ಕನ್ನಡ ಭಾಷೆಯ ಕಡೆಗಣನೆ: ಸೂಕ್ತ ವಿವರಣೆ ನೀಡಲು ಬೆಂಗಳೂರು ಮೆಟ್ರೋಗೆ ಸಚಿವರಿಂದ ನೋಟಿಸ್

Update: 2021-09-01 11:44 GMT

ಬೆಂಗಳೂರು, ಸೆ.1: ಇತ್ತೀಚೆಗೆ ನಡೆದ ಮೆಟ್ರೋ ಉದ್ಘಾಟನಾ ಸಮಾರಂಭದಲ್ಲಿ ಕನ್ನಡ ಭಾಷೆಯನ್ನು ಕಡೆಗಣಿಸಿದ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಸುನೀಲ್ ಕುಮಾರ್ ಅವರು ಬೆಂಗಳೂರು ಮೆಟ್ರೋಗೆ ನೋಟಿಸ್ ನೀಡಿದ್ದಾರೆ.

ಆ.29ರಂದು ನಾಯಂಡಹಳ್ಳಿ–ಕೆಂಗೇರಿ ನಡುವಿನ ಮೆಟ್ರೋ ರೈಲು ಸಂಚಾರದ ಉದ್ಘಾಟನಾ ಸಮಾರಂಭದ ಮುಖ್ಯ ವೇದಿಕೆಯ ಫಲಕಗಳಲ್ಲಿ ಹಾಗೂ ಹಿಂಬದಿಯ ಪರದೆಯಲ್ಲಿ ಕನ್ನಡ ಭಾಷೆಯನ್ನು ಬಳಸದಿರುವುದು ನಿಜಕ್ಕೂ ಗಂಭೀರವಾದ ಸಂಗತಿಯಾಗಿದೆ, ರಾಜ್ಯ ರಾಜಧಾನಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ರಾಜ್ಯದ ಅಧಿಕೃತ ಆಡಳಿತ ಭಾಷೆಯನ್ನು ಕಡೆಗಣಿಸಿದ್ದು ಗಂಭೀರವಾದ ಲೋಪವಾಗಿದೆ ಎಂದಿದ್ದಾರೆ.

ಈಗಾಗಲೇ ಆಡಳಿತ ಭಾಷೆಯಾಗಿ ಕನ್ನಡ ಬಳಕೆಯನ್ನು ಕಡ್ಡಾಯಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದ್ದರೂ ಇಂತಹ ಕರ್ತವ್ಯ ಲೋಪವಾಗಿರುವುದು ದುರದೃಷ್ಟಕರ. ಈ ಬಗ್ಗೆ ಗಮನಹರಿಸುವುದು ನಿಮ್ಮ ಹಾಗೂ ನಮ್ಮ ಅಧೀನದಲ್ಲಿರುವ ಅಧಿಕಾರಿಗಳ ಕರ್ತವ್ಯವಾಗಿದೆ. 

ಆದರೂ ಈ ವಿಚಾರದಲ್ಲಿ ನಿರ್ಲಕ್ಷ್ಯ ತೋರಿರುವುದನ್ನು ಸಹಿಸಲಾಗದು, ಭಾಷೆ ಒಂದು ಭಾವನಾತ್ಮಕ ವಿಚಾರ, ಅದರಲ್ಲಿಯೂ ಆಡಳಿತ ಭಾಷೆಯ ಬಗ್ಗೆ ನಿರ್ಲಕ್ಷ್ಯ ತೋರಿದ್ದೇ ಆದರೆ ಅದು ಜನತೆಗೆ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ. ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಬೆಳೆಸಬೇಕಾದ ಸರಕಾರದ ಇಲಾಖೆಗಳು ಈ ರೀತಿಯ ಲೋಪವೆಸಗುವುದು ಗಂಭೀರ ಕರ್ತವ್ಯಲೋಪವೆಂದು ಪರಿಗಣಿಸಲ್ಪಡುತ್ತದೆ.

ಆದುದರಿಂದ ಇದಕ್ಕೆ ಕಾರಣರಾದ ಅಧಿಕಾರಿಗಳ ಮೇಲೆ ಕೂಡಲೇ ಶಿಸ್ತು ಕ್ರಮ ಕೈಗೊಳ್ಳಬೇಕು ಹಾಗೂ ಸೂಕ್ತ ವಿವರಣೆಯನ್ನು ನೀಡಬೇಕೆಂದು ಬೆಂಗಳೂರು ಮೆಟ್ರೋಗೆ ಸಚಿವರು ನೋಟಿಸ್ ಜಾರಿಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News