ಮದರಸಾಗಳಲ್ಲಿ ತಾಲಿಬಾನಿಗಳು ಸೃಷ್ಟಿಯಾಗುತ್ತಾರೆ: ಸಿ.ಟಿ.ರವಿ

Update: 2021-08-31 18:02 GMT

ಕಲಬುರ್ಗಿ, ಆ.31: ದೇಶದ ಮದರಸಾಗಳಲ್ಲಿ ತಾಲಿಬಾನಿಗಳು ಸೃಷ್ಟಿಯಾಗುತ್ತಿದ್ದು, ಇದರಿಂದ ಮತ್ತಷ್ಟು ಪಾಕಿಸ್ತಾನಗಳು ಹುಟ್ಟಿಕೊಳ್ಳುವ ಸಾಧ್ಯತೆ ಇದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಿವಾದಿತ ಹೇಳಿಕೆ ನೀಡಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಓಲೈಕೆ ರಾಜಕಾರಣದಿಂದಲೇ ರಾಷ್ಟ್ರದ ಮದರಸಾಗಳಲ್ಲಿ ತಾಲಿಬಾನಿಗಳು ಸೃಷ್ಟಿಯಾಗುತ್ತಿದ್ದಾರೆ. ಅಲ್ಲದೆ, ತಾಲಿಬಾನಿಗಳು ಯಾವ ಗ್ರಂಥವನ್ನು ಓದಿ ಭಯೋತ್ಪಾದಕ ಕೃತ್ಯಕ್ಕಿಳಿದಿದ್ದಾರೆ ಎಂಬುದನ್ನು ನೋಡಿದರೆ ಆ ಗ್ರಂಥದ ದುಷ್ಟ ಪ್ರೇರಣೆ ಏನು ಎಂಬುದು ಅರ್ಥವಾಗುತ್ತದೆ ಎಂದರು.

ಹಿಂದುತ್ವದ ರಾಜಕಾರಣ ದೇಶದಲ್ಲಿ ಇರುವವರೆಗೂ ಬುದ್ಧ, ಬಸವಣ್ಣನವರ ಚಿಂತನೆಗಳು, ಅಂಬೇಡ್ಕರ್ ಅವರ ವಾರಸುದಾರಿಕೆ ಉಳಿಯುತ್ತದೆ. ಇನ್ನು, ಎಲ್ಲಿಯವರೆಗೆ ಹಿಂದುತ್ವ ಆಧರಿತ ರಾಜಕಾರಣ ಅಧಿಕಾರದಲ್ಲಿರುತ್ತದೋ ಅಲ್ಲಿಯವರೆಗೆ ದೇಶದಲ್ಲಿ ಕೆಲವೇ ಲಕ್ಷದಷ್ಟಿರುವ ಪಾರ್ಸಿಗಳು, ಯಹೂದಿಗಳಂಥವರು ನೆಮ್ಮದಿಯಿಂದ ಇರುತ್ತಾರೆ ಎಂದು ತಿಳಿಸಿದರು.

ನಮ್ಮ ಮೂಲ ನಂಬಿಕೆಯಲ್ಲಿಯೇ ಸಮಭಾವವಿದೆ. ಸಮಭಾವ ಹೊಂದಿದ ಜನ ಇದ್ದಾಗ ಮಾತ್ರ ಸಮಾನತೆ, ಮಹಿಳಾ ಸ್ವಾತಂತ್ರ್ಯ ಇರುತ್ತದೆ. ಇಲ್ಲದಿದ್ದರೆ ಅಫ್ಘಾನಿಸ್ತಾನದ ಸ್ಥಿತಿ ನಮಗೂ ಬರುತ್ತದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News