ಜಿ.ಟಿ.ದೇವೇಗೌಡ ಜೆಡಿಎಸ್ ಪಕ್ಷ ತೊರೆದಲ್ಲಿ ಭಾರೀ ನಷ್ಟವಾಗಲಿದೆ: ವೈಎಸ್‍ವಿ ದತ್ತ

Update: 2021-09-01 12:12 GMT

ಚಿಕ್ಕಮಗಳೂರು, ಸೆ.1: ಶಾಸಕ ಜಿ.ಟಿ.ದೇವೇಗೌಡ ಅವರು ಜೆಡಿಎಸ್ ಪಕ್ಷದ ಶಕ್ತಿ. ಅವರು ಪಕ್ಷ ತೊರೆದು ಕಾಂಗ್ರೆಸ್‍ಗೆ ಹೋದಲ್ಲಿ ಪಕ್ಷಕ್ಕೆ ಭಾರೀ ನಷ್ಟವಾಗಲಿದೆ ಎಂದು ಕಡೂರು ಕ್ಷೇತ್ರದ ಮಾಜಿ ಶಾಸಕ ವೈಎಸ್‍ವಿ ದತ್ತ ಹೇಳಿದರು.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿ.ಟಿ.ದೇವೇಗೌಡ ಅವರಿಗೆ ಪಕ್ಷ ಸೂಕ್ತ ಆಧ್ಯತೆ, ಗೌರವ ನೀಡಿಲ್ಲ ಎಂಬ ಆರೋಪವಿದೆ. ಹಾಗೆ ಆಗಿದ್ದರೇ ಅದು ಖಂಡಿತಾ ತಪ್ಪು. ಪಕ್ಷದ ಹಿರಿಯ ನಾಯಕರು ಮತ್ತು ಸಂಘಟನಾ ಶಕ್ತಿಯಾಗಿರುವ ಅವರು ಜನತಾ ಪರಿವಾರದಿಂದ ಬಂದವರು. ಅವರ ಮನಸ್ಸಿಗೆ ನೋವಾಗಿರಬಹುದು. ಈ ಕಾರಣಕ್ಕೆ ಅವರು ಪಕ್ಷ ತೊರೆಯುವ ಮಾತನಾಡಿರಬಹುದು ಎಂದರು.

ಜಿ.ಟಿ.ದೇವೇಗೌಡ ಅವರನ್ನು ಕಡೆಗಣಿಸಿ ಮತ್ಯಾರಿಗೋ ಆದ್ಯತೆ ನೀಡಿ ವೈಭವೀಕರಿಸಿದ್ದರಿಂದ ಅವರ ಮನಸ್ಸಿಗೆ ನೋವಾಗಿರಬಹುದು. ಬೇರೆ ಪಕ್ಷಕ್ಕೆ ಜಿ.ಟಿ.ದೇವೇಗೌಡ ಅವರನ್ನು ಹೋಗಲು ಬಿಡಬಾರದು, ಹಿರಿಯರಾದ ಎಚ್.ಡಿ.ದೇವೇಗೌಡ ಅವರು ಜಿಟಿಡಿ ಅವರನ್ನು ಕರೆಸಿ ಮಾತನಾಡಬೇಕು. ಅವರ ಮನಸ್ಸಿನ ಭಾವನೆಯನ್ನು ಅರ್ಥ ಮಾಡಿಕೊಂಡು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಬೇಕು. ಮೂಲ ಜನತಾ ಪರಿವಾರದಿಂದ ಬಂದ ಅವರನ್ನು ವರಿಷ್ಠರು ಜೆಡಿಎಸ್ ಪಕ್ಷದಲ್ಲೇ ಉಳಿಸಿಕೊಳ್ಳುತ್ತಾರೆಂಬ ನಂಬಿಕೆ ಇದೆ ಎಂದರು.

ವೈಎಸ್‍ವಿ ದತ್ತ ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಾರೆಂಬ ವದಂತಿಗೆ ಪ್ರತಿಕ್ರಿಯಿಸಿದ ಅವರು, ಜೆಡಿಎಸ್ ಪಕ್ಷ ಬಿಜೆಪಿ ಜೊತೆ ಹತ್ತಿರವಾದರೆ ನಮ್ಮಂತವರಿಗೆ ಕಷ್ಟವಾಗುತ್ತದೆ. ಅಲ್ಪ ಸಂಖ್ಯಾತರ ಒಡನಾಟ ಹೊಂದಿ ಅವರನ್ನೇ ನೆಚ್ಚಿಕೊಂಡಿರುವ ನಮ್ಮಂಥವರಿಗೆ ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಿಸಿದ ಅವರು, ನಾವು ಕೋಮುವಾದಿ ಶಕ್ತಿಗಳನ್ನು ವಿರೋಧಿಸಿ ಜ್ಯಾತ್ಯತೀತ ನಿಲುವಿಗೆ ಕಟ್ಟಿಬದ್ಧರಾಗಿರುವವರು. ಪಕ್ಷದ ನಿಲುವು ಎಲ್ಲಿವರೆಗೂ ಸ್ಪಷ್ಟವಾಗಿರುತ್ತದೋ ಅಲ್ಲಿಯವರೆಗೂ ಪಕ್ಷ ತೊರೆಯುವ ಮಾತಿಲ್ಲ. ಜೆಡಿಎಸ್ ಪಕ್ಷ ಎಲ್ಲಿಯವರಗೆ ಸಾಮಾಜಿಕ ನ್ಯಾಯ, ಜಾತ್ಯತೀತ ತತ್ವಕ್ಕೆ ಬದ್ಧವಾಗಿರುತ್ತದೋ ಅಲ್ಲಿಯವರೆಗೂ ನಾನು ಜೆಡಿಎಸ್‍ನಲ್ಲೇ ಇರುತ್ತೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News