ಡಬಲ್ ಇಂಜಿನ್ ಸರಕಾರ ಸ್ಮಶಾನದ ಹೆಣವಿದ್ದಂತೆ: ದಿನೇಶ್ ಗುಂಡೂರಾವ್ ಟೀಕೆ

Update: 2021-09-01 13:01 GMT

ಬೆಂಗಳೂರು, ಸೆ. 1: `ದೇಶದ ಜನರನ್ನು ಆರ್ಥಿಕವಾಗಿ ದಿವಾಳಿ ಮಾಡಿದ್ದೇ `ಡಬಲ್ ಇಂಜಿನ್' ಸರಕಾರದ ದೊಡ್ಡ ಸಾಧನೆ. ಜನರನ್ನು ತೆರಿಗೆ ವಿಷವರ್ತುಲಕ್ಕೆ ತಳ್ಳಿರುವ ಡಬಲ್ ಇಂಜಿನ್ ಸರಕಾರ, ರಕ್ತ ಹೀರುವ ತಿಗಣೆಯಂತೆ ತೆರಿಗೆ ಹೀರುತ್ತಿದೆ. ದೇಶದ ಜನರಿಗೆ ದರಿದ್ರಭಾಗ್ಯ ಕಲ್ಪಿಸಿದ ಈ ಡಬಲ್ ಇಂಜಿನ್ ಸರಕಾರ ಒಂದು ರೀತಿ ಸ್ಮಶಾನದ ಹೆಣವಿದ್ದಂತೆ' ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.

ಬುಧವಾರ ಸರಣಿ ಟ್ವೀಟ್ ಮಾಡಿರುವ ಅವರು, `ದೇಶದ ಜನ ಮೋದಿಯವರು ಹೇಳುತ್ತಿದ್ದ `ಅಚ್ಛೇದಿನ್' ಪದವನ್ನು ತಪ್ಪಾಗಿ ಅರ್ಥೈಸಿಕೊಂಡು ಬಿಜೆಪಿಗೆ ಅಧಿಕಾರ ನೀಡಿದ್ದರು. ಈಗ ಅದೇ ಜನ ಕೇಂದ್ರ ಸರಕಾರದ ತೆರಿಗೆ ದರೋಡೆ ಕಂಡು, ಅಚ್ಛೇದಿನ್ ಎಂದರೆ ಕನಸಿನಲ್ಲೂ ಬೆಚ್ಚುವಂತಾಗಿದೆ. ಮೋದಿಯವರಿಗೆ ಅಧಿಕಾರ ಕೊಟ್ಟು, `ಹರುಷದ ಕೂಳಿಗಾಗಿ, ವರುಷದ ಕೂಳು ಕಳೆದುಕೊಂಡಂತಾಗಿದೆ ದೇಶದ ಜನರ ಪರಿಸ್ಥಿತಿ' ಎಂದು ಲೇವಡಿ ಮಾಡಿದ್ದಾರೆ.

`ಕೇಂದ್ರ ಸರಕಾರ ಕಾರ್ಪೊರೇಟ್ ತೆರಿಗೆಗಳನ್ನು ಇಳಿಸಿ, ಆ ಭಾರವನ್ನು ಜನಸಾಮಾನ್ಯರ ಮೇಲೆ ಹೊರಿಸುತ್ತಿದೆ. ಕಾರ್ಪೊರೇಟ್ ಮಿತ್ರ-ಜನಸಾಮಾನ್ಯನ ಶತ್ರುವಾಗಿರುವ ಈ ಕೇಂದ್ರ ಸರಕಾರ ದೇಶದ ಪಾಲಿಗೆ ಹೆಗಲೇರಿದ ಶನಿಯಂತೆ. ಜನರನ್ನು ತೆರಿಗೆ ಮೂಲಕ ಹುರಿದು ಮುಕ್ಕುತ್ತಿರುವ ಮೋದಿ ಸರಕಾರಕ್ಕೆ ಜನರ ಹಿತಕ್ಕಿಂತ ಕಾರ್ಪೊರೇಟ್ ಕುಳಗಳ ಹಿತವೇ ಮುಖ್ಯವಾಗಿದೆ' ಎಂದು ದಿನೇಶ್ ಗುಂಡೂರಾವ್ ಇದೇ ಸಂದರ್ಭದಲ್ಲಿ ವಾಗ್ದಾಳಿ ನಡೆಸಿದ್ದಾರೆ.

`ಬೆಲೆಯೇರಿಕೆ ದೇಶದ ಜನರಿಗೆ ಮೋದಿ ಸರಕಾರ ಕೊಟ್ಟ ಶಾಪ. ಎರಡು ವರ್ಷದ ಅವಧಿಯಲ್ಲಿ ಕೆಲ ಅಗತ್ಯ ವಸ್ತುಗಳ ಬೆಲೆ ಶೇ.200ರಷ್ಟು ಏರಿಕೆಯಾಗಿದೆ. ಆದರೆ, ಜನರ ಆದಾಯ ಮೊದಲಿಗಿಂತ ಕಡಿಮೆಯಾಗಿದೆ. ಮೋದಿಯವರ ದುಬಾರಿ ದುನಿಯಾದಲ್ಲಿ ಅವರ ಕಾರ್ಪೊರೇಟ್ ಸ್ನೇಹಿತರು ಮಾತ್ರ ಬದುಕಬಹುದು. ಆದರೆ, ಜನಸಾಮಾನ್ಯನ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿ ಎಂದು ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News