್ದಾನೆ.

ಯಾದಾದ್ರಿ ಭೋಂಗೀರ್ ಜಿಲ್ಲೆಯಲ್ಲಿ ಇಬ್ಬರು ಯುವತಿಯರು ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಕೊಚ್ಚಿಕೊಂಡು ಹೋಗಿದ್ದಾರೆ.

ರಾಜಣ್ಣ-ಸಿರ್ಸಿಲ್ಲಾ ಜಿಲ್ಲೆಯಲ್ಲಿ ಹರಿಯುವ ನೀರಿನಲ್ಲಿ ವಾಹನ ಸಿಲುಕಿಕೊಂಡಿದ್ದರಿಂದ ರಾಜ್ಯ ಸಾರಿಗೆ ಬಸ್ಸಿನಲ್ಲಿದ್ದ 12 ಪ್ರಯಾಣಿಕರನ್ನು ರಕ್ಷಿಸಲಾಗಿದೆ.

ನೈಋತ್ಯ ಮುಂಗಾರು ಚುರುಕಾಗಿರುವುದರಿಂದ ವಿಕಾರಾಬಾದ್, ರಂಗ ರೆಡ್ಡಿ ಹಾಗೂ  ಸಿದ್ದಿಪೇಟೆಯಲ್ಲಿ ಭಾರೀ ಮಳೆಯಾಗಿದೆ.

ಹವಾಮಾನ ಇಲಾಖೆ ಹೈದರಾಬಾದ್, ಆದಿಲಾಬಾದ್, ನಿಝಾಮಾಬಾದ್, ಕರೀಂನಗರ, ವಾರಂಗಲ್ ಹಾಗೂ  ಖಮ್ಮಂನಲ್ಲಿ ಭಾರೀ ಮಳೆ ಮತ್ತು ಗುಡುಗು ಸಹಿತ ಎಚ್ಚರಿಕೆ ನೀಡಿದೆ.

.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News